ADVERTISEMENT

ನಿಡಗುಂದಿ: ಮನೆಗೆ ಹೊಕ್ಕಿತು ಮಳೆನೀರು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 4:45 IST
Last Updated 16 ಸೆಪ್ಟೆಂಬರ್ 2011, 4:45 IST

ಆಲಮಟ್ಟಿ: ಆಲಮಟ್ಟಿ, ನಿಡಗುಂದಿ ಸುತ್ತಮುತ್ತಲಿನ ಗ್ರಾಮದೊಳಗೆ ಸುರಿದ ಭಾರಿ ಮಳೆಗೆ ನಿಡಗುಂದಿ ಪಟ್ಟಣದ ಅನೇಕ ಮನೆಗಳಿಗೆ ನೀರು ಹೊಕ್ಕಿದ್ದು, ಜನ ರಾತ್ರಿಯೆಲ್ಲಾ ಜಾಗರಣೆ ಮಾಡುವಂತಾಯಿತು.
ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಮಳೆ ನೀರು ಮನೆಗಳ ಒಳಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ.

ಸುಮಾರು 20 ಕ್ಕೂ ಹೆಚ್ಚು ಮನೆಗಳಲ್ಲಿ ನೀರು ಹೊಕ್ಕಿದ್ದು, ಅಲ್ಲಿದ್ದ ವಸ್ತುಗಳೆಲ್ಲಾ ನೀರಿನಲ್ಲಿ ತೊಯ್ದಿವೆ.
 ನಿಡಗುಂದಿ ಕಾಲೇಜು ರಸ್ತೆಯ ಪಕ್ಕದ ಕರಬಾ ನಗರದಲ್ಲಿನ ಭೋವಿ ಸಮಾಜದ ಹಾಗೂ ಕೆಲ ಹಿಂದುಳಿದ ವರ್ಗಗಳ ಮನೆಯಲ್ಲಿ ನೀರು ಹೊಕ್ಕಿದೆ. ಬುಧವಾರ ರಾತ್ರಿಯಿಂದ ಗುರುವಾರದ ಬೆಳಿಗ್ಗೆವರೆಗೂ ಈ ಬಡಾವಣೆಯ ಜನ ಮಳೆ ನೀರಿನಲ್ಲಿಯೇ ಕಾಲ ಕಳೆಯುವಂತಾಯಿತು.
 
ರಾತ್ರಿಯಿಡಿ ನೀರನ್ನು ಮನೆಯಿಂದ ಹೊರಕ್ಕೆ ಹಾಕುವುದೇ ಅವರ ಕೆಲಸವಾಗಿತ್ತು. ಇದರಿಂದ ರೊಚ್ಚಿಗೆದ್ದ ಕೆಲವರು ಬುಧವಾರ ಮಧ್ಯರಾತ್ರಿಯೇ, ನೀರು ಮನೆಯೊಳಗೆ ಹೋಗಲು  ಕಂಪೌಂಡ್ ಗೋಡೆಯೊಂದು ಅಡ್ಡ ಇದೆ ಎಂದು ಆರೋಪಿಸಿ ಅದನ್ನು ಒಡೆದು ಹಾಕಿದರು.
 
ಅದು ಇಲ್ಲಿಯ ಪ್ರಮುಖ ಸಮಾಜ ಒಂದಕ್ಕೆ ಸೇರಿದ ಜಾಗದಲ್ಲಿ ಸಮಾಜ ವತಿಯಿಂದ ನಿರ್ಮಿಸಿದ್ದ ಕಂಪೌಂಡ್ ಆಗಿದ್ದು, ಬೆಳಿಗ್ಗೆ ಆ ಎರಡೂ ಸಮಾಜದ ಯುವಕರ ಮಧ್ಯೆ ಗಲಾಟೆಯೂ ಜರುಗಿತು.

ಮಧ್ಯ ಪ್ರವೇಶಿಸಿದ ಗ್ರಾ.ಪಂ. ಆಡಳಿತ ಹಾಗೂ ನಿಡಗುಂದಿ ಪೊಲೀಸ್ ಇಲಾಖೆ ಇಬ್ಬರೂ ಸಮಾಜದ ಮುಖಂಡರನ್ನು ಕರೆಯಿಸಿ ರಾಜಿ ಪಂಚಾಯತಿ ಮಾಡಿಸಿ, ಸಮರ್ಪಕವಾಗಿದ್ದರೇ ಅಲ್ಲಿ ಕಂಪೌಂಡ್‌ನ್ನು ಗ್ರಾ.ಪಂ. ವತಿಯಿಂದ ಕಟ್ಟಲಾಗುವುದು ಎಂಬ ಭರವಸೆ ಮೇರೆಗೆ ಸಮಸ್ಯೆ ಬಗೆಹರಿಸಲಾಯಿತು.

ಭೋವಿ ಸಮಾಜದವರ ಮನೆಗಳಿಗೂ ನೀರು ಹೊಕ್ಕಿದ್ದು, ಅಲ್ಲಿ ನೀರು ಹೊರಕ್ಕೆ ಹೋಗಲು ನಿಡಗುಂದಿ ಪಟ್ಟಣದ ಕಾಲೇಜು ರಸ್ತೆಗುಂಟ ಆಕ್ರಮಿತ ಕಟ್ಟಡಗಳು ಅಡ್ಡಿ ಬರುತ್ತಿವೆ. ಅದಕ್ಕೆ ಗ್ರಾ.ಪಂ. ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜನತೆ ಆಗ್ರಹಿಸಿದರು.

ಆಲಮಟ್ಟಿ ಸುತ್ತಮುತ್ತ ಭಾರಿ ಮಳೆ
ಬುಧವಾರ ಸಂಜೆಯಿಂದ ಏಕಾಏಕಿ ಮಳೆ ಸುರಿದು ತೀವ್ರ ತೊಂದರೆ ಉಂಟು ಮಾಡಿದೆ. ಆದರೇ ರೈತರಲ್ಲಿ ಹರ್ಷ ಮೂಡಿಸಿದೆ. ಆಲಮಟ್ಟಿ ಯಲ್ಲಿ 16.8 ಮೀ.ಮೀ. ಆರೇಶಂಕರದಲ್ಲಿ 46.4 ಮೀ.ಮೀ. ಹೂವಿನಹಿಪ್ಪರಗಿಯಲ್ಲಿ 45.6 ಮೀ.ಮೀ. ಮಳೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.