ADVERTISEMENT

ನೇತ್ರದಾನಿಗಳ ಸಂಖ್ಯೆ ಹೆಚ್ಚಳ: ಶ್ರಿಪ್ರಕಾಶ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 6:15 IST
Last Updated 3 ಸೆಪ್ಟೆಂಬರ್ 2011, 6:15 IST

ಬಾಗಲಕೋಟೆ: ವರನಟ ಡಾ. ರಾಜ್‌ಕುಮಾರ್ ಅವರು ನೇತ್ರದಾನ ಮಾಡಿದ ಬಳಿಕ ಅವರಿಂದ ರಾಜ್ಯದ ಜನತೆ ಪ್ರೇರಿತರಾಗಿ ನಿರೀಕ್ಷೆಗೂ ಮೀರಿ ನೇತ್ರದಾನ ಮಾಡುತ್ತಿದ್ದಾರೆ ಎಂದು ಬೆಂಗಳೂರಿನ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಸ್. ಶ್ರೀಪ್ರಕಾಶ್ ಹೇಳಿದರು.

ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಮತ್ತು  ಹಾನಗಲ್ ಶ್ರಿಕುಮಾರೇಶ್ವರ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಬಿವಿವಿ ನೇತ್ರಭಂಡಾರ ಮತ್ತು ಪಾರದರ್ಶಕ ಪಟಲ ಜೋಡಣಾ ಕೇಂದ್ರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಶಕಗಳ ಹಿಂದೆ ಶ್ರಿಲಂಕಾದ ನೇತ್ರದಾನಿಗಳಿಂದ ಕಣ್ಣಿನ ಗುಡ್ಡೆಯನ್ನು ತರಿಸಿಕೊಂಡು ದೇಶದಲ್ಲಿ ಅಂಧತ್ವ ನಿವಾರಣೆಗೆ ಶ್ರಮಿಸಲಾಗುತ್ತಿತ್ತು, ಆದರೆ ರಾಜ್‌ಕುಮಾರ್ ನೇತ್ರದಾನ ಮಾಡಿದ ಪರಿಣಾಮ ಜನರಲ್ಲಿ ಜಾಗೃತಿ ಹೆಚ್ಚಾಗಿದೆ ಎಂದರು.

ಜಗತ್ತಿನಲ್ಲಿ ಇಂದು 158 ಮಿಲಿಯನ್ ಜನರು ದೃಷ್ಟಿದೋಷದಿಂದ ಬಳಲುತ್ತಿದ್ದಾರೆ. ಅದರಲ್ಲಿ ಶೇ. 1ರಷ್ಟು ಜನ ಭಾರತದಲ್ಲಿ ಇದ್ದಾರೆ ಎಂದ ಅವರು, ನೇತ್ರದಾನ ಮಾಡುವುದು ಸಾಮಾಜಿಕ ಆಂದೋಲನವಾಗಿ ರೂಪುಗೊಳ್ಳಬೇಕು, ಸಾಮಾನ್ಯ ವರ್ಗದವರಲ್ಲಿ ಈ ಬಗ್ಗೆ ವಿಶೇಷ ತಿಳುವಳಿಕೆ ಮೂಡಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಮತ್ತು  ಹಾನಗಲ್ ಶ್ರಿ ಕುಮಾರೇಶ್ವರ  ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಸ್ವತಂತ್ರ ವಿಶ್ವವಿದ್ಯಾಲಯವಾಗುಷ್ಟು ಅರ್ಹತೆ ಹೊಂದಿದೆ ಎಂದು ಹೇಳಿದ ಅವರು, ಕಾಲೇಜಿನ ಈಗಿರುವ 150 ವಿದ್ಯಾರ್ಥಿಗಳ ಪ್ರವೇಶಾತಿಯನ್ನು 250ಕ್ಕೆ ಹೆಚ್ಚಿಸುವ ಸಂಬಂಧ ಮತ್ತು ಆಸ್ಪತ್ರೆಯನ್ನು 1100 ಹಾಸಿಗೆಗೆ ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಪೂರಕ ಸಹಕಾರ ನೀಡಲಿದೆ ಎಂದು ಹೇಳಿದರು.

ಬಿವಿವಿ ಸಂಘದ ಅಧ್ಯಕ್ಷರಾದ ಶಾಸಕ ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ವೀರಣ್ಣ ಹುಲಕುರ್ಕಿ, ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದಣ್ಣ ಶೆಟ್ಟರ್, ಪ್ರಾಚಾರ್ಯ ಡಾ. ಅಶೋಕ್ ಎಸ್. ಮಲ್ಲಾಪುರ, ಡಾ. ಮಲ್ಲಿಕಾರ್ಜುನ್ ಸಲಗಾರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.