ADVERTISEMENT

ಪರಿಶಿಷ್ಟರ ಮೀಸಲಾತಿ ಮಿತಿ ಹೆಚ್ಚಳಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 9:10 IST
Last Updated 13 ಅಕ್ಟೋಬರ್ 2011, 9:10 IST
ಪರಿಶಿಷ್ಟರ ಮೀಸಲಾತಿ ಮಿತಿ ಹೆಚ್ಚಳಕ್ಕೆ ಆಗ್ರಹ
ಪರಿಶಿಷ್ಟರ ಮೀಸಲಾತಿ ಮಿತಿ ಹೆಚ್ಚಳಕ್ಕೆ ಆಗ್ರಹ   

ಜಮಖಂಡಿ: ವಾಲ್ಮೀಕಿ ಜನಾಂಗವೂ ಸೇರಿದಂತೆ ಪರಿಶಿಷ್ಟ ಪಂಗಡಕ್ಕೆ ಶೈಕ್ಷಣಿಕ ಮತ್ತು ಸರಕಾರಿ ಉದ್ಯೋಗಕ್ಕಾಗಿ ಸದ್ಯ ಜಾರಿಯಲ್ಲಿರುವ ಶೇ.3 ರ ಮೀಸಲಾತಿ ಮಿತಿಯನ್ನು ಹೆಚ್ಚಿಸಲು ಸದನದಲ್ಲಿ ಸರಕಾರವನ್ನು ಆಗ್ರಹಿಸುವುದಾಗಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ನಗರಸಭೆ ಹಾಗೂ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಲ್ಲಿನ ಬಸವ ಭವನದ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರದ ಹಳೆಯ ಉಪಕಾರಾಗೃಹ ಕಟ್ಟಡವನ್ನು ತೆಗೆದುಹಾಕಿ ಆ ಸ್ಥಳದಲ್ಲಿ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಿ ವೀರ ಸಿಂಧೂರ ಲಕ್ಷ್ಮಣ ಮಾರುಕಟ್ಟೆ ಎಂದು ನಾಮಕರಣ ಮಾಡುವುದರ ಜೊತೆಗೆ ಅವರ ಸ್ಮಾರಕ ಸ್ಥಾಪಿಸಲಾಗುವುದು. ವಾಲ್ಮೀಕಿ ಸಮುದಾಯ ಭವನ ನಿರ್ಮಿಸಲು ಅನುದಾನ ನೀಡಲು ಸರಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.

ತೇರದಾಳ ಶಾಸಕ, ರಾಜ್ಯ ಜವಳಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಮಾಯಣ ಎಂಬ ಮೂಲ ಧರ್ಮಗ್ರಂಥವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿರುವ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ದೇಶದ ಸಂಸ್ಕೃತಿ ಮತ್ತು ಪರಂಪರೆಯ ಹರಿಕಾರ ಎನಿಸಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಜಿ.ಎಸ್.ನ್ಯಾಮಗೌಡ, ಮಾಜಿ ಶಾಸಕ ಆರ್.ಎಂ. ಕಲೂತಿ, ಮಾಜಿ ಶಾಸಕ ಬಾಬುರೆಡ್ಡಿ ತುಂಗಳ, ಜಿ.ಪಂ.ಸದಸ್ಯ ವಿಠ್ಠಲ ಚೌರಿ ಮಾತನಾಡಿದರು. ಗೋಕಾಕ ಜೆಎಸ್‌ಎಸ್ ಕಾಲೇಜಿನ ಉಪಪ್ರಾಚಾರ್ಯ ಡಾ.ಅರ್ಜುನ ಪಂಗಣ್ಣವರ ಮಹರ್ಷಿ ವಾಲ್ಮೀಕಿ ಅವರ ಸಾಹಿತ್ಯ ಮತ್ತು ಸಂದೇಶ ಕುರಿತು ವಿಶೇಷ ಉಪನ್ಯಾಸ ನೀಡಿದರು.

ತಾ.ಪಂ.ಅಧ್ಯಕ್ಷೆ ಮಹಾದೇವಿ ಹುಕ್ಕೇರಿ, ನಗರಸಭೆ ಅಧ್ಯಕ್ಷ ಶ್ರೀಶೈಲ ರಾಂಬಳ್ಳಿ, ತಾ.ಪಂ.ಉಪಾಧ್ಯಕ್ಷ ನಿಂಗಪ್ಪ ಹೆಗಡೆ, ಜಿ.ಪಂ.ಸದಸ್ಯ ಅರ್ಜುನ ದಳವಾಯಿ, ಜಿ.ಪಂ.ಸದಸ್ಯೆ ಮಹಾದೇವಿ ಮೂಲಿಮನಿ, ಪೌರಾಯುಕ್ತ ಎಸ್.ಎಸ್.ಜಯಧರ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಮನೋಹರ ಅರಳಿಗಿಡದ ಮತ್ತಿತರರು ವೇದಿಕೆಯಲ್ಲಿದ್ದರು. ಸರಸ್ವತಿ ಸಬರದ ಪ್ರಾರ್ಥನೆ ಗೀತೆ ಹಾಡಿದರು. ಅಮೃತಾ ಶಿಂಧೆ ನಾಡಗೀತೆ ಹಾಡಿದರು.

ತಹಸೀಲ್ದಾರ ಡಾ.ಸಿದ್ದು ಹುಲ್ಲೋಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಬೆಸ್ತರ್ ನಿರೂಪಿಸಿದರು. ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ರಾಜಕುಮಾರ ತೊರವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.