ADVERTISEMENT

ಪೇಜಾವರ ಶ್ರೀ ಹೇಳಿಕೆಗೆ ಡಿ.ಎಸ್‌.ಎಸ್‌ ಖಂಡನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2017, 6:07 IST
Last Updated 28 ನವೆಂಬರ್ 2017, 6:07 IST

ಬಾಗಲಕೋಟೆ: ‘ಉಡುಪಿಯಲ್ಲಿ ನಡೆದ ಹಿಂದೂ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಪೇಜಾವರ ಸ್ವಾಮೀಜಿ ಅವರು ಅಂಬೇಡ್ಕರ್ ಹಾಗೂ ಸಂವಿಧಾನ ಬದಲಾವಣೆ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ಹಾದಿಮನಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಅಂಬೇಡ್ಕರ್ ಸಂವಿಧಾನವನ್ನು ರಚಿಸಿಲ್ಲ ಎಂದು ಪೇಜಾವರ ಶ್ರೀಗಳು ನೀಡಿರುವ ಹೇಳಿಕೆ ಸರಿಯಲ್ಲ. ಕೂಡಲೇ ಅವರು ತಮ್ಮ ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಅವರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

‘ದೇಶ ಸುಭದ್ರವಾದ ಪ್ರಜಾಪ್ರಭುತ್ವ ವನ್ನು ಹೊಂದಲು ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಕಾರಣವಾಗಿದೆ. ಅದು ದೇಶದ ಧರ್ಮ ಗ್ರಂಥವಾಗಿದೆ ಎಂದು ಒಪ್ಪಿಕೊಳ್ಳಬೇಕು. ಸಂವಿಧಾನ ಅಥವಾ ಅಂಬೇಡ್ಕರ್ ಬಗ್ಗೆ ಹೇಳಿಕೆ ನೀಡುವಾಗ ಎಚ್ಚರ ವಹಿಸಬೇಕು’ ಎಂದು ಹೇಳಿದ್ದಾರೆ.

ADVERTISEMENT

‘ಶ್ರೀಗಳು ಅಂಬೇಡ್ಕರ್‌ ಅವರು ಬರೆದ ಸಂವಿಧಾನವನ್ನು ಒಂದು ಸಲವಾದರೂ ಓದಿದ್ದಾರೆಯೇ ಎಂದು ಪ್ರಶ್ನಿಸಿರುವ ಅವರು, ಸ್ವಾಮೀಜಿಗಳು ದೇಶದ ಐಕ್ಯತೆ ಹಾಗೂ ಸಮಗ್ರತೆಯ ಬಗ್ಗೆ ಯೋಚಿಸಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.