ADVERTISEMENT

ಬಸವೇಶ್ವರ ಬ್ಯಾಂಕಿಗೆ 2.25 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 7:10 IST
Last Updated 26 ಸೆಪ್ಟೆಂಬರ್ 2011, 7:10 IST

ಬಾಗಲಕೋಟೆ: ಶ್ರಿ ಬಸವೇಶ್ವರ ಸಹಕಾರಿ ಬ್ಯಾಂಕ್ 2010-11ನೇ ಸಾಲಿನಲ್ಲಿ ರೂ. 2.25 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 10ರಷ್ಟು ಲಾಭಾಂಶವನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಪ್ರಗತಿ ವರದಿ ನೀಡಿದ ಅವರು, ಬ್ಯಾಂಕ್ 34,625 ಸದಸ್ಯರನ್ನು ಒಳಗೊಂಡಿದ್ದು, ರೂ 9.03 ಕೋಟಿ ಷೇರು ಬಂಡವಾಳ ಮತ್ತು ರೂ. 244.57 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ರೂ.140 ಕೋಟಿ ಸಾಲ ನೀಡಿದೆ ಎಂದರು.

ಕರ್ನಾಟಕ ರಾಜ್ಯ ಸಹಕಾರಿ ಪಟ್ಟಣ ಬ್ಯಾಂಕುಗಳ ಮಹಾಮಂಡಳಿಯು ಶ್ರಿ ಬಸವೇಶ್ವರ ಸಹಕಾರಿ ಬ್ಯಾಂಕಿಗೆ 2010-11ನೇ ಸಾಲಿನ ~ `ಉತ್ತಮ ಸಹಕಾರಿ ಬ್ಯಾಂಕ್~ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಪ್ರಥಮವಾಗಿ ಎಟಿಎಂ, ಆರ್‌ಟಿಜಿಎಸ್, ಎನ್‌ಇಜಿಎಸ್, ಎಸ್‌ಎಂಎಸ್ ಬ್ಯಾಂಕಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿದೆ ಎಂದ ಅವರು, ಬ್ಯಾಂಕ್ ಒಟ್ಟು 17 ಶಾಖೆಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಬ್ಯಾಂಕ್ ವತಿಯಿಂದ ವಿವಿಧ ಕೈಗಾರಿಕೆ ಸ್ಥಾಪನೆ, ಆಸ್ಪತ್ರೆ ನಿರ್ಮಾಣ, ಶಿಕ್ಷಣ ಸಂಸ್ಥೆ ನಿರ್ಮಾಣ ಹಾಗೂ ಯಂತ್ರೋಪಕರಣಗಳಿಗೆ ಹೆಚ್ಚಿನ ಸಾಲ ಸೌಲಭ್ಯ ಒದಗಿಸಲಿದೆ ಎಂದರು.

ರಾಷ್ಟ್ರೀಕೃತ ಬ್ಯಾಂಕುಗಳು ಅಳವಡಿಸಿಕೊಂಡಿರುವ ಎಲ್ಲಾ ರೀತಿಯ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಹೆಚ್ಚಿನ ರೀತಿಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಸೇವಾ ಸೌಲಭ್ಯ ವಿಸ್ತರಿಸಲಿದೆ ಎಂದು ಹೇಳಿದರು.

ನಗರದ ಎಪಿಎಂಸಿ ಯಾರ್ಡ್‌ನಲ್ಲಿ ನಿರ್ಮಾಣವಾಗಿರುವ ಬ್ಯಾಂಕಿನ ಸ್ವಂತ ಕಟ್ಟಡ ಶೀಘ್ರ ಕಾರ್ಯಾರಂಭವಾಗಲಿದೆ ಎಂದ ಅವರು, ಗ್ರಾಹಕರ ಅನುಕೂಲಕ್ಕಾಗಿ ಇ-ಸ್ಟಾಂಪಿಂಗ್ ಯೋಜನೆಯನ್ನು 5 ಶಾಖೆಗಳಲ್ಲಿ ಪ್ರಾರಂಭಿಸಲಾಗಿದೆ ಎಂದರು.

ಕೆರೂರು ಮತ್ತು ಬೀಳಗಿ ಶಾಖೆಯಲ್ಲಿ ಶೀಘ್ರದಲ್ಲೇ ಎಟಿಎಂ ಪ್ರಾರಂಭಿಸಲಾಗುತ್ತದೆ ಎಂದ ಅವರು, ಶೀಘ್ರದಲ್ಲೇ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬ್ಯಾಂಕ್ ಹೊಂದಲಿದ್ದು, ಈ ವ್ಯವಸ್ಥೆಯಿಂದ ರಾಜ್ಯದ ಸಹಕಾರಿ ಬ್ಯಾಂಕಿನ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪನೆಯಾಗಲಿದೆ ಎಂದು ತಿಳಿಸಿದರು.

ಶಿಕ್ಷಣ ಸಾಲ ಸೌಲಭ್ಯ: ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಮತ್ತು ಆರ್ಥಿಕ ಸಹಾಯ-ಸಹಕಾರ ನೀಡುವುದಕ್ಕಾಗಿ ದೇಶ-ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗಾಗಿ ಈ ವರ್ಷದಿಂದ ಪ್ರಾಯೋಗಿಕವಾಗಿ ಬಾಗಲಕೋಟೆ ತಾಲ್ಲೂಕಿಗೆ ಸೀಮಿತವಾಗಿ ಬ್ಯಾಂಕಿನಿಂದ ಶಿಕ್ಷಣ ಸಾಲ ಸೌಲಭ್ಯದ ಯೋಜನೆ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು. ಜೊತೆಗೆ ವಿದ್ಯಾ ಚೇತನ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಯೋಜನೆಯಡಿ ಗುರುತಿಸಿ ಸನ್ಮಾನಿಸಲಾಗುತ್ತದೆ ಎಂದರು.

ಬಾಗಲಕೋಟೆ ನಗರದಲ್ಲಿ ಮುಳುಗಡೆಯಾಗಿರುವ ಭಾಗದಲ್ಲಿ ವಾಸಿಸುತ್ತಿರುವ ಬ್ಯಾಂಕಿನ ಸದಸ್ಯರು, ಈಗ ನವನಗರ ಮತ್ತು ಇತರೆ ಕಡೆಗೆ ಸ್ಥಳಾಂತರಗೊಂಡವರು ತಮ್ಮ ಸ್ವಂತ ವಿಳಾಸವನ್ನು ಬ್ಯಾಂಕಿಗೆ ಕೊಡುವಂತೆ ಅವರು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಬಿ.ವಿ. ಕಲಬುರ್ಗಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.