ADVERTISEMENT

ಬಸವ ತತ್ವ ವಿ.ವಿ, ಐಟಿ ಪಾರ್ಕ್ ಸ್ಥಾಪನೆ

ಚುನಾವಣೆ: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆ– ಜಿಲ್ಲೆಗೆ ಭರಪೂರ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 5:57 IST
Last Updated 28 ಏಪ್ರಿಲ್ 2018, 5:57 IST

ಬಾಗಲಕೋಟೆ: ಸಮ ಸಮಾಜದ ಪರಿಕಲ್ಪನೆಗೆ ಗರಿ ಮೂಡಿಸಲು ಬಸವ ತತ್ವ ವಿಶ್ವವಿದ್ಯಾಲಯ ಸ್ಥಾಪನೆ, ಬೃಹತ್ ಸೌರವಿದ್ಯುತ್ ಯೋಜನೆ ಅನುಷ್ಠಾನ, ಪ್ರವಾಸೋದ್ಯಮ ಅಭಿವೃದ್ಧಿಗೆ ಥೀಮ್ ಪಾರ್ಕ್, ಹೋಟೆಲ್–ರೆಸಾರ್ಟ್, ಉದ್ಯೋಗ ಸೃಷ್ಟಿಗೆ ಜವಳಿ, ಸಿಮೆಂಟ್, ಸಕ್ಕರೆ ಉದ್ಯಮ ಸ್ಥಾಪನೆ, ಐಟಿ ಪಾರ್ಕ್, ಸ್ಮಾರ್ಟ್‌ ಸಿಟಿ ಕನಸು ಸಾಕಾರಗೊಳಿಸಲು ಶೌಚಾಲಯ, ಒಳಚರಂಡಿ, ಕುಡಿಯುವ ನೀರಿನ ಸವಲತ್ತು, ಹನಿ ಹಾಗೂ ತುಂತುರು ನೀರಾವರಿ ವ್ಯವಸ್ಥೆ ಇನ್ನಷ್ಟು ಪ್ರದೇಶಕ್ಕೆ ವಿಸ್ತರಣೆ, ಉಚಿತವಾಗಿ ಮಣ್ಣಿನ ಪರೀಕ್ಷೆ ...

ವಿಧಾನಸಭೆ ಚುನಾವಣೆ ಹಿನ್ನೆಲೆ ಯಲ್ಲಿ ಕಾಂಗ್ರೆಸ್ ಪಕ್ಷ ಶುಕ್ರವಾರ ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ಜಿಲ್ಲೆಯ ಜನರಿಗೆ ನೀಡಿದ ಪ್ರಮುಖ ಭರವಸೆಗಳಿವು..

ಬಿಜೆಪಿ, ಜೆಡಿಎಸ್‌ಗಿಂತ ಮೊದಲೇ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲು ಮುಂದಾಗಿದೆ. ನಿರುದ್ಯೋಗಿ ಯುವಜನತೆಗೆ ಕೌಶಲ ಅಭಿವೃದ್ಧಿ ತರಬೇತಿ, ಅಲೆಮಾರಿ ಸಮುದಾಯದವರ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ, ಅಪರಾಧ ತಡೆಗೆ ಕಠಿಣ ಕ್ರಮಗಳು, 24 ಗಂಟೆ ಸಾರ್ವಜನಿಕರ ಅಳಲು ಆಲಿಕೆಗೆ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದೆ.

ADVERTISEMENT

ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರ ನೇಮಕದ ಜೊತೆಗೆ ಸೋಂಕು ರೋಗಗಳ ತಡೆ ಹಾಗೂ ಚಿಕಿತ್ಸೆಗೆ ಪ್ರತ್ಯೇಕ ಹೊರ ರೋಗಿ ಚಿಕಿತ್ಸಾ ವಿಭಾಗ (ಒಪಿಡಿ), ಸುಸಜ್ಜಿತ ಆಂಬುಲೆನ್ಸ್, ಸ್ಪೆಷಾಲಿಟಿ ಆಸ್ಪತ್ರೆಗಳ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಸಹಯೋಗದಲ್ಲಿ ವೈದ್ಯಕೀಯ ಸವಲತ್ತು, ಕೃಷಿ ಉತ್ಪನ್ನಗಳ ಮಾರಾಟಕ್ಕೆ ಹೋಬಳಿ ಮಟ್ಟದಲ್ಲಿ ಮಿನಿ ಮಾರುಕಟ್ಟೆ ವ್ಯವಸ್ಥೆ, ಸರ್ಕಾರಿ ಕಾಲೇಜುಗಳಲ್ಲಿ ಉದ್ಯಮಿ ಶೀಲತೆ ಉತ್ತೇಜನ ಕೇಂದ್ರ, ಸೌರವಿದ್ಯುತ್ ಆಧಾರಿತ ಬೀದಿ ದೀಪಗಳ ಅಳವಡಿಕೆ, ಕೃಷಿಯಾಧಾರಿತ ಶಿಕ್ಷಣಕ್ಕಾಗಿ ವಿಶೇಷ ವಿಶ್ವವಿದ್ಯಾಲಯ ಸ್ಥಾಪಿಸುವ ಭರವಸೆ ಕಾಂಗ್ರೆಸ್ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.