ADVERTISEMENT

ಬಾಗಲಕೋಟೆ,ಬೀಳಗಿ: ಪಿಡಿಒಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2011, 6:40 IST
Last Updated 12 ನವೆಂಬರ್ 2011, 6:40 IST
ಬಾಗಲಕೋಟೆ,ಬೀಳಗಿ: ಪಿಡಿಒಗಳಿಂದ ಪ್ರತಿಭಟನೆ
ಬಾಗಲಕೋಟೆ,ಬೀಳಗಿ: ಪಿಡಿಒಗಳಿಂದ ಪ್ರತಿಭಟನೆ   

ಬಾಗಲಕೋಟೆ: ಬೀದರ್ ಜಿಲ್ಲೆಯ ಬ್ಯಾಲಹಳ್ಳಿ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ(ಪಿಡಿಒ) ಆತ್ಮಹತ್ಯೆಗೆ ಕಾರಣವನ್ನು ಖಂಡಿಸಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಗ್ರಾಮ ಪಂಚಾಯಿತಿ  ಅಭಿವೃದ್ಧಿ ಅಧಿಕಾರಿಗಳು ಶುಕ್ರವಾರ ಒಂದು ದಿನದ ಪ್ರತಿಭಟನಾ ಧರಣಿ ನಡೆಸಿದರು.

ನಗರದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದ ಬಾಗಲಕೋಟೆ ತಾಲ್ಲೂಕು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೌಕರರ ಸಂಘದ ಕಾರ್ಯಕರ್ತರು, ಪಿಡಿಒ ವಿಜಯಕುಮಾರ್ ಸೂರ್ಯ ವಂಶಿ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.

 ಪಿಡಿಒಗಳಿಗೆ ಸಂಪೂರ್ಣ ರಕ್ಷಣೆ ನೀಡಬೇಕು ಮತ್ತು ಕಾನೂನು ಪ್ರಕಾರ ಕಾರ್ಯನಿರ್ವಹಿಸಲು ಭದ್ರತೆ ನೀಡಬೇಕು ಹಾಗೂ ಪಂಚಾಯಿತಿಯಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ನಿಯಂತ್ರಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಬಾಗಲಕೋಟೆ ತಾಲ್ಲೂಕು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ನೌಕರರ ಸಂಘದ ಅಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಜಿಲ್ಲೆಯಲ್ಲೂ ಪಿಡಿಒಗಳಿಗೆ ಪರೋಕ್ಷವಾಗಿ ಕಿರುಕುಳ ನೀಡುತ್ತಿರುವ ಘಟನೆಗಳು ನಡೆದಿದೆ ಎಂದು ಆರೋಪಿಸಿದರು.

ಕಲಾದಗಿ ಮತ್ತು ಬೇವೂರ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒಗಳು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ, ಆದರೆ ಇಲ್ಲಿ ನಕಲಿ ಪತ್ರಕರ್ತರು ಆಗಾಗ ಪಿಡಿಒಗಳನ್ನು ಹಣಕ್ಕಾಗಿ ಪೀಡಿಸುತ್ತಿದ್ದು, ಅಂತವರ ವಿರುದ್ಧ ಸಂಬಂಧಪಟ್ಟವರು ಸೂಕ್ತ ಕ್ರಮಕೈಗೊಳ್ಳದಿದ್ದರೆ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಿಡಿಒ ಸೂರ್ಯವಂಶಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯನ್ನು ಸಂಘವು ಅತ್ಯುಘ್ರವಾಗಿ ಖಂಡಿಸುತ್ತದೆ ಎಂದ ಅವರು, ರಾಜ್ಯದ ಎಲ್ಲ ಗ್ರಾ.ಪಂ.ಗಳಲ್ಲಿ ಪಿಡಿಒ, ಕಾರ್ಯದರ್ಶಿಗಳು ಕಾರ್ಯನಿರ್ವಹಿಸಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ಗ್ರಾ.ಪಂ.ಗಳಲ್ಲಿ ನಡೆಯುವ ರಾಜಕೀಯ ತಿಕ್ಕಾಟ, ಹಲ್ಲೆ ಮತ್ತು ದೌರ್ಜನ್ಯದಿಂದ ಬೇಸತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕನಸು ಹೊತ್ತು ಬಂದ ಪಿಡಿಒ ಮತ್ತು ಕಾರ್ಯದರ್ಶಿ ಅವರ ಮೇಲೆ ನಿರಂತರ ದೌರ್ಜನ್ಯ ನಡೆದರೆ ಗ್ರಾಮದ ಅಭಿವೃದ್ಧಿ ಅಸಾಧ್ಯ ಎಂದರು.
ಎನ್‌ಆರ್‌ಇಜಿ ಮತ್ತು ವಸತಿ ಯೋಜನೆ ಅನುಷ್ಠಾನ ಮಾಡುವುದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ದೂರಿದರು.

ಪ್ರತಿಭಟನಾ ಧರಣಿಯಲ್ಲಿ ಸಂಘದ ಪ್ರಮುಖರಾದ ಪರಮೇಶ್ವರ ಚಲವಾದಿ, ಯುವರಾಜ ಪರಗಿ, ಕೆ.ಎಚ್.ಮುಲ್ಲಾ, ಕೆ.ಸಿ. ವನಿತಾಬಾಯಿ, ದಾಕ್ಷಾಯಿಣಿ ಹಿರೇಮಠ, ವೈಶಾಲಿ ಭೈರಮಟ್ಟಿ, ಜಿ. ಗಾಯತ್ರಿ,  ಅರ್ಚನಾ ಕುಲಕರ್ಣಿ, ರತ್ನಾಬಾಯಿ ಮೂಕಿ, ಗೌರಮ್ಮ ಸಿ. ಶಿರೂರ, ಸುಮಂಗಲಾ ಮಲ್ಲಣ್ಣವರ, ಆರ್. ಎಚ್. ನದಾಫ್, ಎಂ.ಎಂ. ಭೂಸಗಂಡ, ಆರ್.ಎಸ್. ತಿಮ್ಮಸಾಗರ, ಎಸ್.ಸಿ. ಹಿರೇಮಠ ಮತ್ತಿತರರು ಭಾಗವಹಿಸಿದ್ದರು.

ಬೀಳಗಿ ವರದಿ
ಬೀಳಗಿ:
ಬೀದರ್ ಜಿಲ್ಲೆಯ ಬ್ಯಾಲಹಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಸೂರ್ಯವಂಶಿ ಅವರ ಆತ್ಮ ಹತ್ಯೆಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಲು ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ರಾಜ್ಯಪಾಲರಿಗೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮೂಲಕ ಗುರುವಾರ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯತಿಗಳಿಗೆ ಲೆಕ್ಕಶಾಖೆಯಿಂದ ಹಾಗೂ ತಾಂತ್ರಿಕ ಶಾಖೆಯಿಂದ ಪರಿಣಿತ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ಒದಗಿಸಬೇಕು. ಅನುಷ್ಠಾನ ಇಲಾಖೆಗಳ ಸಹಯೋಗ ಸರಿಯಾದ ಸಮಯಕ್ಕೆ ಒದಗುವಂತೆ ಪಂಚಾಯತ್‌ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತರಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು. ಎಸ್.ಎಸ್.ಹಿರೇಮಠ, ಕೋಟೆಣ್ಣವರ, ವಿಜಯಕುಮಾರ, ಗಿಡಗಂಟಿ, ಶಿವು ಕುಂದರಗಿ ಮುಂದಾಳತ್ವವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.