ADVERTISEMENT

ಬಾಗಲಕೋಟೆ: ಅಭ್ಯರ್ಥಿಗಳ ಬಿರುಸಿನ ಪ್ರಚಾರ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 8:00 IST
Last Updated 25 ಏಪ್ರಿಲ್ 2013, 8:00 IST

ಬಾಗಲಕೋಟೆ: ಮೇ 5ರಂದು ನಡೆಯುವ ವಿಧಾನಸಭೆ ಚುನಾವಣೆಗೆ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿಯ ವೀರಣ್ಣ ಚರಂತಿಮಠ, ಕಾಂಗ್ರೆಸ್‌ನ ಎಚ್.ವೈ. ಮೇಟಿ, ಜೆಡಿಎಸ್‌ನ ಬಸವರಾಜ ಜಕ್ಕನಗೌಡ ಪಾಟೀಲ, ಬಿಎಸ್‌ಪಿಯ ಆರ್. ಡಿ. ಬಾಬು ಮತ್ತು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿ ಪರಶುರಾಮ ನೀಲನಾಯಕ  ಬುಧವಾರ ಬಿರುಸಿನ ಪ್ರಚಾರ ನಡೆಸಿದರು.

ಕಾಂಗ್ರೆಸ್ ಸೇರ್ಪಡೆ:ನವನಗರದ ವಾಂಬೆ ಕಾಲೊನಿಯಿಂದ (ವಾರ್ಡ್ ನಂ-31)ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಹಪೀಜಾ ಮ್ದ್ದುದೇಬಿಹಾಳ, ಎಚ್.ವೈ. ಮೇಟಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಮೇಟಿ, `ನವನಗರದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಕೈಗಾರಿಕೆ ಸ್ಥಾಪಿಸಲು, ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿ ವಲಯ ಸ್ಥಾಪಿಸಲು ಮತ್ತು ಅಲ್ಪಸಂಖ್ಯಾತರ ಹಿತರಕ್ಷಣೆಗಾಗಿ ಕಾಂಗ್ರೆಸ್ ಬೆಂಬಲಿಸಬೇಕು' ಎಂದು ವಿನಂತಿಸಿದರು. ಮುಖಂಡರಾದ ಜಿ.ಎನ್. ತರಪದಾರ, ಅಶೋಕ ಲಾಗಲೋಟಿ, ಶಫೀಕ ದೂಡಕಟ್ಟಿ. ಅಮೀನಸಾಬ್ ರಕ್ಕಸಗಿ, ರಸೂಲಸಾಬ್ ಕಂದಗಲ್ಲ, ತೌಫಿಕ್ ಪುಣೆಕಾರ ಇದ್ದರು.

ಚರಂತಿಮಠ ಬಿರುಸಿನ ಪ್ರಚಾರ: ಬಾಗಲಕೋಟೆ ತಾಲ್ಲೂಕಿನ ನಾಯನೇಗಲಿ, ನಾಯನೇಗಲಿ ತಾಂಡಾ, ನಾಗರಾಳ, ನಾಗಸಂಪಗಿ, ಹೊಸೂರ, ಮನಹಳ್ಳಿ, ಬೋಡನಾಯಕದಿನ್ನಿ, ಅಚನೂರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ  ಬಿರುಸಿನ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚರಂತಿಮಠ, `ವಿವಿಧ ಸಮಾಜಗಳಿಗೆ ಸಮುದಾಯ ಭವನ, ರೈತರು, ನೇಕಾರರಿಗೆ ಅನೇಕ ಸೌಲಭ್ಯ ಕಲ್ಪಿಸಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಬೆಂಬಲಿಸಿ' ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.