
ಬಾಗಲಕೋಟೆ: ಇಲ್ಲಿನ ಲೋಕಸಭಾ ಕ್ಷೇತ್ರದ 67 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋತ ದಾಖಲೆ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ ಅವರ ಹೆಸರಿನಲ್ಲಿದೆ. 1984ರಲ್ಲಿ ಕಾಂಗ್ರೆಸ್‌ನ ಬಿ.ಎಚ್.ಪಾಟೀಲ ವಿರುದ್ಧ ಜನತಾಪಕ್ಷದಿಂದ ಸ್ಪರ್ಧಿಸಿದ್ದ ನಾಡಗೌಡ ಕೇವಲ 10,512 ಮತಗಳ ಅಂತರದಿಂದ ಸೋಲನ್ನಪ್ಪಿದ್ದರು.
ರೋಣ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಆಗ ಬಾಗಲಕೋಟೆ ಕ್ಷೇತ್ರ ಹೊಂದಿತ್ತು. ಆ ಚುನಾವಣೆಯಲ್ಲಿ ಎಚ್.ಬಿ.ಪಾಟೀಲರು 2.34,955 ಮತ ಪಡೆದಿದ್ದರೆ, ಪ್ರತಿಸ್ಪರ್ಧಿ ಮಲ್ಲನಗೌಡ ನಾಡಗೌಡರಿಗೆ 2.24.443 ಮತಗಳು ಬಿದ್ದಿದ್ದವು.
ಎಂ.ಪಿ ಮುಂದೆ ಇಡಿ!:
‘ಆಗ ರಾಮಕೃಷ್ಣ ಹೆಗಡೆ ಜನತಾಪಕ್ಷದ ಸ್ಟಾರ್ ಕ್ಯಾಂಪೈನರ್. ಈ ಭಾಗದಲ್ಲಿ ಅವರ ಪ್ರಭಾವ ಬಹಳಷ್ಟಿತ್ತು. 1985ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಿತು. ಅದೊಮ್ಮೆ ಜಮಖಂಡಿಯಲ್ಲಿ ತಡರಾತ್ರಿ 2 ಗಂಟೆಗೆ ಬಂದುಹೆಗಡೆ ಪ್ರಚಾರ ಮಾಡಿದ್ದರು. ಅಷ್ಟು ಹೊತ್ತಿನಲ್ಲಿಯೇ 20 ಸಾವಿರಕ್ಕೂ ಹೆಚ್ಚು ಮಂದಿ ನೆರದಿದ್ದರು. ಸುತ್ತಲಿನ ಹಳ್ಳಿಗಳಿಂದ ಗಾಡಿ ಕಟ್ಟಿಕೊಂಡು ಬಂದು ಕಾದು ಕುಳಿತಿದ್ದರು’ ಎಂದು ಆ ದಿನಗಳನ್ನು ನಾಡಗೌಡ ನೆನಪಿಸಿಕೊಳ್ಳುತ್ತಾರೆ.
‘ಅಭ್ಯರ್ಥಿಯ ಹೆಸರಿನ ಹಿಂದೆ ಎಂಪಿ ಇನಿಶಿಯಲ್ (ಎಂ.ಪಿ.ನಾಡಗೌಡ) ಇದೆ. ಚುನಾವಣೆ ನಂತರ ಅದು ಮುಂದೆ (ನಾಡಗೌಡ ಎಂ.ಪಿ) ಬರುವಂತೆ ಮಾಡಬೇಕು ಎಂದು ಪ್ರಚಾರದ ವೇಳೆ ರಾಮಕೃಷ್ಣ ಹೆಗಡೆ ನೆರೆದವರಿಗೆ ಹೇಳುತ್ತಿದ್ದರು. ಮೊದಲ ಮಾತು ಅದೇ ಇರುತ್ತಿತ್ತು. ಆಗೆಲ್ಲಾ ಪ್ರಚಾರಕ್ಕೆ ತೆರಳಿದವರಿಗೆ ಚುರಮುರಿ ಸೂಸಲಾ, ಊಟದ ಖರ್ಚು ಮಾತ್ರ ಇರುತ್ತಿತ್ತು. ಹಳ್ಳಿಗಳಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರೇ ಆ ಖರ್ಚನ್ನು ನಿಭಾಯಿಸುತ್ತಿದ್ದರು. ಆಗ ವೆಚ್ಚದ ಮಿತಿ ₹50 ಸಾವಿರ ಇತ್ತು. ಅದಕ್ಕಿಂತ ಕಡಿಮೆ ಖರ್ಚು ಮಾಡುತ್ತಿದ್ದೆವು. ಬೂತ್‌ಗೆ ₹100 ಖರ್ಚು ಮಾಡಿದರೆ ಅದೇ ದೊಡ್ಡದಾಗಿತ್ತು.’ ಎಂದು ನಾಡಗೌಡ ಸ್ಮರಿಸುತ್ತಾರೆ.
ಒಳ್ಳೆಯ ಮಿತ್ರ:
‘ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹನುಮಂತಗೌಡ ನನಗೆ ಒಳ್ಳೆಯ ಸ್ನೇಹಿತ. ನೀನು ಜನತಾ ಪಕ್ಷದಿಂದ ಚುನಾವಣೆಗೆ ನಿಲ್ಲು ಎಂದು ಹೇಳುತ್ತಿದ್ದವನು, ಅವನೇ ಕಾಂಗ್ರೆಸ್‌ನಿಂದ ಟಿಕೆಟ್ ತಂದು ಚುನಾವಣೆಗೆ ನಿಂತುಬಿಟ್ಟ. ಹಾಗೆಂದು ನಮ್ಮ ಸ್ನೇಹ ಕೆಡಲಿಲ್ಲ. ಆಗೆಲ್ಲಾ ಚುನಾವಣೆ ಶುತ್ರುತ್ವ ಸೃಷ್ಟಿಸುತ್ತಿರಲಿಲ್ಲ. ಪರಸ್ಪರರ ನಡುವೆ ತಾತ್ವಿಕ ಭಿನ್ನಾಭಿಪ್ರಾಯ ಮಾತ್ರ ಇರುತ್ತಿತ್ತು’ ಎನ್ನುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.