ADVERTISEMENT

‘ಬೂತ್‌ ಹಂತದಲ್ಲೇ ಯುವಕರಿಗೆ ಮಣೆ’

ವೆಂಕಟೇಶ್ ಜಿ.ಎಚ್
Published 27 ಫೆಬ್ರುವರಿ 2018, 9:22 IST
Last Updated 27 ಫೆಬ್ರುವರಿ 2018, 9:22 IST
ಬಾಗಲಕೋಟೆಯಲ್ಲಿ ಸೋಮವಾರ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಬಾಗಲಕೋಟೆ, ಹಾವೇರಿ, ಗದಗ ಜಿಲ್ಲೆಗಳ ಮುಖಂಡರೊಂದಿಗೆ ಸಭೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಉಸ್ತುವಾರಿ ವೇಣುಗೋಪಾಲ್ ಚಿತ್ರದಲ್ಲಿದ್ದಾರೆ
ಬಾಗಲಕೋಟೆಯಲ್ಲಿ ಸೋಮವಾರ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಬಾಗಲಕೋಟೆ, ಹಾವೇರಿ, ಗದಗ ಜಿಲ್ಲೆಗಳ ಮುಖಂಡರೊಂದಿಗೆ ಸಭೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಉಸ್ತುವಾರಿ ವೇಣುಗೋಪಾಲ್ ಚಿತ್ರದಲ್ಲಿದ್ದಾರೆ   

ಬಾಗಲಕೋಟೆ: ‘ಬ್ಲಾಕ್‌ ಮಟ್ಟದಿಂದಲೇ ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಿ ಪಕ್ಷವನ್ನು ಬೇರು ಮಟ್ಟದಿಂದಲೇ ಪುನರ್‌ರಚಿಸಿ’ ಎಂದು ಪಕ್ಷದ ಮುಖಂಡರಿಗೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಭಾನುವಾರ ಜನಾಶೀರ್ವಾದ ಯಾತ್ರೆ ನಡೆಸಿ ರಾತ್ರಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಅವರು, ಸೋಮವಾರ ಬೆಳಿಗ್ಗೆ ಬಾಗಲಕೋಟೆ, ಗದಗ, ಹಾವೇರಿ ಜಿಲ್ಲೆಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ಹಾಗೂ ಮಾಜಿ ಶಾಸಕರೊಂದಿಗೆ ಸಭೆ ನಡೆಸಿದರು.

‘ಸದ್ಯ ಬ್ಲಾಕ್‌ ಮಟ್ಟದ ಅಧ್ಯಕ್ಷರ ಪೈಕಿ ಶೇ 90ರಷ್ಟು ಹಿರಿಯರೇ ಇದ್ದಾರೆ. ಪಕ್ಷದ ಸಂಘಟನೆ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ಯುವ ನಾಯಕತ್ವದ ಅಗತ್ಯವಿದೆ’ ಎಂಬುದನ್ನು ರಾಹುಲ್‌ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಪಿಸಿಸಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬೂತ್‌ಮಟ್ಟದ ಮಾಹಿತಿ: ಮನೆ ಮನೆಗೆ ಕಾಂಗ್ರೆಸ್ ಸೇರಿದಂತೆ ಚುನಾವಣೆ ಸಿದ್ಧತೆಗೆ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಆಯಾ ಜಿಲ್ಲಾ ಕಾಂಗ್ರೆಸ್ ಘಟಕಗಳ ಅಧ್ಯಕ್ಷರು ರಾಹುಲ್‌ಗಾಂಧಿಗೆ ಮಾಹಿತಿ ನೀಡಿದರು. ಈ ವೇಳೆ ಪ್ರತಿ ಬೂತ್‌ಮಟ್ಟದ ಮಾಹಿತಿ ಪಡೆದ ಅವರು, ಯಾವ ಬೂತ್‌ನಲ್ಲಿ ಪಕ್ಷದ ಬಲವರ್ಧನೆ ಅಗತ್ಯವಿದೆ. ಅದಕ್ಕೆ ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ವಿಚಾರಿಸಿದ್ದಾರೆ.

ಒಗ್ಗಟ್ಟಿನ ಮಂತ್ರ: ಕಳೆದ ಎರಡು ದಿನಗಳಿಂದ ಮುಂಬೈ ಕರ್ನಾಟಕ ಭಾಗದ ಅರ್ಧಭಾಗ ಕ್ರಮಿಸಿದ್ದೇನೆ. ಎಲ್ಲೆಡೆಯೂ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ ಇದೆ. ಮತ್ತೆ ಅಧಿಕಾರಕ್ಕೆ ಬರಲು ನಾಯಕರ ನಡುವೆ ಸಮನ್ವಯ ಅಗತ್ಯವಿದೆ. ಹಾಗಾಗಿ ಒಗ್ಗಟ್ಟಿನಿಂದ ಮುನ್ನಡೆಯಿರಿ ಎಂಬ ಕಿವಿಮಾತು ಹೇಳಿದರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಚರ್ಚಿಸಿ ಪರಿಹರಿಸಿಕೊಳ್ಳಲು ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಅಭಿಪ್ರಾಯ ಆಲಿಸಿದರು: ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹಾಲಿ–ಮಾಜಿ ಶಾಸಕರ ಅಭಿಪ್ರಾಯ ಆಲಿಸಿದ ರಾಹುಲ್‌ಗಾಂಧಿ, ಟಿಕೆಟ್ ಆಕಾಂಕ್ಷಿಗಳ ಅಳಲು ಕೇಳಿಸಿಕೊಂಡರು. ‘ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೂರು ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಎಲ್ಲರನ್ನೂ ಕರೆದು ಚರ್ಚಿಸಿ ಒಮ್ಮತ ಮೂಡಿಸಲಿ’ ಎಂದು ಬಾದಾಮಿಯ ಎಸ್.ಡಿ.ಜೋಗಿನ ಸಲಹೆ ನೀಡಿದರು ಎನ್ನಲಾಗಿದೆ.

ರಾಹುಲ್‌ಗಾಂಧಿ ಮಾತಾಡುತ್ತಿದ್ದೇನೆ!

ಗದಗ ಜಿಲ್ಲೆ ಶಿರಹಟ್ಟಿ ಸಮೀಪದ ಬದ್ನಿಯ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್‌ ಅವರಿಗೆ ಮುಂಜಾನೆ ಏಕಾಏಕಿ ರಾಹುಲ್‌ಗಾಂಧಿ ಕರೆ ಮಾಡಿ, ಅಲ್ಲಿ ಪಕ್ಷದ ಸ್ಥಿತಿಗತಿಯ ಮಾಹಿತಿ ಪಡೆದಿದ್ದಾರೆ.

‘ನಾನು ರಾಹುಲ್‌ಗಾಂಧಿ ಮಾತನಾಡುತ್ತಿದ್ದೇನೆ’ ಎಂದು ಹಿಂದಿಯಲ್ಲಿ ಹೇಳಿದಾಗ ಅಚ್ಚರಿಗೊಂಡ ಸೋಮಶೇಖರ್, ಗಲಿಬಿಲಿಗೆ ಒಳಗಾಗಿದ್ದಾರೆ. ಮೊದಲಿಗೆ ಅವರು ನಂಬಿಲ್ಲ. ಮತ್ತೆ ಮತ್ತೆ ನೀವು ಯಾರು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ರಾಹುಲ್ ಅವರಿಂದ ಫೋನ್ ಪಡೆದ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮನದಟ್ಟು ಮಾಡಿದ್ದಾರೆ.

ಸೋಮಶೇಖರ್‌ ಅವರಿಗೆ ಹಿಂದಿ–ಇಂಗ್ಲಿಷ್ ಬಾರದ ಕಾರಣ ಪರಮೇಶ್ವರ್ ಅವರೇ ಭಾಷಾಂತರಕಾರರಾಗಿ ಇಬ್ಬರಿಗೂ ನೆರವಾಗಿದ್ದಾರೆ. ಸಭೆಯ ನಂತರ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ, ಮಾಧ್ಯಮದವರೊಂದಿಗೆ ಈ ವಿಚಾರ ಹಂಚಿಕೊಂಡರು.

ಇಡ್ಲಿ–ವಡಾ, ಕೇಸರಿಬಾತ್ ಸವಿ

ಸಭೆಯಲ್ಲಿಯೇ ರಾಹುಲ್‌ಗಾಂಧಿ ಮುಂಜಾನೆ ಉಪಾಹಾರ ಸವಿದರು. ಇಡ್ಲಿ–ವಡಾ ಹಾಗೂ ಕೇಸರಿಬಾತ್ ಸವಿದರು. ರಾಹುಲ್ ಜೊತೆ ಬಂದಿದ್ದ ಬಾಣಸಿಗರೇ ಉಪಾಹಾರ ಸಿದ್ಧಪಡಿಸಿದ್ದರು ಎಂದು ತಿಳಿದುಬಂದಿದೆ.

ಸಚಿವರಿಗೂ ತಟ್ಟಿದ ಭದ್ರತೆ ಬಿಸಿ: ಸಭೆಯಲ್ಲಿ ಪಾಲ್ಗೊಳ್ಳಲು ಪ್ರವಾಸಿ ಮಂದಿರಕ್ಕೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಎಸ್‌ಪಿಜಿ ಅಧಿಕಾರಿಗಳು ಒಳಗೆ ಬಿಡದೇ ತಡೆದರು. ಸಭೆಯಲ್ಲಿ ಭಾಗವಹಿಸುವವರ ಪಟ್ಟಿಯಲ್ಲಿ ಅವರ ಹೆಸರು ಇಲ್ಲ ಎಂಬ ಕಾರಣಕ್ಕೆ ಸಚಿವರು 15 ನಿಮಿಷ ಕಾಲ ಮುಜುಗರ ಅನುಭವಿಸಬೇಕಾಯಿತು. ಕೆಪಿಸಿಸಿ ಮುಖಂಡರ ಮಧ್ಯಪ್ರವೇಶದಿಂದ ಅವರು ಒಳಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.