ADVERTISEMENT

ಭಾರಿ ಇಳುವರಿ:ಧಾರಣೆ ಕುಸಿತ

​ಪ್ರಜಾವಾಣಿ ವಾರ್ತೆ
Published 25 ಜೂನ್ 2011, 6:35 IST
Last Updated 25 ಜೂನ್ 2011, 6:35 IST
ಭಾರಿ ಇಳುವರಿ:ಧಾರಣೆ ಕುಸಿತ
ಭಾರಿ ಇಳುವರಿ:ಧಾರಣೆ ಕುಸಿತ   

ಬೀಳಗಿ: ತಾಲ್ಲೂಕಿನ ಬಾಡಗಿ ಹಾಗೂ ಬೂದಿಹಾಳ ಗ್ರಾಮಗಳಿಗೆ ಬಸ್‌ನಲ್ಲಿ ಹೋಗುತ್ತಿರುವಾಗ ಬೇರೆ ಬೇರೆ ಸೈಜಿನ ಗುಂಡು ಕಲ್ಲುಗಳನ್ನು ಗುಡ್ಡದೋಪಾದಿಯಲ್ಲಿ ಪೇರಿಸಿಟ್ಟ ದೃಶ್ಯ ಪ್ರಯಾಣಿಕರಿಗೆ ಕಾಣಿಸುತ್ತದೆ. 

 ಇದೇನೆಂದು ಸನಿಹಕ್ಕೆ ಹೋಗಿ ನೋಡಿದರೆ, ನೋಡಿದವರು ಅವಾಕ್ಕಾಗುವಂತೆ 5ಕೆ.ಜಿ., 10ಕೆ.ಜಿ., 15ಕೆ.ಜಿ., 20ಕೆ.ಜಿ. ತೂಕದ ಕುಂಬಳ ಕಾಯಿಗಳನ್ನು ವಿಂಗಡಿಸಿ ಮುಂಬೈ ಪಟ್ಟಣಕ್ಕೆ ಕಳುಹಿಸಲು ಬೆಳೆಗಾರರು ತಮ್ಮ ತಮ್ಮ ಹೊಲಗಳಲ್ಲಿ ಸಂಗ್ರಹಿಸಿಟ್ಟಿದ್ದಾರೆ.

ಕಳೆದ ವರ್ಷ ಕುಂಬಳ ಕಾಯಿಗೆ ಭಾರಿ ಬೆಲೆ ಬಂದಿದ್ದರಿಂದ ಬಾಡಗಿ ಗ್ರಾಮದ ಬಹಳಷ್ಟು ರೈತರು ಅಪಾರ ಹಣ ವೆಚ್ಚ ಮಾಡಿ ಈ ಬಾರಿಯೂ ಕುಂಬಳ ಬೆಳೆ ಬೆಳೆದಿದ್ದಾರೆ. ಆದರೆ ಈ ಬಾರಿ ಅದೃಷ್ಟ ಕೈಕೊಟ್ಟಿದ್ದು ನಷ್ಟ ಅನುಭವಿಸುವಂತಾಗಿದೆ. 

ಫೆಬ್ರುವರಿ, ಮಾರ್ಚ್ ತಿಂಗಳಿನಲ್ಲಿ ಬಿತ್ತನೆ ಕಾರ್ಯ ಮಾಡುತ್ತಾರೆ. ಪ್ರತಿ ಎಕರೆಗೆ ಬೀಜ, ಗೊಬ್ಬರ, ಕಳೆ ತೆಗೆಯುವ, ಕ್ರಿಮಿನಾಶಕ ಸಿಂಪಡಿಸುವುದಕ್ಕೆ ರೂ. 8ರಿಂದ ರೂ.10ಸಾವಿರದವರೆಗೆ ಖರ್ಚು ಬರುತ್ತದೆ ಎಂದು ಹೇಳುತ್ತಾರೆ. ತಮ್ಮ ಏಳು ಎಕರೆ ಜಮೀನಿನಲ್ಲಿ ಬೆಳೆದ ಕುಂಬಳ ಮೂರು ಲಾರಿಯಷ್ಟು ಇಳುವರಿ ಬರುತ್ತದೆಂದು ಎನ್ನುತ್ತಾರೆ ಇಲ್ಲಿಯ ಮಹಾದೇವ ಶಂಕ್ರಪ್ಪ ಚಿಕ್ಕಾಣಿ.

ಪ್ರತಿ ಲಾರಿಗೆ 15ಟನ್‌ನಷ್ಟು. ಅಂದರೆ ಮೂರು ಲಾರಿಗೆ 45ಟನ್ ಇಳುವರಿ ಬರುತ್ತದೆ. ಪ್ರತಿ ಕೆ.ಜಿ.ಗೆ ರೂ. 5ರಷ್ಟು ಧಾರಣಿ ಸಿಕ್ಕರೂ ರೂ. 2.25ಲಕ್ಷ ಬರುತ್ತದೆ. ಪ್ರತಿ ಲಾರಿ ಬಾಡಿಗೆಗೆ ರೂ. 28ಸಾವಿರ, ಲಾರಿಯೊಡನಿರುವವರ ಖರ್ಚು ರೂ. 2 ಸಾವಿರದಂತೆ ಒಟ್ಟು ರೂ. 90 ಸಾವಿರ ಸಾಗಾಣಿಕೆಯ ಖರ್ಚು. ಬೆಳೆ ಬೆಳೆಯಲು ರೂ. 55ಸಾವಿರ ವೆಚ್ಚ ಸೇರಿ ರೂ. 90ಸಾವಿರ ಉಳಿಯುತ್ತದೆ. ಅಂದರೆ ಮೂರು ತಿಂಗಳಿನಲ್ಲಿ ಪ್ರತಿ ಎಕರೆಗೆ ರೂ. 10ರಿಂದ 11ಸಾವಿರದಷ್ಟು ಲಾಭ ಸಿಗುತ್ತದೆ ಎಂದು ಹೇಳುತ್ತಾರೆ.

ಇವರದೊಂದು ಕಥೆಯಾದರೆ, ಹೂ, ಕಾಯಿ ಬಿಡುವ ಹೊತ್ತಿನಲ್ಲಿಯೇ ಬಳ್ಳಿಗೆ ರೋಗ ಬಿದ್ದು ಎಲ್ಲಾ ಉದುರಿ ಹೋಗಿವೆ. ರೋಗಕ್ಕೆ ಎಷ್ಟೇ ಔಷಧೋಪಚಾರ ಮಾಡಿದರೂ ಹತೋಟಿಗೆ ಬರಲಿಲ್ಲ. ಒಂದೇ ಒಂದು ಕಾಯಿಯನ್ನೂ ಹರಿದು ಮನೆಗೆ ತರಲಿಲ್ಲ. ಎಲ್ಲವನ್ನೂ ಗಳೆ ಹೊಡೆದು ಸಾಪ ಮಾಡಿವ್ರೀ, 3ಎಕರೆ ಕುಂಬಳ ಬೆಳೆಯಲು ರೂ. 30ಸಾವಿರ ಖರ್ಚು ಮಾಡಿದ್ದರೂ ಏನೂ ಉಪಯೋಗ ಆಗಲಿಲ್ಲ ಎಂದು ಸಂಕಟದಿಂದ ಹೇಳುತ್ತಾರೆ ಬಾಡಗಿ ಗ್ರಾಮದ ಹನುಮಂತ ಲಚ್ಚಪ್ಪ ಜಕರೆಡ್ಡಿ.

 ಬಾರಿ ಮಳೆಯಾಗಿ ಪೇಟೆಗೆ ತರಕಾರಿ ಸರಬರಾಜು ಆಗದಿದ್ದಲ್ಲಿ ಕುಂಬಳಕ್ಕೆ ಭಾರಿ ಧಾರಣಿ ಬರುತ್ತದೆಂದು ಅನುಭವಿ ರೈತರು ಹೇಳುತ್ತಾರೆ. ಕಳೆದ ಬಾರಿ ಕುಂಬಳಕ್ಕೆ ಪ್ರತಿ ಕೆ.ಜಿ.ಗೆ ರೂ. 10ರಷ್ಟು ಧಾರಣಿ ಸಿಕ್ಕಿದ್ದನ್ನು ನೆನಪಿಸಿಕೊಳ್ಳುವ ಅವರು “ಈ ಸರ್ತೇಕ ನಶೀಬ ಚೊಲೋ ಇಲ್ರೀ,  ಮಾರಾಟ ಯಾರ ಕೈಗೂ ಸಿಕ್ಕಿಲ್ಲ ನೋಡ್ರೀ, ಇದು ಜೂಜಿದ್ದಾಂಗ, ಹೊಡದ್ರ ಲಾಟ್ರೀ ಹೊಡ್ದ ಬಿಡತೈತಿ, ಇರ‌್ಲಿಕ್ರ ಎಲ್ಲಾನೂ ಬಳಕೊಂಡ ಹೋಗತೈತಿ ನೋಡ್ರಿ” ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.