ADVERTISEMENT

ಭೂಸ್ವಾಧೀನ ಪ್ರಕ್ರಿಯೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 7:15 IST
Last Updated 1 ಫೆಬ್ರುವರಿ 2011, 7:15 IST

ಬಾಗಲಕೋಟೆ: “ಕುಡಚಿ-ಬಾಗಲಕೋಟೆ ಹೊಸ ರೈಲುಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಜಮೀನು ಒದಗಿಸಲು ಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ರೈಲ್ವೆ ಇಲಾಖೆಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು” ಎಂದು ಬ್ರಾಡಗೇಜ್ ರೈಲ್ವೆ ಹೋರಾಟ ಸಮಿತಿ ಒತ್ತಾಯಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರನ್ನು ಸೋಮವಾರ ಭೇಟಿ ಮಾಡಿದ ಹೋರಾಟ ಸಮಿತಿ ಪದಾಧಿಕಾರಿಗಳು, ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಮನವಿ ಮಾಡಿಕೊಂಡರು.

“ರೈಲ್ವೆ ಇಲಾಖೆಯು 70 ಕಿ.ಮೀ. ಅಂತಿಮ ಜಾಗೆಯನ್ನು ಗುರುತಿಸಿದೆ. ಈ ಜಮೀನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರವನ್ನೂ ಬರೆದಿದೆ. ಆದರೆ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಇದುವರೆಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿಲ್ಲ” ಎಂದು ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ಅಸಮಾಧಾನ ವ್ಯಕ್ತಪಡಿಸಿದರು.

“ಭೂಸ್ವಾಧೀನ ವಿಳಂಬಗೊಂಡಷ್ಟು ರೈಲುಮಾರ್ಗ ನಿರ್ಮಾಣ ವಿಳಂಬವಾಗುತ್ತದೆ. ಆದ್ದರಿಂದ ತಕ್ಷಣವೇ ಭೂಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕು” ಎಂದು ಸಚಿವ ಕಾರಜೋಳ ಅವರನ್ನು ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕಾರಜೋಳ, “ರೈಲ್ವೆ ಯೋಜನೆಗಳನ್ನು 50:50 ಅನುಪಾತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ರೈಲ್ವೆ ಇಲಾಖೆ ಹಣ ಬಿಡುಗಡೆಗೊಳಿಸಿದ ಬಳಿಕವೇ ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗುವುದು” ಎಂದರು.

ವಿಳಂಬ ಸಲ್ಲದು: “ರೈಲ್ವೆ ಇಲಾಖೆಯ ಬೇಡಿಕೆಯಂತೆ ರಾಜ್ಯ ಸರ್ಕಾರ ತಕ್ಷಣವೇ ಭೂಸ್ವಾಧೀನಪಡಿಸಿಕೊಂಡು ಆ ಇಲಾಖೆಗೆ ಹಸ್ತಾಂತರಿಸಿದರೆ ಮಾರ್ಗ ನಿರ್ಮಾಣ ಕಾಮಗಾರಿ ಆರಂಭಿಸಲು ಅನುಕೂಲವಾಗುತ್ತದೆ. ರೈಲ್ವೆ ಇಲಾಖೆ ಮೊದಲು ಹಣ ಬಿಡುಗಡೆ ಮಾಡಲಿ ಎಂದು ರಾಜ್ಯ ಸರ್ಕಾರ ಪಟ್ಟು ಹಿಡಿದರೆ ಮಾರ್ಗ ನಿರ್ಮಾಣ ವಿಳಂಬವಾಗುತ್ತದೆ” ಎಂದು ಕುತುಬುದ್ದೀನ್ ಖಾಜಿ ಹೇಳಿದರು.

ರಾಜ್ಯ ಸರ್ಕಾರ ಭೂಮಿ ಒದಗಿಸಿದರೆ ಸಾಕು; ಕಾಮಗಾರಿ ಆರಂಭಿಸುತ್ತೇವೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಹಲವಾರು ಬಾರಿ ತಿಳಿಸಿದ್ದಾರೆ. ಆದ್ದರಿಂದ ವಿನಾಕಾರಣ ವಿಳಂಬಕ್ಕೆ ಆಸ್ಪದ ನೀಡದೇ ರಾಜ್ಯ ಸರ್ಕಾರವೇ ಆರಂಭಿಕ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿಕೊಂಡರು.ರಾಜ್ಯ ಸರ್ಕಾರ ಭೂಮಿ ಹಸ್ತಾಂತರಿಸಿದ ತಕ್ಷಣವೇ ರೈಲ್ವೆ ಇಲಾಖೆ ಮೇಲೆ ಒತ್ತಡ ಹೇರಿ ಕಾಮಗಾರಿ ಆರಂಭಿಸಬಹುದು ಎಂಬುದು ಖಾಜಿ ಅವರ ವಾದವಾಗಿದೆ.

ಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಬಾಗಲಕೋಟೆ ಮತ್ತು ಬಾದಾಮಿ ತಾಲ್ಲೂಕಿನ ಕೆಲವು ಜಮೀನುಗಳನ್ನು ಸ್ವಾಧೀನತೆ ಕುರಿತು ಪ್ರಾಥಮಿಕ ಚೌಕಾಶಿ ಮಾಡಿ ಭೂಸ್ವಾಧೀನ ಕಾಯ್ದೆ 4(1) ಅಡಿಯಲ್ಲಿ ಕರಡು ಅಧಿಸೂಚನೆ ತಯಾರಿಸುವಂತೆ ಕೋರಿ ಅಪರ ಜಿಲ್ಲಾಧಿಕಾರಿಗಳು ಉಪ ವಿಭಾಗಾಧಿಕಾರಿಗಳಿಗೆ ಬರೆದ ಪತ್ರವನ್ನು ಖಾಜಿ ಸಚಿವರಿಗೆ ತೋರಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಗ್ಗಜಗ್ಗಾಟದಲ್ಲಿ ಯೋಜನೆ ವಿಳಂಬಗೊಳಿಸಿದರೆ ಎರಡೂ ಸರ್ಕಾರಗಳ ವಿರುದ್ಧ ಜನಾಂದೋಲನ ನಡೆಸಲಾಗುವುದು ಎಂದು ಹೋರಾಟ ಸಮಿತಿ ಅಧ್ಯಕ್ಷ ಖಾಜಿ ಎಚ್ಚರಿಕೆ ನೀಡಿದ್ದಾರೆ.

“ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯವಿರುವ ಕ್ರಮ ಕೈಗೊಳ್ಳಲು ಶಾಸಕ ವೀರಣ್ಣ ಚರಂತಿಮಠ ಒಲವು ವ್ಯಕ್ತಪಡಿಸಿದರು. ಆದರೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳರು ಯಾವುದೇ ಸ್ಪಷ್ಟ ಭರವಸೆ ನೀಡಲಿಲ್ಲ” ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.ಸಚಿವರ ಜತೆ ಚರ್ಚೆ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ, ಹೋರಾಟ ಸಮಿತಿ ಸದಸ್ಯರಾದ ಸಿ.ವಿ.ಕೋಟಿ, ಮಂಜುಳಾ ಭೂಸಾರೆ, ಶಶಿಕಾಂತ ಬಾಳಿಕಾಯಿ, ವಿ.ಜಿ.ಪೂಜಾರ, ನಾರಾಯಣಸಾ ಪವಾರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.