ADVERTISEMENT

ಮತದಾರರ ಜಾಗೃತಿಗೆ `ಕರಪತ್ರ' ಅಭಿಯಾನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 7:14 IST
Last Updated 22 ಏಪ್ರಿಲ್ 2013, 7:14 IST

ಬಾಗಲಕೋಟೆ: ವಾರ್ತಾ ಇಲಾಖೆಯು ಸ್ವೀಪ್ ಯೋಜನೆಯಡಿಯಲ್ಲಿ ಮತದಾರರ ಜಾಗೃತಿಗೆ ಹಮ್ಮಿಕೊಂಡ ಕರಪತ್ರ ಹಂಚಿಕೆ ಅಭಿಯಾನಕ್ಕೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ.ಪಾಟೀಲ ಭಾನುವಾರ ನವನಗರದ ವಾಂಬೆ ಕಾಲೊನಿಯಲ್ಲಿ ಮನೆ ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, `ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು, ಯಾವುದೇ ಆಮಿಷಕ್ಕೆ ಒಳಗಾಗದೇ ನಿರ್ಭಯದಿಂದ ಮತದಾನದ ದಿನ ತಪ್ಪದೇ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ' ಎಂದರು.   `ಜಿಲ್ಲೆಯಲ್ಲಿ 6,51,869 ಪುರುಷ ಹಾಗೂ 6,32,814 ಮಹಿಳಾ ಮತದಾರರು ಸೇರಿ ಒಟ್ಟು 12,84,683 ರಷ್ಟು ಮತದಾರರ ಜೊತೆಗೆ ಸುಮಾರು 32 ಸಾವಿರ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದು, ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಬೇಕು'ಎಂದು ಹೇಳಿದರು.

ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ  ಸುಳ್ಳೊಳ್ಳಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶ್ರಿಶೈಲ ಕಂಕಣವಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಸ್.ಜಿ.ಪಾಟೀಲ ಇನ್ನಿತರ ಅಧಿಕಾರಿಗಳು, ಯುವಕರು ಕಾಲ್ನಡಿಗೆಯಲ್ಲಿ  ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.