ADVERTISEMENT

ರೈತರಿಗೆ ಮಾರುಕಟ್ಟೆ ತಿಳಿವಳಿಕೆ ಅಗತ್ಯ: ದಂಡಿನ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2011, 9:20 IST
Last Updated 29 ಮಾರ್ಚ್ 2011, 9:20 IST
ರೈತರಿಗೆ ಮಾರುಕಟ್ಟೆ ತಿಳಿವಳಿಕೆ ಅಗತ್ಯ: ದಂಡಿನ
ರೈತರಿಗೆ ಮಾರುಕಟ್ಟೆ ತಿಳಿವಳಿಕೆ ಅಗತ್ಯ: ದಂಡಿನ   

ಬಾಗಲಕೋಟೆ: ‘ದಕ್ಷಿಣ ಭಾರತದಲ್ಲಿ ಅಮೂಲ್ಯವಾದ 16 ಬಗೆಯ ಸಾಂಬಾರು ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ರೈತರು ಒಂದೇ ಬಗೆಯ ಬೆಳೆಗಳಿಗೆ ಅಂಟಿಕೊಳ್ಳದೇ ಮಾರುಕಟ್ಟೆಯ ಸ್ಥಿತಿಗತಿ ಆಧರಿಸಿ ಸೂಕ್ತ ಬೆಳೆಗಳಿಗೆ ಆದ್ಯತೆ ನೀಡಬೇಕು’ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಬಿ. ದಂಡಿನ ಸಲಹೆ ನೀಡಿದರು.ತೋಟಗಾರಿಕೆ ವಿವಿ- ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ಆಶ್ರಯದಲ್ಲಿ ನಗರದ ಅಥಣಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಸಾಂಬಾರು ಬೆಳೆ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಂದು ಬೆಳೆಗಳ ವೈಜ್ಞಾನಿಕ ಉಪಯುಕ್ತತೆ ಹಾಗೂ ಮಾರುಕಟ್ಟೆ ಕುರಿತು ರೈತರು ತಿಳಿವಳಿಕೆ ಹೊಂದಿದರೆ ಮಾತ್ರ ಕೃಷಿ ಲಾಭದಾಯಕವಾಗುತ್ತದೆ ಎಂದರು.“ಉತ್ತರ ಕರ್ನಾಟಕದ ಬ್ಯಾಡಗಿ ಮೆಣಸಿನಕಾಯಿ ಜಗತ್ಪ್ರಸಿದ್ಧವಾಗಿದೆ. ಈ ಭಾಗದ ಬೆಳ್ಳುಳ್ಳಿ ಮತ್ತು ಅರಿಷಿಣ 27 ಬಗೆಯ ರೋಗಗಳಿಗೆ ಔಷಧಿಯಾಗಿ ಬಳಸಲ್ಪಡುತ್ತದೆ” ಎಂದು ಕುಲಪತಿ ಡಾ.ದಂಡಿನ ಹೇಳಿದರು.
ಯೋಜನಾ ಮುಖ್ಯಸ್ಥ ಡಾ.ಟಿ.ಬಿ.ಅಳ್ಳೊಳ್ಳಿ, ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ಆರ್.ಸಿ.ಹಳ್ಳಿಕೇರಿ, ಎಸ್.ಡಿ.ಸಂಪತ್ ಸಾಮ್ರಾಜ್ಯ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಬಿ.ದಿಡ್ಡಿಮನಿ ಮತ್ತಿತರರು ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಮಂಡಳಿ ಸದಸ್ಯೆ ಡಾ.ಇಸಬೆಲ್ಲಾ ಝೇವಿಯರ್, ರೈತರಾದ ಬಸಪ್ಪ ಭಂಗಿ ಮತ್ತು ಲತಾ ಶೀಲವಂತ ಅವರು ಸಾಂಬಾರು ಹಾಗೂ ತೋಟಗಾರಿಕೆ ಬೆಳೆಗಳ ಕುರಿತು ಮಾತನಾಡಿದರು.ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಬಿ.ಎಂ.ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಕೆ.ಆರ್. ರಾಮಚಂದ್ರ ನಾಯಕ ಪ್ರಾರ್ಥಿಸಿದರು.  ರೇಂಜು ಹಾಗೂ ಸಂಗಡಿಗರು ರೈತಗೀತೆ ಹಾಡಿದರು. ತೋವಿವಿ ಸಂಶೋಧನಾ ನಿರ್ದೇಶಕ ಡಾ.ಪಿ.ನಾರಾಯಣಸ್ವಾಮಿ ಸ್ವಾಗತಿಸಿದರು. ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ವಸಂತ ಗಾಣಿಗೇರ ನಿರೂಪಿಸಿದರು. ವಿಸ್ತರಣಾ ನಿರ್ದೇಶಕ ವೈ.ಕೆ.ಕೋಟಿಕಲ್ ವಂದಿಸಿದರು.

ಸಾಂಬಾರು ಬೆಳೆ, ಸಂಸ್ಕರಣೆ, ಮಾರುಕಟ್ಟೆ, ಸಾಂಬಾರು ಮಂಡಳಿಯಿಂದ ರೈತರಿಗೆ ಸಿಗುವ ಸೌಲಭ್ಯಗಳು, ಸಾಂಬಾರು ಬೆಳೆಗಳಲ್ಲಿ ಸಾವಯವ ಕೃಷಿ ಅಳವಡಿಕೆ, ಕೀಟ ನಿರ್ವಹಣೆ, ಬ್ಯಾಡಗಿ ಮೆಣಸಿನಕಾಯಿ ರಫ್ತು ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರು ಮಾತನಾಡಿದರು. ವಿಜಾಪುರ, ಬಾಗಲಕೋಟೆ, ಕೊಪ್ಪಳ, ರಾಯಚೂರು ಮತ್ತಿತರ ಜಿಲ್ಲೆಗಳ ರೈತರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.