ADVERTISEMENT

ರೈಲು ಮಾರ್ಗಕ್ಕೆ ಭೂಮಿ: ಧರಣಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2012, 9:05 IST
Last Updated 10 ನವೆಂಬರ್ 2012, 9:05 IST

ಬಾಗಲಕೋಟೆ: ಉದ್ದೇಶಿತ ಬಾಗಲಕೋಟೆ-ಕುಡುಚಿ ರೈಲು ಮಾರ್ಗ ನಿರ್ಮಾಣದಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಹೆಚ್ಚಿನ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಾಗಲಕೋಟೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸಂತ್ರಸ್ತರು ಜಿಲ್ಲಾಡಳಿತ ಭವನದ ಮುಂಭಾಗ ಐದು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನಾ ಧರಣಿಯನ್ನು ಶುಕ್ರವಾರ ಅಂತ್ಯಗೊಂಡಿತು.
 
ಭೂಮಿ ಕಳೆದುಕೊಳ್ಳುವ ಪ್ರತಿ ರೈತನ ಕುಟುಂಬದ ಒಬ್ಬರಿಗೆ `ಡಿ~ ದರ್ಜೆ ನೌಕರಿ ನೀಡಬೇಕು, ರೈಲು ಮಾರ್ಗ ಹಾದು ಹೋಗುವ ಜಮೀನನ್ನು ವಶಪಡಿಸಿಕೊಂಡ ಬಳಿಕ ಉಳಿಯುವ ತುಂಡು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು, ಭೂಮಿಯ ಪರಿಹಾರ ಧನವನ್ನು ಶೇ 25ರ ಬದಲಾಗಿ ಶೇ 75 ನೀಡಬೇಕು ಎಂಬ ಸಂತ್ರಸ್ತರ ಬೇಡಿಕೆಗಳನ್ನು ರೈಲ್ವೆ ಇಲಾಖೆ ಮತ್ತು ಸರ್ಕಾರದ ಗಮನಕ್ಕೆ ತರುವುದಾಗಿ ಉಪವಿಭಾಗಾಧಿಕಾರಿ ಅವರು ಈಚೆಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಧರಣಿಯನ್ನು ಹಿಂತೆಗೆದುಕೊಂಡರು.

ಸಂತ್ರಸ್ತರ ಬೇಡಿಕೆ ಈಡೇರಿಸದಿದ್ದರೇ ಯಾವುದೇ ಕಾರಣಕ್ಕೂ ರೈಲು ಮಾರ್ಗ ನಿರ್ಮಾಣಕ್ಕೆ ಭೂಮಿ ಕೊಡುವುದಿಲ್ಲ, ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಅಪರ ಜಿಲ್ಲಾಧಿಕಾರಿ ಸಿರಸಗಿ ನಾಗಪ್ಪರಿಗೆ ಬೇಡಿಕೆಗಳನ್ನು ಒಳಗೊಂಡ ಮನವಿ ಸಲ್ಲಿಸಿದರು.

ಬಾಗಲಕೋಟೆ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಮುಖರಾದ ವೈ.ಆರ್.ಲಮಾಣಿ, ಮನೋಹರ ಚಿತ್ತರಗಿ, ಬಸಪ್ಪ ಸ್ವಾಗಿ, ದೇನಪ್ಪ ಲಮಾಣಿ, ರೇವಣಪ್ಪ ಲಮಾಣಿ, ಹೀರೂ ಲಮಾಣಿ, ಶಂಕ್ರಪ್ಪ ಲಮಾಣಿ, ಸಂಗಪ್ಪ ಕೊಪ್ಪದ, ಗಂಗರಾಮ ಲಮಾಣಿ, ರಾಮ ಲಮಾಣಿ, ಭೀಮಪ್ಪ ಲಮಾಣಿ, ಕೃಷ್ಣಪ್ಪ ಲಮಾಣಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.