ADVERTISEMENT

ವ್ಯಾಟ್ ಹೆಚ್ಚಳಕ್ಕೆ ಸರಾಫರ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2011, 10:50 IST
Last Updated 26 ಮಾರ್ಚ್ 2011, 10:50 IST
ವ್ಯಾಟ್ ಹೆಚ್ಚಳಕ್ಕೆ ಸರಾಫರ ವಿರೋಧ
ವ್ಯಾಟ್ ಹೆಚ್ಚಳಕ್ಕೆ ಸರಾಫರ ವಿರೋಧ   

ಜಮಖಂಡಿ: ಚಿನ್ನ ಮತ್ತು ಬೆಳ್ಳಿ ಮಾರಾಟದ ಮೇಲಿನ ವ್ಯಾಟ್ ದರವನ್ನು ಬಜೆಟ್‌ನಲ್ಲಿ ಹೆಚ್ಚಿಸಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ  ಜಮಖಂಡಿ ತಾಲ್ಲೂಕು ಸರಾಫ್ ಸಂಘದ ಸದಸ್ಯರು ಶುಕ್ರವಾರ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ರಾಜ್ಯ ಚಿನ್ನ-ಬೆಳ್ಳಿ ವರ್ತಕರು ನೀಡಿರುವ ಕರ್ನಾಟಕ ಬಂದ್ ಕರೆಗೆ ಸ್ಪಂದಿಸಿ ಸರಾಫ್ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಇಲ್ಲಿನ ಸರಾಫ್ ಬಜಾರ್ ಬಂದ್ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದರು. ನಂತರ ಮೆರವಣಿಗೆಯಲ್ಲಿ ತಹಸೀಲ್ದಾರ ಕಾರ್ಯಾಲಯಕ್ಕೆ ತೆರಳಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

ಚಿನ್ನ ಮತ್ತು ಬೆಳ್ಳಿ ಮೇಲಿನ ವ್ಯಾಟ್ ದರವನ್ನು ಶೇ.1 ರಿಂದ ಶೇ.2ಕ್ಕೆ ಹೆಚ್ಚಿಸುವ ಸರಕಾರದ ನಿರ್ಧಾರವನ್ನು ಮನವಿಯಲ್ಲಿ ತೀವ್ರವಾಗಿ ಖಂಡಿಸಲಾಗಿದೆ. ವ್ಯಾಟ್ ದರವನ್ನು ಹೆಚ್ಚಿಸುವುದರಿಂದ ಸರಕಾರಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂದು ವಿವರಿಸಲಾಗಿದೆ. ವ್ಯಾಟ್ ದರದಲ್ಲಿ ಇಳಿಮುಖವಾದಾಗ ಸರಕಾರಕ್ಕೆ ಲಾಭ ಹೆಚ್ಚಾಗಿದೆ ಎಂಬುದು ಅಂಕಿಅಂಶಗಳಿಂದ ಕಂಡು ಬರುತ್ತದೆ. ಆರಂಭದಲ್ಲಿ ವ್ಯಾಟ್ ದರ ಶೇ.12 ಇತ್ತು. ನಂತರದ ದಿನಗಳಲ್ಲಿ ಅದನ್ನು ಶೇ.8, 4, 2 ಮತ್ತು 1 ಕ್ಕೆ ಇಳಿಸುತ್ತ ಬರಲಾಗಿತ್ತು.

ಹೀಗೆ ವ್ಯಾಟ್ ದರದಲ್ಲಿನ ಇಳಿಕೆಯಿಂದಾಗಿ ಪ್ರಾಮಾಣಿಕ ವ್ಯವಹಾರಗಳು ಹೆಚ್ಚಾಗಿ ಗ್ರಾಹಕರು ವ್ಯಾಟ್ ಮೊತ್ತವನ್ನು ಪಾವತಿಸುತ್ತ ಬಂದಿದ್ದಾರೆ. ಅದರಿಂದ ತೆರಿಗೆ ಹಣ ಸಂಗ್ರಹಣೆಯಲ್ಲಿ ಹೆಚ್ಚಳಗೊಂಡಿದೆ. ಇಂದಿನ ದಿನಮಾನಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಗಗನಕ್ಕೇರಿವೆ. ಜನಸಾಮಾನ್ಯರ ಕೈಗೆ ಎಟುಕದಂತಾಗಿವೆ. ಹಾಗಾಗಿ ಚಿನ್ನ ಮತ್ತು ಬೆಳ್ಳಿ ವ್ಯಾಪಾರ ಕುಂಠಿತಗೊಂಡಿದೆ. ಆದ್ದರಿಂದ ಸುವರ್ಣಕಾರರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಇಂಥದರಲ್ಲಿ ವ್ಯಾಟ್ ದರವನ್ನು ಇನ್ನಷ್ಟು ಹೆಚ್ಚಿಸಿದರೆ ವ್ಯಾಪಾರ ಮತ್ತಷ್ಟು ಕುಸಿಯುತ್ತದೆ. ನೆರೆ ರಾಜ್ಯಗಳಲ್ಲಿ ವ್ಯಾಟ್ ದರ ಶೇ.1ಕ್ಕಿಂತ ಕಡಿಮೆ ಇದೆ. ರಾಜ್ಯದ ಗ್ರಾಹಕರು ನೆರೆ ರಾಜ್ಯಗಳಿಗೆ ತೆರಳಿ ಚಿನ್ನ-ಬೆಳ್ಳಿ ಖರೀದಿಗೆ ಮುಂದಾಗುವ ಸಾಧ್ಯತೆ ಇದೆ. ಹಾಗಾದಲ್ಲಿ ಚಿನ್ನ-ಬೆಳ್ಳಿ ವ್ಯಾಪಾರಕ್ಕೆ ರಾಜ್ಯದಲ್ಲಿ ಹಿನ್ನಡೆಯಾಗಲಿದೆ. ಆದ್ದರಿಂದ ವ್ಯಾಟ್ ದರ ಹೆಚ್ಚಳವನ್ನು ಕೈಬಿಡಬೇಕು. ವ್ಯಾಟ್ ದರವನ್ನು ಶೇ.1 ರಿಂದ ಶೇ.0.5ಕ್ಕೆ ಇಳಿಸಿ ಚಿನ್ನ-ಬೆಳ್ಳಿ ವ್ಯಾಪಾರಸ್ಥರ ಮತ್ತು ಸುವರ್ಣಕಾರರ ಹಿತಕಾಪಾಡಬೇಕು ಎಂದು ಕೋರಲಾಗಿದೆ.

ನ್ಯಾಯಯುತ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು ಎಂದು ತಾಲ್ಲೂಕು ಸರಾಫ ಸಂಘದ ಅಧ್ಯಕ್ಷರು, ಉಪಾಧ್ಯಕ್ಷ ಸಿದ್ಧೇಶ್ವರ ಇಂಗಳಗಿ, ಕಾರ್ಯದರ್ಶಿ ಮನಸುಖ ಭಂಡಾರಿ, ಕೋಶಾಧಿಕಾರಿ ಅಚ್ಯುತ ಪತ್ತಾರ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.