ADVERTISEMENT

ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 12:05 IST
Last Updated 9 ಫೆಬ್ರುವರಿ 2011, 12:05 IST

ಬಾಗಲಕೋಟೆ:  ನಿವೃತ್ತಿ ವಯಸ್ಸನ್ನು 58ಕ್ಕೆ ಇಳಿಸಬೇಕು, ಶಿಕ್ಷಕ  ತರಬೇತಿ ಪಡೆದ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ನೀಡಬೇಕು ಹಾಗೂ ಶಿಕ್ಷಕರ ನೇಮಕಾತಿ ಪದ್ಧತಿಯಲ್ಲಿ ಬದಲಾವಣೆ ತರಬೇಕು ಎಂದು ಆಗ್ರಹಿಸಿ ಶ್ರೀ ರಾಧಾಕೃಷ್ಣನ್ ನಿರುದ್ಯೋಗ ಶಿಕ್ಷಕ ಸಂಘದ ಸದಸ್ಯರು ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಿದರು.

ರಾಜ್ಯದಲ್ಲಿ ಡಿ.ಇಡಿ, ಬಿ.ಇಡಿ, ಬಿ.ಪಿಇಡಿ, ಸಿ.ಪಿಇಡಿ ಕಾಲೇಜುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪ್ರತಿವರ್ಷ ಸುಮಾರು 93 ಸಾವಿರ ಜನರು ಶಿಕ್ಷಕರ ತರಬೇತಿ ಪಡೆದು ಹೊರಬರುತ್ತಿದ್ದು, ಇವರಿಗೆಲ್ಲ ಉದ್ಯೋಗ ದೊರಕದಿರುವುದರಿಂದ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಶಿಕ್ಷಣ ಸಚಿವ ಕಾಗೇರಿ ಅವರು ಸದ್ಯಕ್ಕೆ ಶಿಕ್ಷಕರ ನೇಮಕಾತಿ ನಡೆಸುವುದಿಲ್ಲ ಎಂದು ಹೇಳಿಕೆ ನೀಡಿರುವುದು ಉದ್ಯೋಕಾಂಕ್ಷಿಗಳಿಗೆ ಆಘಾತ ಮೂಡಿಸಿದೆ ಎಂದರು.ಸರ್ಕಾರ ಕೂಡಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು, ಒಂದು ವೇಳೆ ನೇಮಕಾತಿ ಪ್ರಕ್ರಿಯೆ ವಿಳಂಬಗೊಂಡರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಮೃತ್ಯುಂಜಯ ತೆಳಗಿನಮನಿ ಎಚ್ಚರಿಕೆ ನೀಡಿದರು.

ನಿವೃತ್ತಿ ವಯಸ್ಸನ್ನು 60ರಿಂದ 58ಕ್ಕೆ ಇಳಿಸಬೇಕು; ಮಾಹಿತಿ ಸಿಂಧುವಿಗೆ ಶಿಕ್ಷಕರ ತರಬೇತಿ ಪೂರೈಸಿದವರನ್ನು ನೇಮಿಸಬೇಕು; ಮೊರಾರ್ಜಿ ದೇಸಾಯಿ ವಸತಿಶಾಲೆಗಳಲ್ಲಿ ಸಿಇಟಿ ಆಧಾರದ ಮೇಲೆ ಶಿಕ್ಷಕರ ನೇಮಕ; ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಮಾದರಿಯಲ್ಲಿ ನೇಮಕಾತಿ ನಡೆಸಬೇಕು; ನಿರುದ್ಯೋಗಿಗಳಿಗೆ ಭತ್ಯೆ ನೀಡಬೇಕು; ಪ್ರೌಢಶಾಲೆಗಳಿಗೆ 30:1 ಅನುಪಾತದಲ್ಲಿ ಶಿಕ್ಷಕರನ್ನು ನೇಮಿಸಬೇಕು; ಮಾಧ್ಯಮಿಕ ಶಿಕ್ಷಣ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾನಿರತರು ಒತ್ತಯಿಸಿದರು.

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಕಾಶಿನಾಥ ಹೊನಕೇರಿ ಅವರಿಗೆ ಮನವಿಪತ್ರ ಅರ್ಪಿಸಲಾಯಿತು.ಶ್ರೀ ರಾಧಾಕೃಷ್ಣನ್ ನಿರುದ್ಯೋಗ ಶಿಕ್ಷಕ ಸಂಘದ ಅಧ್ಯಕ್ಷ ಸಂಜೀವ ಕಡಪಟ್ಟಿಮಠ, ಸದಾಶಿವ, ಸುರೇಶ ಮಾಲಗಾಂವಿ, ಕುಮಾರ ಕೆಳಗಿನಮನಿ, ಶಿವಾನಂದ ಚಿಂಚಲಿ, ಸಲೀಂ, ದೀಪಕ್ ಮೊಳೆನ್ನವರ, ನೀಲಕಂಠ ಬೀಳೂರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.