ADVERTISEMENT

ಸಂಘಟನೆಗೆ ಒತ್ತು ನೀಡಿ: ಬಣಜಿಗರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಮೇ 2012, 8:20 IST
Last Updated 1 ಮೇ 2012, 8:20 IST

ಬಾಗಲಕೋಟೆ: ಬಣಜಿಗರು ಪಕ್ಷಾತೀತವಾಗಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ನಿಷ್ಕಲ್ಮಶ ಮನಸ್ಸಿನಿಂದ ಒಂದಾಗಿ ಸಂಘಟಿತರಾಗಬೇಕೆಂದು ನಿವೃತ್ತ ಜಿಲ್ಲಾಧಿಕಾರಿ ಮಹಾಂತೇಶ ಗೊಂಗಡಶೆಟ್ಟರ ಸಲಹೆ ನೀಡಿದರು.

ನಗರದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ  ತಾಲ್ಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸಂಘಟನಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಂಘಟನೆ ತುಂಬಾ ಹಿಂದುಳಿದಿದ್ದು ಚುರುಕುಗೊಳಬೇಕಾಗಿದೆ.
ರಾಜ್ಯ ಸರ್ಕಾರವು ಬಣಜಿಗ ಸಮಾಜಕ್ಕೆ ಶಿಕ್ಷಣದ ಸಲುವಾಗಿ ಪ್ರವರ್ಗ-2ಎ ಮತ್ತು ಉದ್ಯೋಗಕ್ಕಾಗಿ 3ಎ ಸೌಲಭ್ಯವನ್ನು ನೀಡಿದೆ. ಇದರ ಮಾಹಿತಿಯನ್ನು ಪ್ರತಿಯೊಬ್ಬರು ಹೊಂದಬೇಕು ಮತ್ತು ಸದುಪಯೋಗ ಪಡಿಸಿಕೊಳ್ಳಬೇಕೆಂದು ಎಂದು ಹೇಳಿದರು.

ಜಿಲ್ಲೆಯ ಕೂಡಲಸಂಗಮದಲ್ಲಿ ಆದಷ್ಟು ಶೀಘ್ರದಲ್ಲಿ ರಾಜ್ಯಮಟ್ಟದ ಸಮ್ಮೇಳನವನ್ನು ಹಮ್ಮಿಕೊಳ್ಳಬೇಕಾಗಿದೆ. ಅದರ ಉಸ್ತುವಾರಿಯನ್ನು ಬಾಗಲಕೋಟೆ ಜಿಲ್ಲೆಯವರು ವಹಿಸಿಕೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಎಲ್ಲದರಲ್ಲೂ ಸಶಕ್ತರಾದ ಬಣಜಿಗರು ಸಂಘಟಿತರಾಗಿ ಶಿಕ್ಷಣ ಮತ್ತು ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಕಾರ್ಯವಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಮ್ಮ ಜನರನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸಬೇಕೆಂದು ಅತಿಥಿಗಳಾಗಿದ್ದ ಸಮಾಜದ ಹಿರಿಯ ಮುಖಂಡ ಈರಣ್ಣ ಬನ್ನೂರ ಹೇಳಿದರು.

ಬಣಜಿಗ ಸಮಾಜದ ಎಲ್ಲ ಬಂಧುಗಳು, ಕ್ಷೇಮಾಭಿವೃದ್ದಿ ಸಂಘದ ಸದಸ್ಯತ್ವವನ್ನು ಪಡೆದು ಸಂಘಟನೆಯನ್ನು ಬಲಪಡಿಸಬೇಕೆಂದು ಸಭೆಯಲ್ಲಿ ಪಾಲ್ಗೊಂಡಿದ್ದ ಬಸವ ಬಾಂಧವ್ಯ ಬೆಸುಗೆ ತರಬೇತಿ ಕೇಂದ್ರದ ಅಧ್ಯಕ್ಷ ಬಿ.ವಿ. ಹೊಂಗಲ  ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ತಪಶೆಟ್ಟಿ, ಆದಷ್ಟು ಶೀಘ್ರದಲ್ಲಿಯೇ  ಜಿಲ್ಲಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮೇ 13ರಂದು ಚರಂತಿಮಠದ ಶಿವಾನುಭವ ಮಂಟಪದಲ್ಲಿ ಬೆಳಿಗ್ಗೆ 10ಗಂಟೆಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಲ್ಲರೂ ಪಾಲ್ಗೊಳ್ಳಬೇಕೆಂದರು.

ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾವಲಗಿ ಮಾತನಾಡಿದರು. ಸಂಘಟನೆಯ ವಿಷಯವಾಗಿ ರವಿ ಕುಮುಟಗಿ ಮತ್ತು ಬೇವೂರಿನ ಮುರುಗೇಶ ವೈಜಾಪೂರ ಮಾತನಾಡಿದರು. ಪ್ರಿಯಾ ಶಿವನಗುತ್ತಿ ಪ್ರಾರ್ಥನಾ ಗೀತೆ ಹಾಡಿದರು. ಎಂ.ಐ. ಚಿಕ್ಕನರಗುಂದ ಸ್ವಾಗತಿಸಿದರು. ಕಾರ್ಯದರ್ಶಿ ಆನಂದ ಜಿಗಜಿನ್ನಿ ನಿರೂಪಿಸಿದರು. ಬಾಪೂ ದೇವನಗಾಂವಿ ವಂದಿಸಿದರು.

ಸಭೆಯಲ್ಲಿ ಸಮಾಜದ ಹಿರಿಯರಾದ ಬಸವ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿ.ಟಿ.ಡಿ.ಎ. ಮಾಜಿ ಸಭಾಪತಿ ಲಿಂಗರಾಜ ವಾಲಿ, ನಗರಸಭೆ ಉಪಾಧ್ಯಕ್ಷ ಶರಣಪ್ಪ ಗುಳೇದ, ಮಲ್ಲಪ್ಪಣ್ಣ ಜಿಗಳೂರ, ಮಲ್ಲಪ್ಪಣ್ಣ ಪಟ್ಟಣಶೆಟ್ಟಿ, ಷಣ್ಮುಖಪ್ಪ ಹದ್ಲಿ, ಸಂಗಮೇಶ ಕಳ್ಳಿಮನಿ, ವೀರೇಶ ಹುಂಡೇಕಾರ, ರುದ್ರೇಶ ಅಕ್ಕಿಮರಡಿ, ಮುತ್ತು ಜೋಳದ, ಶರಣು ಹುರಕಡ್ಲಿ, ವೀರೇಶ ಅಥಣಿ, ರಾಜು ಹಲಕುರ್ಕಿ, ಶರಣು ಬ್ಯಾಳಿ, ಸಂಗಣ್ಣ ಕಂಕಣಮೇಲಿ, ಈರಣ್ಣ ನಾವಲಗಿ, ಚಂದ್ರಶೇಖರ ಶೆಟ್ಟರ, ಸಂಗಪ್ಪ ವೈಜಾಪೂರ, ಶಿವಕರಣ ಯಾದವಾಡ, ಬಸವರಾಜ ಚಿನವಾಲರ, ಬ್ಯಾಡಗಿ ಶೆಟ್ಟರು, ಬಸವರಾಜ ಶೆಟ್ಟರ, ರವಿ ಕಲಾಳ, ಮುರುಗೇಶ ಶಿವನಗುತ್ತಿ, ರಾಜು ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.