ADVERTISEMENT

ಸಂಸ್ಕೃತಿ ಭಾರತಿ| ‘ವಿಶ್ವಕ್ಕೆ ಸಂಸ್ಕೃತ ತಾಯಿ ಭಾಷೆ'

ಕರ್ನಾಟಕ ಉತ್ತರ ಪ್ರಾಂತ ಕಾರ್ಯಕರ್ತರ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 16:30 IST
Last Updated 9 ಜೂನ್ 2019, 16:30 IST
ಬಾಗಲಕೋಟೆಲ್ಲಿ ಭಾನುವಾರ ಸಂಸ್ಕೃತ ಭಾರತಿ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕರ್ತರ ಗೋಷ್ಠಿಯನ್ನು ಅಖಿಲ ಭಾರತ ಪ್ರಕಾಶನ ಪ್ರಮುಖ ಸತ್ಯನಾರಾಯಣ ಉದ್ಘಾಟಿಸಿದರು.
ಬಾಗಲಕೋಟೆಲ್ಲಿ ಭಾನುವಾರ ಸಂಸ್ಕೃತ ಭಾರತಿ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕರ್ತರ ಗೋಷ್ಠಿಯನ್ನು ಅಖಿಲ ಭಾರತ ಪ್ರಕಾಶನ ಪ್ರಮುಖ ಸತ್ಯನಾರಾಯಣ ಉದ್ಘಾಟಿಸಿದರು.   

ಬಾಗಲಕೋಟೆ: ‘ವಿಶ್ವದ ಬಹುತೇಕ ಭಾಷೆಗಳಿಗೆ ಸಂಸ್ಕೃತ ತಾಯಿಯಾಗಿದೆ. ಅದನ್ನು ಬೆಳೆಸಿ ಶಾಶ್ವತವಾಗಿ ಉಳಿಸಿಕೊಂಡು ಹೋಗಲು ಎಲ್ಲರೂ ಮುಂದಾಗೋಣ’ ಎಂದು ಅಖಿಲ ಭಾರತ ಪ್ರಕಾಶನ ಪ್ರಮುಖ ಸತ್ಯನಾರಾಯಣ ಹೇಳಿದರು.

ಇಲ್ಲಿನ ಬಿವಿವಿ ಸಂಘದ ರುಡ್‌ಸೆಟ್‌ ಸಭಾಂಗಣದಲ್ಲಿ ಭಾನುವಾರ ನಡೆದ ಸಂಸ್ಕೃತಿ ಭಾರತಿ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕರ್ತರ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ‘ಸಂಸ್ಕೃತ ಭಾಷೆಗೆ ತನ್ನದೇ ಆದ ಮಹತ್ವವಿದೆ. ಸದ್ಯ, ಅದು ಎಲ್ಲರ ಜೀವ ಭಾಷೆಯಾಗಬೇಕು. ಪ್ರತಿಯೊಬ್ಬರು ಸಂಸ್ಕೃತ ಭಾಷೆ ಕಲಿಯಲು ಮುಂದಾಗಬೇಕು’ ಎಂದರು.

‘ಕಾರ್ಯಕರ್ತರಿಗೆ ಪ್ರೇರಣೆ ನೀಡಲು ಸಂಸ್ಕೃತ ಭಾರತೀ ಹೆಚ್ಚು ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿದೆ. ಜೊತೆಗೆ ವಿಶ್ವದ ಬಹುತೇಕ ದೇಶಗಳಲ್ಲಿ ಸಂಸ್ಕೃತ ಭಾಷಾ ಬೆಳವಣಿಗೆ ಕೆಲಸ ಅತ್ಯಂತ ಚುರುಕಾಗಿ ನಡೆದಿದೆ’ ಎಂದರು.

ADVERTISEMENT

ದಕ್ಷಿಣ ಕ್ಷೇತ್ರೀಯ ಸಂಘಟನಾ ಮಂತ್ರಿ ದತ್ತಾತ್ರೇಯ ವಜ್ರಳ್ಳಿ ಮಾತನಾಡಿ, ‘ಅತ್ಯಂತ ಸರಳ, ಸುಲಭವಾಗಿ ಕಲಿಯಬಹುದಾದ ಸಂಸ್ಕೃತ ಭಾಷೆ, ಮನೆ ಮನೆಗೆ ಮುಟ್ಟುವ ರೀತಿಯಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು. ವಿಶ್ವದ ನಾನಾ ದೇಶಗಳಲ್ಲಿ ಸಂಸ್ಕೃತವನ್ನು ಬಹಳ ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಇಂತಹ ಸಂಸ್ಕೃತ ಕಲಿಕೆಯಿಂದ ಜೀವನದಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಬೆಳೆಯಲು ಸಾಧ್ಯವಾಗುತ್ತದೆ’ ಎಂದರು.

ಸಂಸ್ಕೃತ ಭಾರತೀ ಉತ್ತರ ಕರ್ನಾಟಕ ಸಂಘಟನಾ ಮಂತ್ರಿ ಲಕ್ಷ್ಮೀನಾರಾಯಣ, ಉತ್ತರ ಕರ್ನಾಟಕ ಸಂಸ್ಕೃತ ಭಾರತೀ ಅಧ್ಯಕ್ಷ ಶಿರಸಿಯ ವಿ.ಜಿ.ಹೆಗಡೆ, ಪ್ರಾಂತ ಮಂತ್ರಿ ಕಲ್ಮೇಶ ಮಾತನಾಡಿದರು.

ಈ ಸಂದರ್ಭದಲ್ಲಿ ಬಾಗಲಕೋಟೆ ವಿಭಾಗ ಸಂಯೋಜಕ ಬಸವರಾಜ ಬಾಸೂರ, ವಿಜಯಪುರ ವಿಭಾಗ ಪ್ರಾಂತ ಸಂಪರ್ಕ ಪ್ರಮುಖ ರಾಮ್‌ಸಿಂಗ್ ರಜಪೂತ, ಮಲ್ಲಿಕಾರ್ಜುನ ರಾಜನಾಳ, ಎ.ಆರ್.ಅಂಬಲಿ, ಮಾಲಾ ರಾಜನಾಳ, ಬಳ್ಳಾರಿ ವಿಭಾಗ ಸಂಯೋಜಕ ಚಂದ್ರಶೇಖರ ಹಿರೇಮಠ, ಸಿದ್ದು ಕೋಲಾರ, ಧಾರವಾಡದ ಡಾ. ಪದ್ಮಾವತಿ ಸಿಂಗಾರಿ, ವಿಜಯಕುಮಾರ ದಾಬಡೆ, ಆರ್.ಟಿ.ಜೋಶಿ, ಬಿ.ಎಂ.ಗಡಗಿ, ಗದಗ ವಿಭಾಗ ಸಂಯೋಜಕ ಮಲ್ಲಿಕಾರ್ಜುನ ಹಿರೇಮಠ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.