ADVERTISEMENT

`ಸರ್ಕಾರಿ ಸೌಲಭ್ಯಕ್ಕಾಗೇ ಹಿಂದುಳಿದವರಾಗಬೇಡಿ'

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 6:24 IST
Last Updated 24 ಜೂನ್ 2013, 6:24 IST

ಮಹಾಲಿಂಗಪುರ: `ಕೇವಲ ಸರಕಾರದ ಸೌಲಭ್ಯಗಳನ್ನು ಪಡೆಯಲು ಹಿಂದುಳಿದವರಾಗದೇ ಸಮಾಜದ ಸಂಪೂರ್ಣ ಏಳಿಗೆಗಾಗಿ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ ಆದರೆ ಕೇವಲ ಸರಕಾರದ ಸೌಲಭ್ಯಗಳಿಗಾಗಿಯೇ ಹಿಂದುಳಿದವರಾಗಬೇಡಿ' ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರಿ ಹೇಳಿದರು.

ಭಾನುವಾರ ಇಲ್ಲಿಯ ಕೆಂಗೇರಿ ಮಡ್ಡಿಯ ಭಗೀರಥ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಹಾಗೂ ಭಗೀರಥ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. `ಉಪ್ಪಾರ ಜನಾಂಗವು ಕಡಿಮೆ ಜನಸಂಖ್ಯೆ ಹೊಂದಿದ್ದರೂ ಸಂಘಟನೆಯ ದೃಷ್ಟಿಯಿಂದ ಹೆಚ್ಚು ಶಕ್ತಿಯುತ. ಸಮಾಜವು ರಾಜ್ಯದಾದ್ಯಂತ ಹರಿದು ಹಂಚಿಹೋಗಿದ್ದರೂ ರಾಜಕೀಯವಾಗಿ ಅನೇಕರು ಬೆಳೆದಿದ್ದು ಅವರೆಲ್ಲರೂ ಸಮಾಜ ಒಗ್ಗೂಡಿಸುವ ಕೆಲಸ ಮಾಡಿದರೆ ಉಪ್ಪಾರರಿಗೆ ಉತ್ತಮ ಭವಿಷ್ಯವಿದೆ' ಎಂದು ಅಭಿಪ್ರಾಯ ಪಟ್ಟರು.

ನೇತೃತ್ವ ವಹಿಸಿದ್ದ ಸ್ಥಳೀಯ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಸಹಜಾನಂದ ಶ್ರಿಗಳು, ಕೇವಲ ಸ್ವಾರ್ಥ ಮತ್ತು ರಾಜಕೀಯಕ್ಕಾಗಿ ಸಂಘಟನೆಗಳನ್ನು ಬೆಳೆಸುವಲ್ಲಿ ಅರ್ಥವಿಲ್ಲ. ಸಮಾಜದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಹಿಂದುಳಿದವರ ಕಲ್ಯಾಣಕ್ಕಾಗಿ ಸಂಘಟನೆಗಳ ಅವಶ್ಯಕತೆ ಇದೆ' ಎಂದು ಹೇಳಿದರು. ರಾಜ್ಯದ ಹಿಂದಿನ ಉಪ್ಪಾರ ಸಮಾಜದ ಅಧ್ಯಕ್ಷ ಸುರೇಶ ಲಾತೂರ, `ರಾಜ್ಯದಲ್ಲಿರುವ 30 ರಿಂದ 40 ಲಕ್ಷ ಉಪ್ಪಾರರನ್ನು ಪರಿಶಿಷ್ಟ ಜಾತಿಗೆ ಸೇರಿಸಿ ಸಮಾಜವು ಅಭಿವೃದ್ಧಿ ಹೊಂದಲು ಸಹಕರಿಸಬೇಕು' ಎಂದು ಸಚಿವರಲ್ಲಿ ಮನವಿ ಮಾಡಿದರು.

ಪುರಸಭೆಯ ನೂತನ ಸದಸ್ಯರು ಹಾಗೂ ಸಚಿವೆ ಉಮಾಶ್ರಿಯನ್ನು ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಪರವಾಗಿ ಸನ್ಮಾನಿಸಲಾಯಿತು. ಹೂಕಿಕಟ್ಟಿಯ ಭಾರ್ಗವಾನಂದಗಿರಿ ಶ್ರಿಗಳು, ಚಿಕ್ಕಲಕಿಯ ಶಿವಾನಂದ ಶ್ರಿಗಳು, ಭಾವೈಕ್ಯದ ಪ್ರವಚನಕಾರ ಇಬ್ರಾಹಿಂ ಸುತಾರ, ಪುರಸಭೆಯ ಸದಸ್ಯರಾದ ಯಲ್ಲನಗೌಡ ಪಾಟೀಲ, ಸಂಗಪ್ಪ ಹಲ್ಲಿ, ಜಾವೇದ ಎಂ.ಭಾಗವಾನ, ಜಿಲ್ಲಾ ಉಪ್ಪರ ಸಂಘದ ಅಧ್ಯಕ್ಷ ತಿಪ್ಪಣ್ಣ ತಿಪ್ಪಣ್ಣವರ ವೇದಿಕೆಯಲ್ಲಿದ್ದರು. ಉಪ್ಪಾರ ಜನಾಂಗದ ಸುತ್ತಲಿನ ಊರುಗಳಿಂದ ಆಗಮಿಸಿದ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.