ADVERTISEMENT

ಹಳೆಗನ್ನಡ ಅಧ್ಯಯನ ಕೇಂದ್ರ ಅಗತ್ಯ: ದರ್ಗಾ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 7:07 IST
Last Updated 6 ಜನವರಿ 2014, 7:07 IST

ಮುಧೋಳ: ಹಳೆಗನ್ನಡವಿಲ್ಲದೆ ಕನ್ನಡ ಇಲ್ಲ. ಇಂದು ಯಾವ ವಿಶ್ವವಿದ್ಯಾಲಯ­ಗಳು ಹಳೆಗನ್ನಡದ ಮಹಾಕಾವ್ಯಗಳನ್ನು ಕಲಿಸುತ್ತಿಲ್ಲ. ಹಳೆಗನ್ನಡ ಮಹಾಕಾವ್ಯಗಳ ಅಧ್ಯಯನ ಕೇಂದ್ರ ಸ್ಥಾಪಿಸುವ ಇಂದಿನ ದಿನಗಳಲ್ಲಿ ಮುಖ್ಯ ಎಂದು ಚಿಂತಕ ರಂಜಾನ್ ದರ್ಗಾ ಹೇಳಿದರು.

ಮುಧೋಳ ಕವಿಚಕ್ರವರ್ತಿ ರನ್ನ ಭವನದ ಡಾ.ಜಿ.ಎಸ್.ಶಿವರುದ್ರಪ್ಪ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ­ದರು. ರನ್ನನಿಗೆ ನಿಜವಾದ ಗೌರವವನ್ನು ತೋರುವುದಾದರೆ ಹಳೆಗನ್ನಡ ಅಧ್ಯಯನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಕೇವಲ 98 ಪದಗಳನ್ನು ಹೊಂದಿರುವ ಇಂಗಿಷ್ ಭಾಷೆ ವಿಶ್ವ ಭಾಷೆಯಾಗಿದ್ದರೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡಕ್ಕೆ ಸಾಧ್ಯವಾಗಿಲ್ಲ ಎನ್ನುವುದರ ಕುರಿತು ಚಿಂತನೆಯ ಅಗತ್ಯ ಇದೆ. ಕನ್ನಡ ಭಾಷೆ ಅತ್ಯಂತ ಶ್ರೀಮಂತ ವೈಶಿಷ್ಟ್ಯಪೂರ್ಣ ಭಾಷೆಯಾಗಿದೆ. ಹೊಸ ಕನ್ನಡ ಕನ್ನಡ ಶಬ್ದಗಳು ಬರಬೇಕು.

ಅಂಗವಿಕಲರಿಗೆ ಆತ್ಮಗೌರವ ಕೊಡುವ ವಿಶಿಷ್ಟಚೇತನ ಪದ ಪ್ರಯೋಗ ಮಾಡುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು. ಭಾಗವಹಿಸಿದ  ಕವಿಗಳು ಸಮಾನತೆ, ಭ್ರ್ರಷ್ಟತೆ, ಬಡತನ, ಆತ್ಮಹತ್ಯೆ, ಮಹಿಳೆಯ ಮೇಲಿನ ಅತ್ಯಾಚಾರ, ಹಸಿವು ಮುಂತಾದ ಎಲ್ಲ ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇಲ್ಲಿ ವಾಚಿಸಿದ ಎಲ್ಲ ಕವಿಗಳ ಕವಿತೆಯ ಕವನ ಸಂಕಲನ ತರಬೇಕೆಂದು ಸಂಘಟಕರಿಗೆ ಹೇಳಿದರು.

ಚಂದ್ರಶೇಖರ ವಸ್ತ್ರದ, ಗಂಗಾಧರ ಅವಟೇರ, ಶಂಕರ ಕಟಗಿ, ಕಸ್ತೂರಿ ಬಾಯರಿ, ಯಶವಂತ ವಾಜಂತ್ರಿ, ವಿದ್ಯಾಶರ್ಮ, ಡಾ.ಅರ್ಜುನ ಗೊಳ­ಸಂಗಿ, ಅಂಬಾದಾಸ ವಡೆ, ಡಾ.ಯಲ್ಲಪ್ಪ, ಡಾ.ನಿಂಗಪ್ಪ ಮುದೇ­ನೂರ, ಡಾ.ಸುಜಾತಾ ಚಲ­ವಾದಿ, ಎಂ.ಕೆ. ಮೇಗಾಡಿ, ಬಸು ಬೇವಿನಗಿಡ, ಬಿ.ಸಿ. ಶೈಲಜಾ ನಾಗರಾಜ, ಡಾ.ಮಲ್ಲಿಕಾ­ರ್ಜುನ ಮೇತ್ರಿ, ನಾಗೇಶ ನಾಯಿಕ, ಮುರ್ತುಜಾ ಬೇಗಂ ಕೊಡಗಲಿ ತಮ್ಮ ಕವನ ವಾಚಿಸಿದರು.

ಇದೇ ಸಂದರ್ಭದಲ್ಲಿ ನಿಂಗಪ್ಪ ಗುರವ ರಚಿಸಿದ ‘ಜಿನ ಭಜನಾವಾಣಿ’ ಹಾಗೂ ‘ನನ್ನೂರ ನೆನಪು’ ಕೃತಿಗಳನ್ನು  ಚಿಂತಕ ರಂಜಾನ್ ದರ್ಗಾ, ಎಡಿಸಿ ರುದ್ರಗೌಡ, ಜಿಲ್ಲಾ ಪಂಚಾಯ್ತಿ ಸಿಇಒ ಎಸ್.ಜಿ. ಪಾಟೀಲ, ಜಿಲ್ಲಾ ಯೋಜನಾ ನಿರ್ದೇಶಕ ಶಂಕರಗೌಡ ಸೋಮನಾಳ ಶ್ರೀಶೈಲ ಕರಿಶಂಕರಿ ಬಿಡುಗಡೆ ಮಾಡಿದರು.
ಉದಯ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.