ADVERTISEMENT

ಹಳ್ಳಿಗೊಬ್ಬರು ಕಾನ್‌ಸ್ಟೆಬಲ್‌ ಉಸ್ತುವಾರಿ

ಶೀಘ್ರ ನೂತನ ಗಸ್ತು ವ್ಯವಸ್ಥೆ; ಉತ್ತರ ವಲಯ ಐಜಿಪಿ ಕೆ.ರಾಮಚಂದ್ರರಾವ್ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 7:26 IST
Last Updated 13 ಏಪ್ರಿಲ್ 2017, 7:26 IST

ಬಾಗಲಕೋಟೆ: ‘ಪೊಲೀಸ್ ಇಲಾಖೆ ಯಲ್ಲಿ ನೂತನ ಗಸ್ತು ವ್ಯವಸ್ಥೆ ಅನುಷ್ಠಾನ ಗೊಳಿಸಲಾಗುತ್ತಿದೆ. ಪ್ರತಿ ಕಾನ್‌ಸ್ಟೆಬಲ್‌ ಗೂ ಒಂದೊಂದು ಹಳ್ಳಿಯ ಉಸ್ತುವಾರಿ ವಹಿಸಲು ನಿರ್ಧರಿಸಲಾಗಿದೆ’ ಎಂದು ಉತ್ತರ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಪೊಲೀಸ್‌ ಇಲಾಖೆ ಆಯೋಜಿಸಿದ್ದ ದಲಿತರ ಜಿಲ್ಲಾ ಮಟ್ಟದ ಅಹವಾಲು ಆಲಿಕೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪೊಲೀಸ್‌ ಇಲಾಖೆಯ ನೌಕರರಲ್ಲಿ ಶೇ 90 ರಷ್ಟು ಮಂದಿ ಕಾನ್‌ಸ್ಟೆಬಲ್‌ಗಳು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಹೆಚ್ಚಿನ ಜವಾಬ್ದಾರಿ ಹಾಗೂ ಅಧಿಕಾರ ನೀಡಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಹೊಸ ಗಸ್ತು ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ.

ಆಯಾ ಹಳ್ಳಿಯಲ್ಲಿನ ವ್ಯಾಜ್ಯ ಗಳು, ಜೂಜಾಟ, ಅನೈತಿಕ ಚಟುವಟಿಕೆ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳ ಮೇಲೆ ಕಣ್ಣಿಡುವ ಇವರು, ಆ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನಿಯಂತ್ರಿ ಸುವ ಕೆಲಸ ಮಾಡಲಿದ್ದಾರೆ. ನಿರ್ದಿಷ್ಟ ಸ್ಥಳವೊಂದರ ಉಸ್ತುವಾರಿಯನ್ನು ನೀಡಿದಲ್ಲಿ ಅವರಿಗೂ ಉತ್ತರದಾಯಿತ್ವ ಇರಲಿದೆ ಎಂದು ಅಭಿಪ್ರಾಯಪಟ್ಟರು.

ಪೊಲೀಸರು ಮತ್ತು ದಲಿತ ಸಮುದಾಯದ ನಡುವೆ ಸಂಪರ್ಕ ಕೊರತೆಯಾಗದಂತೆ ನೋಡಿಕೊಳ್ಳಲು ಉತ್ತರ ವಲಯ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲೂ ದಲಿತರ ಜಿಲ್ಲಾ ಮಟ್ಟದ ಅಹವಾಲು ಆಲಿಕೆ ಸಭೆ ನಡೆಸಲಾಗುತ್ತಿದೆ. ಇದರಿಂದ ಪೊಲೀಸರ ಮೇಲೆ ಬರುವ ದೂರುಗಳ ಪ್ರಮಾಣವೂ ಕಡಿಮೆಯಾಗಲಿದೆ ಎಂದರು.

‘ದಲಿತರ ಕೇರಿಗಳಲ್ಲಿ ಸಭೆ ನಡೆಸಿರುವುದು. ದೌರ್ಜನ್ಯ ನಿಯಂತ್ರಿಸಿದ ಬಗ್ಗೆ ಅಧಿಕಾರಿಗಳು ಪ್ರತಿ ತಿಂಗಳು ನೀಡುವ ವರದಿ ಕಂಡು ಬಾಗಲಕೋಟೆ  ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿದಿದ್ದೆ.

ಜಿಲ್ಲಾ ಮಟ್ಟದ ಸಭೆಯಲ್ಲಿ ದಲಿತರಿಂದ ವ್ಯಕ್ತವಾದ ಅಹವಾಲು ಗಮನಿಸಿದರೆ ನನ್ನ ಅನಿಸಿಕೆ ತಪ್ಪು ಎನಿಸುತ್ತಿದೆ. ಒಂದೋ ದಲಿತರೇ ದೂರು ನೀಡಲು ಮುಂದಾಗುತ್ತಿಲ್ಲ, ಇಲ್ಲ ದೂರು ದಾಖಲಿಸಿಕೊಳ್ಳಲು ಪೊಲೀಸರಿಂದ ಸರಿಯಾಗಿ ಸ್ಪಂದನೆ ಆಗುತ್ತಿಲ್ಲ ಎಂಬ ಅನುಮಾನ ಉಂಟಾಗಿದೆ’ ಎಂದು ಐಜಿಪಿ ಅಸಮಾಧಾನ ವ್ಯಕ್ತಪಡಿಸಿದರು.

‘ದಲಿತರ ಮೇಲೆ ಪದೇ ಪದೇ ದೌರ್ಜನ್ಯ ನಡೆಯುವ ಸ್ಥಳಗಳನ್ನು ಗುರುತಿಸಿ ಕಂದಾಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಸೇರಿ ಅಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೆತ್ತಿಕೊಳ್ಳುವಂತೆ’ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.

ತನಿಖೆಗೆ ಸೂಚನೆ
ಬಾದಾಮಿ ತಾಲ್ಲೂಕು ಕೆರೂರಿನಲ್ಲಿ ದಲಿತ ಮುಖಂಡರೊಬ್ಬರ ಮೇಲೆ ಪೊಲೀಸರು ಸುಳ್ಳು ದೂರು ದಾಖಲಿಸಿದ್ದಾರೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರಿಗೆ ವೇದಿಕೆಯಲ್ಲಿಯೇ ಐ.ಜಿ.ಪಿ ಸೂಚನೆ ನೀಡಿದರು.

*
ಬಾಗಲಕೋಟೆ ಜಿಲ್ಲೆಯಲ್ಲಿ ವಾರ್ಷಿಕ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಜಿಲ್ಲೆಗೆ ಹೆಚ್ಚುವರಿ ಪೊಲೀಸ್ ಆಯುಕ್ತರ ಹುದ್ದೆ ಸೃಷ್ಟಿಸಲು ನಿರ್ಧರಿಸಲಾಗಿದೆ.
-ಡಾ.ಕೆ.ರಾಮಚಂದ್ರರಾವ್,
ಉತ್ತರ ವಲಯ ಐಜಿಪಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.