ADVERTISEMENT

ಹಿಂದೂ ಹೆಸರಿನಲ್ಲಿ ನಾಟಕ: ತಿಮ್ಮಾಪುರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 4:34 IST
Last Updated 27 ಮಾರ್ಚ್ 2018, 4:34 IST

ಮುಧೋಳ: ‘ಮುಂಬರುವ ವಿಧಾನಸಭೆ ಚುನಾವಣೆಗೆ ಪ್ರಥಮ ಬಾರಿ ಮತದಾನ ಮಾಡಲಿರುವ 18 ವರ್ಷದ ಯುವಕರು, ಯೋಗ್ಯ ವ್ಯಕ್ತಿ, ಪಕ್ಷಕ್ಕೆ ಮತದಾನ ಮಾಡುವ ಮೂಲಕ ತಮ್ಮ ಅಮೂಲ್ಯ ಮತವನ್ನು ಸದುಪಯೋಗಿಸಿಕೊಳ್ಳಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ದಾನಮ್ಮದೇವಿ ಸಭಾಭವನದಲ್ಲಿ ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಯುವಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಚುನಾವಣೆ ಸಮೀಸುತ್ತಿದ್ದಂತೆ ಕೋಮುಭಾವನೆಗೆ ಧಕ್ಕೆ ಉಂಟು ಮಾಡಿ ಜಾತಿಗಳಲ್ಲಿ ಪರಸ್ಪರ ಗಲಾಟೆಯಿಂದ ಅಮಾಯಕರು ಜೈಲಿಗೆ ಹೋಗುವ ಸಂದರ್ಭಗಳನ್ನು ತಾವು ನೋಡಿದ್ದಿರಿ. ಅಧಿಕಾರಕ್ಕಾಗಿ ಹಿಂದೂ ಹೆಸರಲ್ಲಿ ನಾಟಕ ಮಾಡುವ ಜನರಿಂದ ಎಚ್ಚರಿಕೆಯಿಂದ ಇರಬೇಕು. ಬಿಜೆಪಿ ಅವರಷ್ಟೇ ಹಿಂದೂಗಳಾ, ಉಳಿದವರು ಹಿಂದೂಗಳಲ್ವಾ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ನಿಜವಾದ ದೇಶ ಭಕ್ತಿ ಹೊಂದಿದ್ದರೆ ವಿದೇಶಗಳಿಗೆ ಸಾಗುವ ಗೋ ಮಾಂಸವನ್ನು ತಡೆಯಲಿ ನೋಡೊಣ. ಎಲ್ಲೋ ಓಣಿಯಲ್ಲಿ ಕುರಿ-ಕೋಣ ಕಡಿಯುವಾಗ ಅದನ್ನು ತಡೆಯಲು ಪುಷ್ಟಿ ನೀಡಿ ಗಲಭೆ ಕಾರಣ ಮಾಡುವವರು, ಶ್ರೀರಾಮನ ಹೆಸರಲ್ಲಿ ಚುನಾವಣೆ ಎದುರಿಸಿ ನಂತರ ಸುಮ್ಮನಾಗುವ ಇವರು ನಿಜವಾದ ಹಿಂದೂಗಳಾ’ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಕಾರ್ಯದರ್ಶಿ ದಯಾನಂದ ಪಾಟೀಲ ಮಾತನಾಡಿ ‘ಚುನಾವಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪ್ರತಿ ವರ್ಷ ಯುವಕರಿಗೆ 2 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು. ಜನ್- ಧನ್ ಖಾತೆ ಹೊಂದುವವರಿಗೆ ₹15ಲಕ್ಷ ಜಮಾ ಮಾಡಲಾಗುವುದು ಎಂದು ಸುಳ್ಳು ಹೇಳಿ ಯುವಕರಿಗೆ ವಂಚನೆ ಮಾಡಿದೆ’ ಎಂದು ಆರೋಪ ಮಾಡಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ ‘ರಾಮ ನವಮಿ ಪವಿತ್ರ ದಿನದಂದು ನೂರಾರು ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವದು ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ’ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಸೌದಾಗರ ಮಾತನಾಡಿದರು.

ಉದ್ಘಾಟನೆ: ಇದೇ ಸಂದರ್ಭದಲ್ಲಿ ಯುವಕರು ಸೇರಿ ನೂತನವಾಗಿ ಯುವ ಶಕ್ತಿ ಫೌಂಡೇಷನ್ ಸಂಸ್ಥೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್. ಬಿ. ತಿಮ್ಮಾಪುರ ಹಾಗೂ ಎಲ್ಲ ಗಣ್ಯರು ಉದ್ಘಾಟಿಸಿದರು.

ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜಯ ನಾಯಿಕ, ನಗರ ಘಟಕದ ಅಧ್ಯಕ್ಷ ದಾನೇಶ ತಡಸಲೂರ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲೋಕಣ್ಣ ಕೊಪ್ಪದ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ ತಿಮ್ಮಾಪುರ, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ನವಿನ ಬದ್ರಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಟಿ.ಆರ್. ಬಟಕುರ್ಕಿ, ನಗರಸಭೆ ಅಧ್ಯಕ್ಷೆ ದ್ರಾಕ್ಷಾಯಣಿ ಹಲಸಂಗಿಮಠ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದಪುಡಿ, ಜಿಲ್ಲಾ ಪಂಚಾಯ್ತಿ ಸದಸ್ಯ ಮಹಾಂತೇಶ ಉದಪುಡಿ, ಮಖಂಡರಾದ ನಂದುಗೌಡ ಪಾಟೀಲ, ಉದಯಸಿಂಹ ಪಡತಾರೆ, ಸಿದ್ದು ಸೂರ್ಯವಂಶಿ, ರಕ್ಷಿತಾ ಈಟಿ, ಶೋಭಾ ಜಿಗಜಿನ್ನಿ, ಭಾರತಿ ಪಾಚಂಗಿ, ಸುನಿತಾ ಜಾಧವ, ಎಚ್.ಎಸ್. ಗುಜ್ಜನವರ, ತಮ್ಮಣ್ಣಪ್ಪ ಅರಳಿಕಟ್ಟಿ, ಹಣಮಂತ ಅಡವಿ, ಕಲ್ಮೇಶ ಸಾರವಾಡ, ಸದು ಪಾಟೀಲ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.