ADVERTISEMENT

ಹೆಸ್ಕಾಂಗೆ ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 9:09 IST
Last Updated 3 ಏಪ್ರಿಲ್ 2013, 9:09 IST

ಬಾಗಲಕೋಟೆ: ಅಸಮರ್ಪಕ ವಿದ್ಯುತ್ ಪೂರೈಕೆ ವಿರೋಧಿಸಿ ತಾಲ್ಲೂಕಿನ 13ಕ್ಕೂ ಅಧಿಕ ಗ್ರಾಮಗಳ ನೂರಾರು ರೈತರು ಮಂಗಳವಾರ ಇಲ್ಲಿನ ಹವೇಲಿ ಬಳಿ ಇರುವ ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ರೈತರು ಪ್ರತಿಭಟನೆ ನಡೆಸಿದರೂ ಸ್ಪಂದಿಸದ ಹೆಸ್ಕಾಂ ಸಿಬ್ಬಂದಿ ಹಾಗೂ ನೌಕರರನ್ನು ಹೊರಗೆ ಹಾಕಿ, ಹೆಸ್ಕಾಂ ಕಚೇರಿಗೆ ಬೀಗ ಜಡಿದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

`ಬಾಗಲಕೋಟೆ ತಾಲ್ಲೂಕಿನ ಹೊನ್ನಳ್ಳಿ, ಸಿಂದಗಿ, ನಕ್ಕರಗುಂದಿ, ಕದಾಂಪುರ, ಸಾಳಗುಂದಿ, ಯಂಕಂಚಿ, ಅಂಡಮುರನಾಳ, ಸಿದ್ನಾಳ ಮತ್ತಿತರ ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿ ಗಾಗಿ ಗ್ರಾಮಸ್ಥರು ಪರದಾಡುವಂತಾ ಗಿದೆ. ಸಮಸ್ಯೆ ಬಗೆಹರಿಸುವಂತೆ  ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ಪ್ರತಿಭಟನಾಕಾರರು ಆರೋಪಿಸಿದರು.

`ಬಾಗಲಕೋಟೆಯ 220 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ  ಹೆಸ್ಕಾಂ ಕಡಿಮೆ ವೋಲ್ಟೆಜ್ ವಿದ್ಯುತ್ ಪೂರೈಸುತ್ತಿರುವುದರಿಂದ ಒಂದೇ ವಾರದಲ್ಲಿ ರೈತರ ಸುಮಾರು 50ಕ್ಕೂ ವಿದ್ಯುತ್ ಪಂಪ್‌ಸೆಟ್‌ಗಳು ಸುಟ್ಟು ಹಾನಿಯಾಗಿವೆ' ಎಂದು ಜಿ.ಪಂ.ಸದಸ್ಯ ಹೂವಪ್ಪ ರಾಠೋಡ ಆಪಾದಿಸಿದರು.

ಬಾಗಲಕೋಟೆ ನಗರ ಪೊಲೀಸ್ ಠಾಣೆಯ ಸಿಪಿಐ ಅನಿಲಕುಮಾರ ಭೂಮರಡ್ಡಿ ಅವರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆ ವೇಳೆ ಬುಧವಾರ ರಾತ್ರಿಯಿಂದ 1.30 ಗಂಟೆ ಹೆಚ್ಚಿನ ಅವಧಿ ತ್ರಿಫೇಸ್ ವಿದ್ಯುತ್ ಹಾಗೂ ರಾತ್ರಿ ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗಲು ಸಂಜೆ 6ರಿಂದ 9ರ ವರೆಗೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸಲಾಗುವುದು ಎಂದು ಹೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪಾಟೀಲ,  ಸಹಾಯಕ ಕಾರ್ಯ ನಿರ್ವಾಹಕ ಎಂಜಿ ನಿಯರ್ ಕುಲಕರ್ಣಿ ಭರವಸೆ ನೀಡಿದರು.

ಅಧಿಕಾರಿಗಳ ಭರವಸೆಯ ಬಳಿಕ ರೈತರು ತಮ್ಮ ಹೋರಾಟವನ್ನು ಹಿಂದೆ ಪಡೆದರು. ರೈತ ಮುಖಂಡರಾದ ಚಂದ್ರ ಕಾಂತ ಕೇಸನೂರ, ಅಶೋಕ ಲಾಗ ಲೋಟಿ, ಹನುಮಂತ, ಶಿವನಪ್ಪ ಬಣ ಕಾರ, ಈಶ್ವರ ಹುಂಡೇಕಾರ, ಶಂಕ್ರಪ್ಪ ದಾಳಿ, ಚನ್ನಪ್ಪ ಬಳೂಲದ ಸೇರಿದಂತೆ 200ಕ್ಕೂ ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.