ಬಾಗಲಕೋಟೆ: ಹೆಸ್ಕಾಂ ಜಾಗೃತ ದಳದ ಪೊಲೀಸ್ ಸಿಬ್ಬಂದಿಯೊಬ್ಬರು ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ನಗರದಲ್ಲಿ ನಡೆದಿದೆ.
ನವನಗರದಲ್ಲಿರುವ ಹೆಸ್ಕಾಂ ಜಾಗೃತ ದಳದ ಕಚೇರಿ ಸಿಬ್ಬಂದಿ ಗಂಗಾಧರ ಗೋಶ್, ಬಾದಾಮಿ ತಾಲ್ಲೂಕಿನ ಬೇಲೂರ ಗ್ರಾಮದ ಮಹಾಂತೇಶ ಕೆಲೂರ ಅವರಿಂದ ರೂ. 10 ಸಾವಿರ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತರು ದಾಳಿ ನಡೆಸಿದರು.
ಮಹಾಂತೇಶ ಕೆಲೂರ ಅವರು ಹೊಸ ಪೆಟ್ರೋಲ್ ಬಂಕ್ ನಿರ್ಮಾಣ ಸಂಬಂಧ ಕೊಠಡಿಯೊಂದನ್ನು ಕಟ್ಟುತ್ತಿರುವ ಸಂದರ್ಭದಲ್ಲಿ ಕಟ್ಟಡದ ಕಾಲಂ ಗುಂಡಿ(ತೆಗ್ಗು)ಯಲ್ಲಿ ಮಳೆಯ ನೀರು ನಿಂತಿತ್ತು. ಕತ್ತಲಾಗಿದ್ದರಿಂದ ಅದನ್ನು ತೆಗೆಸಲು ಕಷ್ಟವಾಗಿತ್ತು. ಹೀಗಾಗಿ ಅವರು ಪಕ್ಕದ ತಮ್ಮ ಹೊಲದ ಬೋರ್‌ವೆಲ್‌ಗೆ ಹಾಕಿದ್ದ ವಿದ್ಯುತ್ ಸಂಪರ್ಕದಿಂದ ಒಂದು ಬಲ್ಬ್ ಹಾಕಿಕೊಂಡಿದ್ದರು.
ಈ ಬಗ್ಗೆ ಬೇಲೂರ ಹೆಸ್ಕಾಂ ಶಾಖಾ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿ ಅನುಮತಿ ಪಡೆದರೂ ಮರುದಿನ ವಿದ್ಯುತ್ ಸಂಪರ್ಕ ಕಡಿದುಹಾಕಿದ ಹೆಸ್ಕಾಂ ಜಾಗೃತ ದಳದವರು ಪ್ರಕರಣ ದಾಖಲಿಸಲು ಮುಂದಾದರು. ಈ ಸಂದರ್ಭದಲ್ಲಿ ಅಧಿಕಾರಿಗಳು ದೂರುದಾರ ಮಹಾಂತೇಶ ಕೆಲೂರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೇಸ್ ಮುಗಿಸಿಕೊಂಡು ಹೋಗು ರೂ20 ಸಾವಿರ ಆಗುತ್ತೆ ಎಂದರು. ಆದರೆ ಹತ್ತು ಸಾವಿರಕ್ಕೆ ವ್ಯವಹಾರ ಕುದುರಿತ್ತು. ಹೆಸ್ಕಾಂ ಜಾಗೃತ ದಳದ ಸಿಬ್ಬಂದಿ ಗಂಗಾಧರ ಗೋಶ್‌ಗೆ ್ಙ10 ಸಾವಿರ ನೀಡುವಾಗ ದಾಳಿ ನಡೆಯಿತು.
ಲೋಕಾಯುಕ್ತ ಡಿವೈಎಸ್ಪಿ ಎಚ್.ಎನ್. ಹೊಳೆಹೊಸೂರ, ವಿನಾಯಕ ಬಡಿಗೇರ, ನಾಗರಾಜ ಮಾಡಳ್ಳಿ ನೇತೃತ್ವದಲ್ಲಿ ದಾಳಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.