ADVERTISEMENT

ಆಟೋಟ, ಆರೋಗ್ಯ, ಉದ್ಯೋಗದತ್ತ ಚಿತ್ತ!

ವೆಂಕಟೇಶ್ ಜಿ.ಎಚ್
Published 5 ಜನವರಿ 2018, 8:42 IST
Last Updated 5 ಜನವರಿ 2018, 8:42 IST

ಬಾಗಲಕೋಟೆ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಮತದಾರರ ಮನ ಗೆಲ್ಲಲು ಸಿದ್ಧತೆ ಆರಂಭಿಸಿದ್ದಾರೆ.

ಹಾಲಿ, ಮಾಜಿ ಶಾಸಕರು, ಹೊಸದಾಗಿ ಟಿಕೆಟ್‌ ಆಕಾಂಕ್ಷಿಗಳು ಫೌಂಡೇಶನ್‌, ಅಭಿಮಾನಿ ಬಳಗ, ಗೆಳೆಯರ ಬಳಗಗಳ ಹೆಸರಿನಲ್ಲಿ ಕ್ರೀಡಾಕೂಟ, ಉದ್ಯೋಗ ಮೇಳ, ಆರೋಗ್ಯ ತಪಾಸಣೆ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ನಿತ್ಯ ಒಂದಿಲ್ಲೊಂದು ಕಡೆ ಸೈಕ್ಲಿಂಗ್, ಕಬಡ್ಡಿ, ಟಿ20 ಕ್ರಿಕೆಟ್‌ನ ಕಲರವ ಕೇಳಿಬರುತ್ತಿದೆ.

ಬಾದಾಮಿ ಕ್ಷೇತ್ರದಲ್ಲಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಪುತ್ರ ಭೀಮಸೇನ ನೇತೃತ್ವದಲ್ಲಿ ಟಿ.20 ಕ್ರಿಕೆಟ್ ಹಾಗೂ ಕಬಡ್ಡಿ ಪಂದ್ಯಾವಳಿ ನಡೆಸಲಾಗಿದೆ. ಬಾದಾಮಿ ತಾಲ್ಲೂಕಿನಲ್ಲಿ ಎಂಟು ವಲಯ ಮಟ್ಟದ ಕಬಡ್ಡಿ ಟೂರ್ನಿ ನಡೆದಿದ್ದು, ಪ್ರತಿ ಹಳ್ಳಿಯಿಂದ ಎರಡರಂತೆ 206 ತಂಡಗಳು ಭಾಗಿಯಾಗಿವೆ.

ADVERTISEMENT

ತಾಲ್ಲೂಕು ಕೇಂದ್ರದಲ್ಲಿ ನಡೆದ ಲೀಗ್ ಪಂದ್ಯಾವಳಿಯಲ್ಲಿ 16 ತಂಡ ಪಾಲ್ಗೊಂಡಿದ್ದವು.ಇನ್ನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಡಾ.ದೇವರಾಜ ಪಾಟೀಲ ಹಳ್ಳಿ ಹಳ್ಳಿಯಲ್ಲಿ ಕಣ್ಣಿನ ತಪಾಸಣೆ ಶಿಬಿರ ನಡೆಸುತ್ತಿದ್ದಾರೆ. ಈಗಾಗಲೇ ಬೇಲೂರು, ಆಸಂಗಿ, ಗುಳೇದಗುಡ್ಡ, ಕಟಗೇರಿ, ಪಟ್ಟದಕಲ್ಲು ಕುಳಗೇರಿ ಕ್ರಾಸ್‌ನಲ್ಲಿ ಶಿಬಿರ ಪೂರ್ಣಗೊಳಿರುವ ಅವರು, ಅದಕ್ಕಾಗಿ ವಾರಾಂತ್ಯ ಮೀಸಲಿಟ್ಟಿದ್ದಾರೆ. ಡಾ.ದೇವರಾಜ ಪಾಟೀಲ ಇತ್ತೀಚೆಗೆ ಬಾದಾಮಿಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ ನಿರುದ್ಯೋಗಿಗಳ ಮನ ಗೆಲ್ಲಲು ಮುಂದಾಗಿದ್ದರು.

ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಲಾದ ಹನುಮಂತ ಮಾವಿನಮರದ, ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾದ ಮಹಾಂತೇಶ ಮಮದಾಪುರ ಡಿಸೆಂಬರ್‌ನಲ್ಲಿ ನಡೆದ ಟಗರಿನ ಕಾಳಗ ಹಾಗೂ ವಾತಾಪಿ ಪ್ರೀಮಿಯರ್ ಲೀಗ್‌ ಹೆಸರಿನ ಕ್ರಿಕೆಟ್ ಟೂರ್ನಿಗೆ ಬೆನ್ನೆಲುಬಾಗಿ ನಿಂತಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ವಕ್ಷೇತ್ರ ಮುಧೋಳದಲ್ಲಿ ಈಚೆಗೆ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಸಂಘಟಿಸಿದ್ದರು. ಉದ್ಘಾಟನೆ ವೇಳೆ ಸ್ವತಃ ರೈಡ್‌ ಮಾಡಿ ಕಬಡ್ಡಿ ಪ್ರಿಯರ ಮನಗೆದ್ದಿದ್ದರು. ಜನವರಿ 6 ಮತ್ತು 7ರಂದು ಮುಧೋಳದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಕೌಶಲ ತರಬೇತಿ ಹಾಗೂ ಉದ್ಯೋಗ ಮೇಳ ಆಯೋಜಿಸಲಾಗಿದೆ. ಸ್ವತಃ ತಿಮ್ಮಾಪುರ ಪುತ್ರ ವಿನಯ್ ಅದರ ಸಾರಥ್ಯ ವಹಿಸಿಕೊಂಡಿದ್ದಾರೆ. ಬೀಳಗಿಯಲ್ಲಿ ಶಾಸಕ ಜೆ.ಟಿ.ಪಾಟೀಲ ರಾಜ್ಯಮಟ್ಟದ ಸೈಕ್ಲಿಂಗ್ ಕೂಟ ಆಯೋಜಿಸಿದ್ದರು.

ಹುನಗುಂದದಲ್ಲಿ ಇಳಕಲ್ ಪ್ರೀಮಿಯರ್ ಲೀಗ್, ಉದ್ಯೋಗ ಮೇಳದ ಮೂಲಕ ಶಾಸಕ ವಿಜಯಾನಂದ ಕಾಶಪ್ಪನವರ ಯುವಜನರ ಮನ ಗೆಲ್ಲಲು ಮುಂದಾದರೆ, ಎಸ್.ಆರ್.ಎನ್‌.ಇ ಫೌಂಡೇಶನ್ ಫೌಂಡೇಶನ್‌ ಮೂಲಕ ಆರೋಗ್ಯ ಮೇಳ, ಹಬ್ಬ–ಹರಿದಿನಗಳಲ್ಲಿ ಕ್ಷೇತ್ರದ ಜನರಿಗೆ ಉದ್ಯಮಿ ಎಸ್‌.ಆರ್.ನವಲಿಹಿರೇಮಠ ನೆರವಾಗಿದ್ದಾರೆ. ಇದೇ ತಿಂಗಳು ಸಾಮೂಹಿಕ ವಿವಾಹ ಕೂಡ ಆಯೋಜಿಸಿದ್ದಾರೆ.

ಜಮಖಂಡಿ, ಬೀಳಗಿ, ಕೆರೂರಿನಲ್ಲಿ ನಿರಾಣಿ ಫೌಂಡೇಶನ್‌ ಮೂಲಕ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದ ನಿರಾಣಿ ಸಹೋದರರು, ಎರಡೂ ಕ್ಷೇತ್ರಗಳಲ್ಲಿ ವಿರೋಧಿಗಳ ಜೊತೆಗೆ ಸ್ವಪಕ್ಷೀಯರ ನಿದ್ರೆ ಕೆಡಿಸಿದ್ದರು. ಮೂಡಬಿದಿರೆಯ ಆಳ್ವಾಸ್ ತಂಡದ ನೃತ್ಯ ವೈಭವದ ಸೊಗಡನ್ನು ಉಣಬಡಿಸಿ ಜನ ಸಂಪರ್ಕಕ್ಕೆ ಸಾಂಸ್ಕೃತಿಕ ಆಯಾಮ ನೀಡಿದರು. ತೇರದಾಳ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಬಸವರಾಜ ಕೊಣ್ಣೂರ, ಈ ಬಾರಿ ‘ಕೊಣ್ಣೂರ ನುಡಿಸಡಗರ’ ಆಚರಿಸಿ ತಮ್ಮ ಸಂಘಟನಾ ಚಾತುರ್ಯವನ್ನು ಕ್ಷೇತ್ರದಲ್ಲಿ ಪರಿಚಯಿಸಿದರು.

ಬಾಗಲಕೋಟೆ ಕ್ಷೇತ್ರದಲ್ಲೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಈ ವಿಚಾರದಲ್ಲಿ ಮುಂದಡಿ ಇಟ್ಟಿದ್ದಾರೆ. ಮಾಜಿ ಶಾಸಕ ಪಿ.ಎಚ್.ಪೂಜಾರ ‘ಮಮತೆಯ ತುತ್ತು’ ಹೆಸರಿನ್ ಮೂಲಕ ಹಿರಿಯ ನಾಗರಿಕರ ನೆರವಿಗೆ ನಿಂತಿದ್ದಾರೆ. ಬಸವೇಶ್ವರ ಬ್ಯಾಂಕ್ ಶತಮಾನೋತ್ಸವದ ವೇಳೆ 7 ಸಾವಿರಕ್ಕೂ ಹೆಚ್ಚು ಮಹಿಳೆಯರನ್ನು ಒಂದೆಡೆ ಸೇರಿಸಿ ರಂಗೋಲಿ ಹಾಕಿಸಿ ಲಿಮ್ಕಾ ದಾಖಲೆ ಬರೆದ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ತಮ್ಮ ಸಂಘಟನಾ ಶಕ್ತಿ ಪ್ರದರ್ಶಿಸಿದರು.

‘ಅಭಿಮಾನ’ದ ಕ್ಯಾಂಟೀನ್‌ಗೆ ಚಾಲನೆ
ಬೆಂಗಳೂರು, ಮಂಡ್ಯ, ಮೈಸೂರಿಗೆ ಸೀಮಿತವಾಗಿದ್ದ ‘ಅಭಿಮಾನ’ದ ಕ್ಯಾಂಟೀನ್‌ ಈಗ ಬಾಗಲಕೋಟೆ ಜಿಲ್ಲೆಗೂ ಕಾಲಿಟ್ಟಿದೆ. ಲೋಕಾಪುರದಲ್ಲಿ ಬಂಡಿವಡ್ಡರ ಸಹೋದರರು ಸಿದ್ದರಾಮಯ್ಯ ಹೆಸರಿನಲ್ಲಿ ಕ್ಯಾಂಟೀನ್ ಆರಂಭಿಸಿದ್ದಾರೆ. ಅಲ್ಲಿ ₨5ಕ್ಕೆ ಉಪಾಹಾರ ವಿತರಿಸಲಾಗುತ್ತಿದೆ. ಈಗಾಗಲೇ ಮುಧೋಳದಲ್ಲಿ ರೈತ, ಸ್ಟೂಡೆಂಟ್ ಹೆಸರಿನಲ್ಲಿ ರಿಯಾಯಿತಿ ದರದಲ್ಲಿ ಉಪಹಾರ ನೀಡುವ ಕ್ಯಾಂಟೀನ್ ಆರಂಭಿಸಿದ್ದೇವೆ. ಇದು ಚುನಾವಣೆ ಮುಗಿಯುವವರೆಗೆ ಮಾತ್ರ ಇರುವುದಿಲ್ಲ. ಮುಂದೆಯೂ ಕಾರ್ಯನಿರ್ವಹಿಸಲಿದೆ ಎಂದು ಹೇಳುವ ಸತೀಶ ಬಂಡಿವಡ್ಡರ, ಈ ಬಾರಿಯ ಚುನಾವಣೆಯಲ್ಲಿ ತಾವೂ ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.