ADVERTISEMENT

‘ಬ್ರಾಹ್ಮಣ ಎಂದರೆ ಜೀವನ ಪದ್ಧತಿ’

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ತಾಲ್ಲೂಕು ಮಟ್ಟದ ಮಹಾ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 8:40 IST
Last Updated 11 ಫೆಬ್ರುವರಿ 2018, 8:40 IST
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್‌. ವೆಂಕಟನಾರಾಯಣ ಉದ್ಘಾಟಿಸಿದರು. ಗೋ ಮಧುಸೂಧನ, ಸಾಂಗಲಿ ಶಾಸಕ ಸುಧೀರ ಗಾಡ್ಗೀಳ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಇದ್ದರು
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್‌. ವೆಂಕಟನಾರಾಯಣ ಉದ್ಘಾಟಿಸಿದರು. ಗೋ ಮಧುಸೂಧನ, ಸಾಂಗಲಿ ಶಾಸಕ ಸುಧೀರ ಗಾಡ್ಗೀಳ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಇದ್ದರು   

ಜಮಖಂಡಿ: ‘ಜನಿವಾರ ಹಾಕಿಕೊಂಡ ಮಾತ್ರಕ್ಕೆ ಬ್ರಾಹ್ಮಣನಲ್ಲ. ಬ್ರಾಹ್ಮಣನೆಂದರೆ ಜಾತಿಗಿಂತ ಹೆಚ್ಚಾಗಿ ಅದೊಂದು ಸಂಕಲ್ಪ ಮತ್ತು ಜೀವನ ಪದ್ಧತಿ. ಲೋಕದ ಬಗ್ಗೆ ಯೋಚನೆ ಮಾಡುವವ ಬ್ರಾಹ್ಮಣ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಗೋ ಮಧುಸೂಧನ ಹೇಳಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಾಲ್ಲೂಕು ಘಟಕದ ಆಶ್ರಯದಲ್ಲಿ ಇಲ್ಲಿನ ಹೊಕ್ಕಳ ಬಾವಿ ಮೈದಾನದಲ್ಲಿ ಶನಿವಾರ ಜರುಗಿದ ತಾಲ್ಲೂಕು ಮಟ್ಟದ ಪ್ರಥಮ ಬ್ರಾಹ್ಮಣ ಮಹಾಸಮ್ಮೇಳನದ ಅತಿಥಿಯಾಗಿ ಅವರು ಮಾತನಾಡಿದರು.

‘ಸಿಖ್ಖರು, ಜೈನರು, ಬೌದ್ಧರು ಹಿಂದೂಗಳಲ್ಲ ಎಂದು ಹೇಳಿಕೊಳ್ಳಬಹುದು. ಆದರೆ, ಬ್ರಾಹ್ಮಣರು ಮಾತ್ರ ಎಂದಿಗೂ ಹಿಂದೂಗಳಲ್ಲ ಎಂದು ಹೇಳಿಕೊಳ್ಳುವುದಿಲ್ಲ. ಬ್ರಹ್ಮವಿದ್ಯೆ ತಿಳಿದವನು ಬ್ರಾಹ್ಮಣ. ದೇವರನ್ನು ಅರ್ಥ ಮಾಡಿಕೊಂಡವನು ಹಾಗೂ ಅರ್ಥ ಮಾಡಿಸುವವನು ಬ್ರಾಹ್ಮಣ’ ಎಂದರು.

ADVERTISEMENT

‘ಉಳುವವನಿಗೆ ಭೂಮಿಯ ಒಡೆತನ ಕೊಟ್ಟಾಗ ಬ್ರಾಹ್ಮಣರು ಹಾಳಾದರು ಅಂದುಕೊಂಡಿದ್ದರು. ಆದರೆ, ಬ್ರಾಹ್ಮಣರು ಹಾಳಾಗಲಿಲ್ಲ. ಪ್ರಪಂಚದಾದ್ಯಂತ ಬ್ರಾಹ್ಮಣರು ಹೊರಟು ಹೋದರು. ಬ್ರಾಹ್ಮಣರು ತಮಗಷ್ಟೇ ಸಂಸ್ಕಾರ ಕಟ್ಟಿಕೊಂಡವರಲ್ಲ. ಕ್ಷತ್ರೀಯ, ಶೂದ್ರರು ಹಾಗೂ ವೈಶ್ಯರೂ ಸೇರಿದಂತೆ ಸರ್ವರಿಗೂ ಸಂಸ್ಕಾರ ಕೊಟ್ಟವರು’ ಎಂದರು.

ಮಹಾಸಮ್ಮೇಳನ ಉದ್ಘಾಟಿಸಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್‌. ವೆಂಕಟನಾರಾಯಣ ಮಾತನಾಡಿ, ‘ಬ್ರಾಹ್ಮಣ ಯುವಕ–ಯುವತಿಯರ ವಿದ್ಯೆ ಮತ್ತು ಸ್ವಾವಲಂಬನೆ ಬದುಕಿಗಾಗಿ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿ ಬ್ರಾಹ್ಮಣ ಹಣಕಾಸು ಸಂಸ್ಥೆ ತೆರೆಯುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ’ ಹೇಳಿದರು.

ದೂರದರ್ಶನ ನಿವೃತ್ತ ನಿರ್ದೇಶಕ ಮಹೇಶ ಜೋಶಿ ಮಾತನಾಡಿ, ‘ಜೀವಾತ್ಮನನ್ನು ಪರಮಾತ್ಮನ ಕಡೆಗೆ ಕರೆದೊಯ್ಯುವ ಅಧ್ಯಾತ್ಮ ಮತ್ತು ಜೀವನ ಕಲೆಯನ್ನು ಹುಟ್ಟಿನಿಂದ ಶುದ್ಧವಾದ ಆಚರಣೆ ಮೂಲಕ ಕರಗತ ಮಾಡಿಕೊಂಡವ ಬ್ರಾಹ್ಮಣ. ಆದ್ದರಿಂದ ಬ್ರಾಹ್ಮಣರಲ್ಲಿ ಐಕ್ಯತೆ ಇಲ್ಲ ಎಂಬ ಕೊರಗನ್ನು ಮತ್ತು ಬಡ ಬ್ರಾಹ್ಮಣ ಎಂಬ ಅನಿಸಿಕೆಯನ್ನು ದೂರಮಾಡಿಕೊಳ್ಳಬೇಕು’ ಎಂದರು.

ಆಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಗಿರೀಶ ಮಾಸೂರಕರ, ಸಾಂಗಲಿ ಶಾಸಕ ಸುಧೀರ ಗಾಡ್ಗೀಳ್‌ ಮಾತನಾಡಿದರು. ಹನಮಂತ ಕೊಟಬಾಗಿ, ಟಿ.ಎಚ್‌. ಕುಲಕರ್ಣಿ, ಶ್ರೀ ಕುಮಾರ, ಸಾಧನಾ ಪೋಟೆ, ಗುರುರಾಜ ಕಟ್ಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮಾಜಿ ಶಾಸಕ ಸಿದ್ದು ಸವದಿ, ಶ್ರೀರಾಮ ಆನಿಖಂಡಿ ವೇದಿಕೆಯಲ್ಲಿದ್ದರು.

ವೆಂಕಣ್ಣಾಚಾರ್ಯ ಅದ್ಯಾಪಕ ವೇದಘೋಷ ಮಾಡಿದರು. ಶ್ರುತಿ ಕಟ್ಟಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ವಿಜಯಲಕ್ಷ್ಮೀ ಕಿತ್ತೂರ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಡಾ.ವಿನಾಯಕ ಕುಲಕರ್ಣಿ ಸ್ವಾಗತಿಸಿದರು. ಮೇಘಾ ಪುರೋಹಿತ, ಚಿದಂಬರ ಸವಾಯಿ ನಿರೂಪಿಸಿದರು. ರಾಜೇಂದ್ರ ಹುಲ್ಯಾಳಕರ ವಂದಿಸಿದರು.

ಕಾರ್ಯಕ್ರಮಕ್ಕೆ ಮುಂಚೆ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಶೋಭಾಯಾತ್ರೆ ನಡೆಯಿತು.
**
ರಾಜ್ಯ ಸಮಾವೇಶ

ಫೆ.24 ಮತ್ತು. ಫೆ.25 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬ್ರಾಹ್ಮಣ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಬರಲಿ ದ್ದಾರೆ ಎಂದು ಕೆ.ಎಸ್‌. ವೆಂಕಟ ನಾರಾಯಣ ಹೇಳಿದರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದಿಂದ ಬಾಗಲಕೋಟೆಯಲ್ಲಿ ಫೆ.18ಕ್ಕೆ ಜಿಲ್ಲಾ ಸಮಾವೇಶ ಆಯೋಜಿ ಸಲಾಗುವುದು ಎಂದು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಗಿರೀಶ ಮಾಸೂರಕರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.