ADVERTISEMENT

ಏಳೂ ಮಂದಿ ಗೆಲ್ಲಿಸಿ, ನನ್ನ ಕೈ ಬಲಪಡಿಸಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 9:30 IST
Last Updated 12 ಫೆಬ್ರುವರಿ 2018, 9:30 IST
ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ಭಾನುವಾರ ನಿರಾಣಿ ಪರಿವಾರ ಆಯೋಜಿಸಿದ್ದ 128 ಜೋಡಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನೂತನ ದಂಪತಿಗಳನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಶೀರ್ವದಿಸಿದರು. ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ, ನಿರಾಣಿ ಫೌಂಡೇಷನ್‌ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ, ಸಂಸದರಾದ ಪಿ.ಸಿ.ಗದ್ದಿಗೌಡರ, ಜಿ.ಎಂ.ಸಿದ್ದೇಶ್ ಇದ್ದರು
ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ಭಾನುವಾರ ನಿರಾಣಿ ಪರಿವಾರ ಆಯೋಜಿಸಿದ್ದ 128 ಜೋಡಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನೂತನ ದಂಪತಿಗಳನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಶೀರ್ವದಿಸಿದರು. ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ, ನಿರಾಣಿ ಫೌಂಡೇಷನ್‌ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ, ಸಂಸದರಾದ ಪಿ.ಸಿ.ಗದ್ದಿಗೌಡರ, ಜಿ.ಎಂ.ಸಿದ್ದೇಶ್ ಇದ್ದರು   

ಬೀಳಗಿ (ಬಾಗಲಕೋಟೆ): ‘ಈ ಬಾರಿ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿ ಯೋಜನೆಗಳ ಪೂರ್ಣಗೊಳಿಸಲು ₹ 1 ಲಕ್ಷ ಕೋಟಿ ಕೊಡುವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಪಟ್ಟಣದ ಕನಕದಾಸ ವೃತ್ತದ ಸಮೀಪ ಭಾನುವಾರ ನಡೆದ ಮಾಜಿ ಸಚಿವ ಮುರುಗೇಶ ನಿರಾಣಿ ಪುತ್ರ ವಿಜಯ್ ಹಾಗೂ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಸಹೋದರ ಪ್ರಸನ್ನಕುಮಾರ ಪುತ್ರಿ ಜಿ.ಪಿ.ಸುಷ್ಮಿತಾ ಅವರು ಮದುವೆ ಹಾಗೂ 128 ಜೋಡಿ ಸಾಮೂಹಿಕ ವಿವಾಹ ಸಮಾರಂಭದಲ್ಲಿ ನೂತನ ವಧು–ವರರನ್ನು ಆಶೀರ್ವದಿಸಿ ಅವರು ಮಾತನಾಡಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಚಟುವಟಿಕೆಗಳಿಗೆ ಕೇಂದ್ರದಿಂದ ಹೆಚ್ಚಿನ ಸಹಕಾರ ಸಿಗಲಿದೆ. ನನ್ನನ್ನು ಮತ್ತೆ ಮುಖ್ಯಮಂತ್ರಿಯಾಗಿಸಲು ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಬಿಜೆಪಿ ಕೈ ಬಲಪಡಿಸುವಂತೆ ಮನವಿ ಮಾಡಿದರು.

ADVERTISEMENT

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಕೊಡಿಸಲಾಗುವುದು. ರೈತಾಪಿ ವರ್ಗದ ಅಭ್ಯುದಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದ ಅವರು, ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಆಶೀರ್ವಾದ ಮಾಡುವಂತೆ ಕೋರಿದರು.

ಮದುವೆಯ ವೈಭವ: ನಿರಾಣಿ ಪುತ್ರ ಸೇರಿದಂತೆ ಅವಿಭಜಿತ ವಿಜಯಪುರ ಜಿಲ್ಲೆಯ ಜೋಡಿಗಳು ದಾಂಪತ್ಯ ಬದುಕಿಗೆ ಅಡಿಯಿಟ್ಟ ವೈಭವದ ಸಮಾರಂಭ ಕಣ್ತುಂಬಿಕೊಳ್ಳಲು ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಮಂದಿ ಬಂದಿದ್ದರು.

ಕನಕದಾಸ ವೃತ್ತದ ಪಕ್ಕದ ಮೈದಾನದಲ್ಲಿ ಅರಮನೆ ಸೆಟ್ ಮಾದರಿಯಲ್ಲಿ ಹಾಕಿದ್ದ ವೇದಿಕೆಯಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಮದುವೆಗೆ ಬಂದವರು, ಅತಿಥಿಗಳು, ಗಣ್ಯರು, ಆಹ್ವಾನಿತರನ್ನು ನಿರಾಣಿ ಪರಿವಾರದವರು ಬರಮಾಡಿಕೊಂಡು ಆತಿಥ್ಯ ನೀಡಿದರು.

ಶುಭಾಶಯ ಕೋರಿಕೆ: ಸಂಸದರಾದ ಪಿ.ಸಿ.ಗದ್ದಿಗೌಡರ, ಶಿವಕುಮಾರ ಉದಾಸಿ, ಶಾಸಕ ಉಮೇಶ ಕತ್ತಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ವೀರಣ್ಣ ಚರಂತಿಮಠ, ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಉದ್ಯಮಿ ವಿಜಯ ಸಂಕೇಶ್ವರ ದಂಪತಿ, ಶ್ರೀಶೈಲ ದಳವಾಯಿ, ಬಿಜೆಪಿ ಮುಖಂಡ ಮಹಾಂತೇಶ ಮಮದಾಪುರ ಪಾಲ್ಗೊಂಡು ನೂತನ ದಂಪತಿಗೆ ಶುಭಾಶಯ ಕೋರಿದರು. ನಿರಾಣಿ ಪರಿವಾರದ ಮುರುಗೇಶ ನಿರಾಣಿ, ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ, ಲಕ್ಷ್ಮಣ ನಿರಾಣಿ, ಸಂಗಮೇಶ ನಿರಾಣಿ, ಸಂಸದ ಜಿ.ಎಂ.ಸಿದ್ದೇಶ್ವರ ಸಹೋದರ ಪ್ರಸನ್ನಕುಮಾರ ದಂಪತಿ ಎಲ್ಲರನ್ನೂ ಸ್ವಾಗತಿಸಿದರು.

ಬಸವ ಜಯಮೃತ್ಯುಂಜಯ ಸ್ವಾಮೀಜಿ, ಇಂಚಗೇರಿ ಮಠದ ಪ್ರಭು ಮಹಾರಾಜರು ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಮುಂಜಾನೆಯಿಂದಲೇ ವಿವಾಹದ ಧಾರ್ಮಿಕ ವಿಧಿ–ವಿಧಾನಗಳು ನೆರವೇರಿ ದವು. ಮಧ್ಯಾಹ್ನ ಯಡಿಯೂರಪ್ಪ ಬಂದ ನಂತರ ಅವರ ಸಮ್ಮುಖದಲ್ಲಿ ಅಕ್ಷತೆ ಹಾಕಿ ನವದಂಪತಿಯನ್ನು ಹರಸಲಾಯಿತು.

ಶೇಂಗಾ ಹೋಳಿಗೆ, ಜಿಲೇಬಿ ಸವಿ

ಮದುವೆಗೆ ಬಂದವರಿಗೆ ಬಗೆ, ಬಗೆಯ ಭಕ್ಷ್ಯ–ಭೋಜನಗಳು ಸ್ವಾಗತಿಸದವು. ಅತಿಥಿ–ಅಭ್ಯಾಗತರು ರೊಟ್ಟಿ, ಚಪಾತಿ, ಜಿಲೇಬಿ, ಲಾಡು, ಶೇಂಗಾ ಹೋಳಿಗೆ, ಪಾಯಸ, ಪುಲಾವ್ ಹಾಗೂ ಅನ್ನ–ಸಾಂಬಾರ್ ಸವಿದರು. ಊಟದ ವೇಳೆ ನೂಕು–ನುಗ್ಗಲು ತಪ್ಪಿಸಲು ಪ್ರತ್ಯೇಕ ಕೌಂಟರ್‌ಗಳನ್ನು ಮಾಡಲಾಗಿತ್ತು. ಬೆಂಗಳೂರಿನ ಆರ್ಕೆಸ್ಟ್ರಾ ಕಲಾವಿದರು ಬಂದವರನ್ನು ರಂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.