ADVERTISEMENT

ದಿನಕ್ಕೊಂದು ಕಾಗದ ಪತ್ರ: ಹೈರಾಣದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 6 ಮೇ 2025, 14:14 IST
Last Updated 6 ಮೇ 2025, 14:14 IST
ರಬಕವಿ ಬನಹಟ್ಟಿ ನಗರಸಭೆಯಲ್ಲಿ ಇ- ಆಸ್ತಿಯ ಉತಾರ ನೀಡುವಲ್ಲಿ ಸಾಕಷ್ಟು ಗೊಂದಲವಿದ್ದು, ನಗರಸಭೆಯ ಸದಸ್ಯರು, ಸಾರ್ವಜನಿಕರು ಪೌರಾಯುಕ್ತ ಜಗದೀಶ ಈಟಿ ಅವರ ಜೊತೆಗೆ ವಾಗ್ವಾದ ನಡೆಸಿದರು
ರಬಕವಿ ಬನಹಟ್ಟಿ ನಗರಸಭೆಯಲ್ಲಿ ಇ- ಆಸ್ತಿಯ ಉತಾರ ನೀಡುವಲ್ಲಿ ಸಾಕಷ್ಟು ಗೊಂದಲವಿದ್ದು, ನಗರಸಭೆಯ ಸದಸ್ಯರು, ಸಾರ್ವಜನಿಕರು ಪೌರಾಯುಕ್ತ ಜಗದೀಶ ಈಟಿ ಅವರ ಜೊತೆಗೆ ವಾಗ್ವಾದ ನಡೆಸಿದರು   

ರಬಕವಿ ಬನಹಟ್ಟಿ: ‘ಇಲ್ಲಿಯ ನಗರಸಭೆಯಲ್ಲಿ ಇ-ಆಸ್ತಿ ಉತಾರ ಪೂರೈಕೆ ಕುರಿತು ಸಾಕಷ್ಟು ಗೊಂದಲಗಳಿದ್ದು, ದಿನಕ್ಕೊಂದು ಕಾಗದಪತ್ರ ನೀಡುವಂತೆ ಅಧಿಕಾರಿಗಳು ಹೇಳುತ್ತಿರುವುದರಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ನಿತ್ಯ ನಗರಸಭೆಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ನಗರಸಭೆಯಲ್ಲಿ ಈಗಾಗಲೇ ನಾಲ್ಕಾರು ತಿಂಗಳುಗಳಿಂದ ದಾಖಲೆಗಳನ್ನು ನೀಡಿದವರಿಗೂ ಇ- ಆಸ್ತಿಯ ಉತಾರಗಳನ್ನು ನಗರಸಭೆ ನೀಡುತ್ತಿಲ್ಲ. ಇ- ಆಸ್ತಿಗಾಗಿ ನೀಡಿದ್ದ ಕಾಗದಪತ್ರಗಳನ್ನು ಕೂಡ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ’ ಎಂದು ರಬಕವಿ ಬನಹಟ್ಟಿ ನಗರಸಭೆಯ ಸದಸ್ಯರ ಶ‍್ರೀಶೈಲ ಬೀಳಗಿ ಆರೋಪಿಸಿದರು.

ಅವರು ಮಂಗಳವಾರ ಇಲ್ಲಿಯ ನಗರಸಭೆಯಲ್ಲಿ ಇ- ಆಸ್ತಿ ಉತಾರ ಪೂರೈಕೆಯಲ್ಲಿಯ ಗೊಂದಲ ಕುರಿತು ಪೌರಾಯುಕ್ತರೊಂದಿಗೆ ಮಾತನಾಡಿದರು.

‘ಕೆಲ ದಿನಗಳ ಹಿಂದೆ ಕಾಗದ ಪತ್ರಗಳನ್ನು ನೀಡಿದವರಿಗೆ ಋಣಭಾರದ ಕಾಗದ ಪತ್ರ ನೀಡುವಂತೆ ತಿಳಿಸಿದರು. ಪಿತ್ರಾರ್ಜಿತ ಆಸ್ತಿಗಳು ಇದ್ದರೆ 2004 ರ ಹಿಂದಿನ ಋಣಭಾರದ ಕಾಗದ ಪತ್ರನೀಡಬೇಕು ಎಂದು ಹೇಳಿದರು. ಈ ಕಾಗದ ಪತ್ರಗಳನ್ನು ತೆಗೆಯಿಸಲು ಜನರು ತೇರದಾಳಕ್ಕೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಬಡ ನೇಕಾರ ಸಮುದಾಯಕ್ಕೂ ಆರ್ಥಿಕ ಹೊರೆಯಾಗಿದೆ. ಈಗ ಹೆಸ್ಕಾಂ ನಿಂದ ಯಾವುದೆ ಆಕ್ಷೇಪಣೆ ಇಲ್ಲ ಎಂಬ ಪ್ರಮಾಣವನ್ನು ಪತ್ರ ನೀಡುವಂತೆ ಹೇಳುತ್ತಿದ್ದಾರೆ. ಇದರಿಂದಲೂ ಕೂಡ ಜನರಿಗೆ ತೊಂದರೆಯಾಗಿದೆ’ ಎಂದು ನಗರ ನಿವಾಸಿ ಅಶೋಕ ರಾವಳ ದೂರಿದರು.

ADVERTISEMENT

ಫೆ.6 ರಂದು ಇ-ಆಸ್ತಿ ಉತಾರಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ನಮಗೆ ಇಲ್ಲಿಯವರಿಗೆ ಉತಾರ ನೀಡಿಲ್ಲ ಎಂದು ಶ‍್ರೀಶೈಲ ಗಸ್ತಿ ದೂರಿದರು.

‘ನಗರಸಭೆಯಲ್ಲಿ ಅಧಿಕಾರಿಗಳು ಜನಪತ್ರಿನಿಧಿಗಳಿಗೆ ಸ್ಪಂದನೆ ನೀಡುತ್ತಿಲ್ಲ. ಜನಪ್ರತಿನಿಧಿಗಳು ಮೂರು ಗಂಟೆ ಕಾಲ ಅಧಿಕಾರಿಗಳ ಮುಂದೆ ಕುಳಿತರೂ ಯಾವುದೇ ಕೆಲಸ ಮಾಡಿಕೊಡುತ್ತಿಲ್ಲ. ನಗರಸಭೆಯ ಅಧಿಕಾರಿಗಳಿಂದ ಇದೇ ರೀತಿಯ ಕಾರ್ಯ ಮುಂದುವರಿದರೆ ಮುಂದಿನ ದಿನಗಳಲ್ಲಿ ನಗರಸಭೆಯ ಎದುರು ಸದಸ್ಯರು ಮತ್ತು ಸಾರ್ವಜನಿಕರು ಸೇರಿ ಪ್ರತಿಭಟನೆ ಮಾಡಬೇಕಾಗುತ್ತದೆ. ಬಾಗಲಕೋಟೆ ಜಿಲ್ಲಾಧಿಕಾರಿ ಇತ್ತ ಗಮನ ನೀಡಬೇಕು’ ಎಂದು ಶ್ರೀಶೈಲ ಬೀಳಗಿ ಆಗ್ರಹಿಸಿದರು.

ಸ್ಥಾಯಿ ಸಮಿತಿ ಕಾರ್ಯಾಧ್ಯಕ್ಷ ಅರುಣ ಬುದ್ನಿ, ಸಂಜಯ ತೆಗ್ಗಿ, ಗೌರಿ ಮಿಳ್ಳಿ, ರವಿ ಕೊರ್ತಿ, ಶ‍್ರೀಶೈಲ ಆಲಗೂರ, ವಿಜಯ ಕಲಾಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.