ಜಮಖಂಡಿ: ತಾಲ್ಲೂಕಿನ ಕೆ.ಡಿ.ಜಂಬಗಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರನ್ನು ಅವರ ಸಂಬಂಧಿಕರೇ ಕೊಲೆ ಮಾಡಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಆರತಿ ಶಿಂಗೆ ಮೃತಪಟ್ಟವರು. ಕೆ.ಡಿ.ಜಂಬಗಿ ಕ್ರಾಸ್‌ನಲ್ಲಿರುವ ಗ್ಯಾರೇಜ್‌ನಲ್ಲಿ ಸಿದ್ದು ಶಿಂಗೆ ಕೆಲಸ ಮಾಡುತ್ತಿದ್ದರು. ಅಲ್ಲಿ ಬೈಕ್ ತೊಳೆಯುತ್ತಿದ್ದಾಗ ಪೈಪ್ ನೀರು ವಿನೋದ ಶಿಂಗೆ ಎಂಬವರ ಮೈಮೇಲೆ ಬಿದ್ದಿತು. ಇದರಿಂದ ಆತ ಸಿಟ್ಟಿಗೆದ್ದು ಸಿದ್ದು ಶಿಂಗೆಯನ್ನು ಹೊಡೆದ ಎನ್ನಲಾಗಿದೆ.
ಮನೆಗೆ ಬಂದ ಸಿದ್ದು ಶಿಂಗೆ ತನ್ನ ತಂದೆ ರಮೇಶ ಸದಾಶಿವ ಶಿಂಗೆ ಮತ್ತು ತಾಯಿ ಆರತಿಗೆ ಈ ವಿಷಯವನ್ನು ಹೇಳಿದ. ಮೂವರೂ ವಿನೋದ ಶಿಂಗೆ ಮನೆಯ ಹೊರಗೆ ನಿಂತು ಈ ಬಗ್ಗೆ ಕೇಳಲು ಹೋದರು. ಎರಡೂ ಕುಟುಂಬಗಳ ನಡುವೆ ವಾಗ್ವಾದ ತಾರಕಕ್ಕೇರಿ ವಿನೋದ ಹಾಗೂ ಆತನ ತಾಯಿ ಮಾಲಾ ಸಾಬು ಶಿಂಗೆ, ಪತ್ನಿ ಸ್ವಪ್ನಾ ಶಿಂಗೆ, ಸುಧಾರಾಣಿ ಕಾಂಬಳೆ ಒಟ್ಟು ನಾಲ್ವರು ಸೇರಿ ಆರತಿ ಶಿಂಗೆಯನ್ನು ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಮಂಗಳವಾರ ಎಸ್‌ಪಿ ಅಮರನಾಥ ರೆಡ್ಡಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಡಿವೈಎಸ್‌ಪಿ ಶಾಂತವೀರ, ಸಿಪಿಐ ಮಲ್ಲಪ್ಪ ಮಡ್ಡಿ ತನಿಖೆಯನ್ನು ಕೈಗೊಂಡಿದ್ದು ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.