ADVERTISEMENT

ಗುಳೇದಗುಡ್ಡ: ಶಿಥಿಲಾವಸ್ಥೆಯಲ್ಲಿ ಜಲಸಂಪನ್ಮೂಲ ಇಲಾಖೆ ವಸತಿ ಗೃಹಗಳು

ತಹಶೀಲ್ದಾರ್ ಕಚೇರಿಗೆ ಕೆಲವು ವಸತಿ ಗೃಹಗಳು ಬಾಡಿಗೆಗೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 4:02 IST
Last Updated 12 ಜುಲೈ 2025, 4:02 IST
ಜಲ ಸಂಪನ್ಮೂಲ ಇಲಾಖೆಯ ಕಚೇರಿ ಕಟ್ಟಡದ ನೋಟ
ಜಲ ಸಂಪನ್ಮೂಲ ಇಲಾಖೆಯ ಕಚೇರಿ ಕಟ್ಟಡದ ನೋಟ   

ಗುಳೇದಗುಡ್ಡ: ಪಟ್ಟಣದ ಕೋಟೆಕಲ್ ಗ್ರಾಮದ ಹತ್ತಿರ, ಬಾದಾಮಿ ನಾಕಾಕ್ಕೆ ಹೊಂದಿಕೊಂಡಿರುವ ಜಲಸಂಪನ್ಮೂಲ ಇಲಾಖೆಯ ಮಲಪ್ರಭಾ ಎಡದಂಡೆ ಕಾಲುವೆ ಯೋಜನೆಯ ಮತ್ತು ಅಲ್ಲಿನ ಸಿಬ್ಬಂದಿಗಾಗಿ 35 ವರ್ಷಗಳ ಹಿಂದೆ ನಿರ್ಮಿಸಿರುವ ವಸತಿ ಗೃಹಗಳು ಮತ್ತು ಕಚೇರಿಗಳು ಶಿಥಿಲಾವಸ್ಥೆ ಸ್ಥಿತಿಯಲ್ಲಿದ್ದು ಅನುಪಯುಕ್ತವಾಗಿವೆ.

37 ವಸತಿ ಗೃಹಗಳು, ಎರಡು ಕಚೇರಿಗಳಿವೆ. ಅದರಲ್ಲಿ 7 ವಸತಿ ಗೃಹಗಳನ್ನು ಕಂದಾಯ ಇಲಾಖೆ ತಹಶೀಲ್ದಾರ್ ಕಚೇರಿಗೆ ನೀಡಲಾಗಿದೆ. ಇನ್ನುಳಿದವು ಪಾಳು ಬಿದ್ದಿವೆ. ಪ್ರಸ್ತುತ ಕಚೇರಿ ಇದ್ದು, ಒಬ್ಬರು ಪ್ರಥಮ ದರ್ಜೆ ಸಹಾಯಕರು, ಇಬ್ಬರು ದ್ವಿತೀಯ ದರ್ಜೆ ಸಹಾಯಕರಿದ್ದಾರೆ. ಕೆಲಸ ಮಾಡುತ್ತಿರುವ ಎರಡು ಕಟುಂಬಗಳು ವಾಸವಾಗಿದ್ದನ್ನು ಬಿಟ್ಟರೆ, ಎಲ್ಲವೂ ಖಾಲಿ ಇದ್ದು ನಿರ್ವಹಣೆ ಇಲ್ಲದ್ದಕ್ಕೆ ಹಾಳಾಗಿವೆ.

ತಹಶೀಲ್ದಾರ್ ಕಚೇರಿಗೆ ಬಾಡಿಗೆ: 2018-19 ನೇ ಸಾಲಿನಿಂದ 7 ವಸತಿ ಗೃಹಗಳ ಕಟ್ಟಡಗಳನ್ನು ಕಂದಾಯ ಇಲಾಖೆಗೆ ಬಾಡಿಗೆ ನೀಡಲಾಗಿದೆ. ತಹಶೀಲ್ದಾರ್ ಕಚೇರಿ ಅದಕ್ಕೆ ಸಂಬಂಧಿಸಿದ ಎಲ್ಲ ಕಚೇರಿಗಳಿವೆ. ಇವುಗಳಿಗಾಗಿ ತಿಂಗಳಿಗೆ ₹26 ಸಾವಿರ ಬಾಡಿಗೆ ನಿಗದಿ ಮಾಡಲಾಗಿದೆ.

ADVERTISEMENT

ಪೂರ್ಣಗೊಳ್ಳದ ಕಾಲುವೆ : 30 ವರ್ಷಗಳ ಹಿಂದೆಯೇ ಬಾದಾಮಿ ತಾಲ್ಲೂಕಿನ ಕುಟಕನಕೇರಿಯಿಂದ ಕಾಲುವೆ ಆರಂಭವಾಗಿ ಗುಳೇದಗುಡ್ಡ ತಾಲ್ಲೂಕನ್ನು ಪ್ರವೇಶಿಸಿ ರಾಘಾಪುರ, ಹಂಸನೂರ, ಮುರುಡಿ, ಕೋಟೆಕಲ್ ನಂತರ ಪರ್ವತಿಯವರೆಗೆ ಕಾಲುವೆ ತೋಡಿ, ನೀರನ್ನು ಹರಿಸುವ ಉದ್ದೇಶ ಸರ್ಕಾರದ್ದಾಗಿತ್ತು. ಆದರೆ ಕಾಲುವೆ ಪೂರ್ಣಗೊಳ್ಳದೆ, ಅರ್ಧಕ್ಕೆ ನಿಂತಿದೆ. ಉದ್ದೇಶ ಈಡೇರದಿರುವುದರಿಂದ ನಿರ್ಮಾಣ ಮಾಡಿದ್ದ ಕಾಲುವೆ ಸಂಪೂರ್ಣ ಹಾಳಾಗಿದೆ.

ಅನುದಾನಕ್ಕೆ ಬೇಡಿಕೆ: ಬಾದಾಮಿ, ಗುಳೇದಗುಡ್ಡ ತಾಲ್ಲೂಕಿಗೆ ನೀರಾವರಿಗೆ ನೀರು ಪೂರೈಕೆ ಉದ್ದೇಶದಿಂದ ಮಲಪ್ರಭಾ ಎಡದಂಡೆ ಮೂಲಕ ಹರಿಸಲು ಮತ್ತು ಹೊಸದಾಗಿ ಕಾಲುವೆ ತೋಡಲು, ಕಚೇರಿ ಮತ್ತು ವಸತಿ ಗೃಹ ನಿರ್ಮಾಣಕ್ಕೆ ಶಾಸಕರ ಮೂಲಕ ಸರ್ಕಾರಕ್ಕೆ ₹421 ಕೋಟಿ ಮಂಜೂರಾತಿ ನೀಡಲು ಮನವಿ ಮಾಡಲಾಗಿದೆ.

ಪ್ರಸ್ತುತ ಅದರಲ್ಲಿ ₹50 ಕೋಟಿ ಅನುದಾನ ಮಂಜೂರಾಗಿದ್ದು, ಬಾದಾಮಿಯಲ್ಲಿ ಕಚೇರಿ ಮತ್ತು ಸಿಬ್ಬಂದಿ ವಸತಿ ಗೃಹ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗುಳೇದಗುಡ್ಡದಲ್ಲಿರುವ ವಸತಿಗೃಹ ಮತ್ತು ಕಚೇರಿಯನ್ನು ಲೋಕೋಪಯೋಗಿ ಇಲಾಖೆ ನಿರ್ದೆಶನದ ಮೇರೆಗೆ ಕೆಡವಿ,  ಹೊಸ ಕಟ್ಟಡ ನಿರ್ಮಾಣ ಮಾಡಲಾಗುದು ಎಂದು ಸಹಾಯಕ ಎಂಜಿನಿಯರ್ ಪ್ರಭಾಕರ ಹೇಳುತ್ತಾರೆ.

ಜಲ ಸಂಪನ್ಮೂಲ ಇಲಾಖೆಯ ಕಟ್ಟಡದ ನೋಟ
ತಾಲ್ಲೂಕಿನ ಕೇಂದ್ರದಲ್ಲಿ ಎಲ್ಲ ಕಚೇರಿಗಳಿಲ್ಲ. ಕೇಳಿದರೆ ಜಾಗ ಇಲ್ಲ ಎನ್ನುತ್ತಾರೆ. ಜಲ ಸಂಪನ್ಮೂಲ ಇಲಾಖೆಯ ಕಟ್ಟಡ ಸಮುಚ್ಚಯ 4 ಎಕರೆಯಷ್ಟು ಜಾಗ ಇದೆ. ಇಲ್ಲಿ ಪ್ರಜಾಸೌಧ ನಿರ್ಮಿಸಬಹುದು
ಅಶೋಕ ಎಚ್ ನೇಕಾರ ಮುಖಂಡ ಗುಳೇದಗುಡ್ಡ
ಮಲಪ್ರಭಾ ಎಡದಂಡೆ ಕಾಲುವೆ ಗುಳೇದಗುಡ್ಡ ತಾಲ್ಲೂಕಿನವರೆಗೆ ಬಾರದ್ದರಿಂದ ರೈತರಿಗೆ ಅನುಕೂಲವಾಗಲಿಲ್ಲ. ಸಿಬ್ಬಂದಿ ಕಡಿಮೆಯಾಗಿದ್ದರಿಂದ ವಸತಿ ಗೃಹಗಳು ಖಾಲಿ ಉಳಿದು ಶಿಥಿಲಾವಸ್ಥೆ ತಲುಪಿವೆ
‌ಆರ್.ಎ. ಬಿಸನಾಳ ಕಿರಿಯ ಎಂಜಿನಯರ್ ಮಲಪ್ರಭಾ ಎಡದಂಡೆ ಕಾಲುವೆ ಗುಳೇದಗುಡ್ಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.