ಮುಧೋಳ: ‘ಮಾಜಿ ಸಚಿವ ಮುರುಗೇಶ ನಿರಾಣಿ ತಮ್ಮ ಜನ್ಮದಿನದ ಅಂಗವಾಗಿ ಕಬ್ಬಿನ ಬೆಳೆ, ನೀರಿನ ಉಪಯೋಗ ಹೀಗೆ ಕೃಷಿ ಸಂಬಂಧಿತ ಮಾಹಿತಿಯನ್ನು ಪರಿಣತರಿಂದ ರೈತರಿಗೆ ನೀಡುತ್ತಿರುವುದು ಅನುಕರಣೀಯ’ ಎಂದು ಭಾರತ ಸರ್ಕಾರದ ಕೃಷಿ ಇಲಾಖೆಯ ರೈತರ ಆದಾಯ ದ್ವಿಗುಣ ಸಮಿತಿ ಅಧ್ಯಕ್ಷ ಅಶೋಕ ದಳವಾಯಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಕೃಷಿಯಲ್ಲಿ ಎಐ ತಂತ್ರಜ್ಞಾನ ಬಳಕೆ’, ‘ಕಬ್ಬಿನ ಅಧಿಕ ಇಳುವರಿ’, ‘ಪ್ರಮುಖ ಕೀಟಬಾಧೆ ನಿಯಂತ್ರಣ’ ಹಾಗೂ ‘ಸುಧಾರಿತ ಬೇಸಾಯ ಕ್ರಮಗಳ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
‘ಅವರ ಶ್ರಮಕ್ಕೆ ನಿಜವಾದ ಪ್ರತಿಫಲ ದೊರೆಯಬೇಕಾದರೆ ರೈತರು ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಕೆಗೆ ಮುಂದಾಗಬೇಕು’ ಎಂದರು
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಮುರುಗೇಶ ನಿರಾಣಿ, ‘ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಬಳಕೆಯಿಂದ ರೈತರ ಜೀವನ ಹಸನಾಗುವುದರಲ್ಲಿ ಸಂದೇಹವಿಲ್ಲ. ಮುಂಬರುವ ದಿನದಲ್ಲಿ ನಾವೇ ಭೂಮಿಯಲ್ಲಿ ಎಐ ತಂತ್ರಜ್ಞಾನದ ಮೂಲಕ ಕಬ್ಬು ಬೆಳೆಸಿ ರೈತರಲ್ಲಿ ಜಾಗೃತಿ ಮೂಡಿಸುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದರು.
‘ಅಲ್ಪಾವಧಿ ಬೆಳೆಯಾಗಿರುವ ಸಿಹಿಜೋಳ ಬೆಳೆಸುವತ್ತ ರೈತರು ಗಮನಹರಿಸಬೇಕು. ಮೆಕ್ಕೆಜೋಳದಿಂದ ಎಥೆನಾಲ್ ತಯಾರಿಸುವ ಘಟಕಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದ 12 ಲಕ್ಷ ಲೀಟರ್ ಎಥೆನಾಲ್ ತಯಾರಾಗುತ್ತಿದೆ’ ಎಂದರು.
ರಾಜ್ಯ ಸರ್ಕಾರದ ಕೃಷಿ ಇಲಾಖೆ ಸಲಹೆಗಾರ ಎ.ಬಿ. ಪಾಟೀಲ, ನಿರಾಣಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಮಾತನಾಡಿದರು.
ಕೇಂದ್ರ ಸರ್ಕಾರದ ರೈತರ ಆದಾಯ ದ್ವಿಗುಣ ಸಮಿತಿ ಸದಸ್ಯ ಡಾ.ರವಿಶಂಕರ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ರವಿಶಂಕರ, ಬಾರಮತಿ ಕೃಷಿ ವಿಶ್ವವಿದ್ಯಾಲಯದ ತಜ್ಞ ಭೂಷಣ್ ಗೋಸಾವಿ ಕಾರ್ಯಾಗಾರ ನಡೆಸಿಕೊಟ್ಟರು.
ರೈತಮುಖಂಡ ಲಕ್ಷ್ಮಣ ದೊಡಮನಿ, ಎ.ಜಿ. ಪಾಟೀಲ, ನಿರಾಣಿ ಸಮೂಹದ ಕೃಷಿ ವಿಭಾಗದ ಮುಖ್ಯಸ್ಥ ಎನ್.ವಿ. ಪಡಿಯಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.