
ಬಾಗಲಕೋಟೆ: ವಿಜ್ಞಾನದ ವಿದ್ಯಾರ್ಥಿಗಳು ವಿಜ್ಞಾನಿಗಳಾಗಬೇಕು. ವಿಜ್ಞಾನದ ಜೊತೆಗೆ ಅವರಲ್ಲಿ ತತ್ವಜ್ಞಾನ ಹಾಗೂ ಧರ್ಮ ಇದ್ದಾಗ ನಿಜವಾದ ವಿಜ್ಞಾನದ ಉಪಯೋಗ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಹೇಳಿದರು.
ನವನಗರದ 110ನೇ ಸೆಕ್ಟರ್‌ನಲ್ಲಿ ವಿದ್ಯಾ ಪ್ರಸಾರಕ ಮಂಡಳದ ಬಲರಾಮರಾವ್ ಹುನ್ನೂರ ವಿಜ್ಞಾನ ಕಾಲೇಜಿನ ನೂತನ ಕಟ್ಟಡದ ಭೂಮಿ ಪೂಜೆಯನ್ನು ಮಂಗಳವಾರ ನೆರವೇರಿಸಿ ಅವರು ಮಾತನಾಡಿದರು.
ತತ್ವಜ್ಞಾನ, ಧರ್ಮ, ಪುಣ್ಯ ಮುಂತಾದವುಗಳ ಬಗ್ಗೆ ತಿಳಿವಳಿಕೆ ಇದ್ದ ವ್ಯಕ್ತಿ ವೈಜ್ಞಾನಿಕವಾದ ಪ್ರಗತಿ ಸದುಪಯೋಗ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಿಜ್ಞಾನವು ಮೊಬೈಲ್ ಕೊಟ್ಟಿದೆ. ಆದರೆ, ಅದರ ಉಪಯೋಗ ಹೇಗೆ ಆಗಬೇಕು ಅನ್ನುವುದನ್ನು ತತ್ವಜ್ಞಾನದ ಹಿನ್ನಲೆಯಲ್ಲಿ ಮಾಡಿದರೆ ಸಾವಿರಾರು ಜನರಿಗೆ ಧರ್ಮದ ಸಂದೇಶ ಮುಟ್ಟಿಸಲು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದರು.
ವಿಜ್ಞಾನದ ಶಿಕ್ಷಣ ಮೂಲಕ ಉತ್ತಮ ವಿಜ್ಞಾನಿಗಳನ್ನು ಸಿದ್ಧಗೊಳಿಸಬೇಕು. ಉತ್ತಮ ವಿಜ್ಞಾನಿಗಳಾಗಿ ದೇಶಕ್ಕೆ ಕೊಡುಗೆಯನ್ನು ನೀಡುವುದರ ಮೂಲಕ ನಾಡಿಗೆ ಹೆಸರು ತರುವಂತಾಗಬೇಕು ಎಂದರು.
ಬೆಂಗಳೂರಿನ ಜಯತೀರ್ಥ ವಿದ್ಯಾಪೀಠದ ಪ್ರಾಚಾರ್ಯ ಪಂ.ಸತ್ಯಧ್ಯಾನಾಚಾರ್ಯ ಕಟ್ಟಿ, ದಾನಿ ಗೋಪಾಲ ಹುನ್ನೂರ, ಪಂ.ಭೀಮಸೇನಾಚಾರ್ಯ ಪಾಂಡುರಂಗಿ, ಗೌರವ ಕಾರ್ಯದರ್ಶಿ ಡಾ.ಗಿರೀಶ ಮಸೂರಕರ ಮಾತನಾಡಿದರು.
ಪಂ.ರಘೋತ್ತಮ್ರಾಚಾರ್ಯ ನಾಗಸಂಪಿಗೆ, ಪಂ.ಬಿಂದಾಚಾರ್ಯ ನಾಗಸಂಪಿಗೆ, ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ, ಅಧ್ಯಕ್ಷ ವಿ.ವೈ.ಕವಠೇಕರ, ಉಪಾಧ್ಯಕ್ಷ ಜಿ.ಎನ್.ಕುಲಕರ್ಣಿ, ಸದಸ್ಯರಾದ ಎಸ್.ಬಿ.ಪರ್ವತೀಕರ, ಎಸ್.ಕೆ.ಕುಲಕರ್ಣಿ, ವಿ.ಆರ್.ಬುರ್ಲಿ ಮತ್ತಿತರರು ಇದ್ದರು.