ADVERTISEMENT

ಸಾಮಾಜಿಕ ಕಳಕಳಿಯಿಂದ ಆದರ್ಶ ಸಮಾಜ ಕಟ್ಟಲು ಸಾಧ್ಯ: ಜಿ.ಬಿ. ಗೌಡಪ್ಪಗೋಳ

​ಪ್ರಜಾವಾಣಿ ವಾರ್ತೆ
Published 5 ಮೇ 2025, 13:31 IST
Last Updated 5 ಮೇ 2025, 13:31 IST
ಶಿರೂರಿನಲ್ಲಿ ಶನಿವಾರ ನಡೆದ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಮೆರವಣಿಗೆ ಸಮಾರಂಭದಲ್ಲಿ ಜಿ.ಬಿ.ಗೌಡಪ್ಪಗೋಳ ಮಾತನಾಡಿದರು.
ಶಿರೂರಿನಲ್ಲಿ ಶನಿವಾರ ನಡೆದ ಹೇಮರಡ್ಡಿ ಮಲ್ಲಮ್ಮ ಮೂರ್ತಿ ಮೆರವಣಿಗೆ ಸಮಾರಂಭದಲ್ಲಿ ಜಿ.ಬಿ.ಗೌಡಪ್ಪಗೋಳ ಮಾತನಾಡಿದರು.   

ರಾಂಪುರ: ಪ್ರತಿಯೊಬ್ಬ ವ್ಯಕ್ತಿ ಸಾಮಾಜಿಕ ಕಳಕಳಿ ಬೆಳೆಸಿಕೊಂಡಾಗ ಆದರ್ಶ ಸಮಾಜ ಕಟ್ಟಲು ಸಾಧ್ಯ ಎಂದು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಜಿ.ಬಿ. ಗೌಡಪ್ಪಗೋಳ ಹೇಳಿದರು.

ಸಮೀಪದ ಶಿರೂರ ಪಟ್ಟಣದಲ್ಲಿ ಶನಿವಾರ ನಡೆದ ಹೇಮರಡ್ಡಿ ಮಲ್ಲಮ್ಮ ಹಾಗೂ ಲಿಂ. ಸಿದ್ಧಲಿಂಗ ಶ್ರೀಗಳ ಮೂರ್ತಿಗಳ ಮೆರವಣಿಗೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಇಂದು ಮನುಷ್ಯನಲ್ಲಿ ಸದ್ಗುಣಗಳು ಮಾಯವಾಗುತ್ತಿವೆ. ಮನಸ್ಸುಗಳು ಸಣ್ಣದಾಗುತ್ತಿವೆ. ಇದರಿಂದಾಗಿ ನೆಮ್ಮದಿ, ಸಂತೋಷ ಇಲ್ಲದಾಗಿದೆ’ ಎಂದರು.

‘ನೆಮ್ಮದಿಯ ಬದುಕು, ಸದ್ಗುಣ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅದಕ್ಕೆ ಹೇಮರಡ್ಡಿ ಮಲ್ಲಮ್ಮಳ ಆದರ್ಶಗಳನ್ನು ಪಾಲಿಸಿದರೆ ಸುಂದರ ಬದುಕು ನಮ್ಮದಾಗುತ್ತದೆ. ದಾನ ಮಾಡುವುದು ಕೇವಲ ಕೊಡುಗೆ ಅಲ್ಲ. ಅದು ದೈವೀ ಕಾರ್ಯ. ನಮಗಿರುವುದರಲ್ಲಿ ಒಂದಿಷ್ಟನ್ನು ಸಾಮಾಜಿಕ ಕಾರ್ಯಗಳಿಗೆ ನೀಡಿದಾಗ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಮೆಲ್ಬ್ರೋ ಶುಗರ್ಸ್‌ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಮೆಳ್ಳಿಗೇರಿ, ಸಮಾಜಕ್ಕೆ ಉಪಯುಕ್ತ ಕಾರ್ಯಗಳಿಗೆ ಪ್ರತಿಯೊಬ್ಬರೂ ಸಹಾಯ ನೀಡುವುದು ಪುಣ್ಯದ ಕಾರ್ಯ ಎಂದರು.

ಸಾನ್ನಿಧ್ಯ ವಹಿಸಿದ್ದ ಶಿವಯೋಗಾಶ್ರಮದ ಚನ್ನವೀರ ಮರಿಮಹಾಂತ ಸ್ವಾಮೀಜಿ ಮಾತನಾಡಿ, ‘ಹೇಮರಡ್ಡಿ ಮಲ್ಲಮ್ಮಳ ತಾಳ್ಮೆ, ಸಹನೆಯ ಗುಣಗಳು ಪ್ರತಿಯೊಬ್ಬ ಗೃಹಿಣಿಯಲ್ಲಿ ಇರಬೇಕು. ಅಂದಾಗ ಸಂತೃಪ್ತ ಕುಟುಂಬ ವ್ಯವಸ್ಥೆ ಕಾಣಬಹುದು’ ಎಂದರು.

ಗುಳೇದಗುಡ್ಡದ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ಅಚಲ ಭಕ್ತಿ, ಶ್ರದ್ಧೆಯ ಕಾಯಕದಿಂದ ಶ್ರೀಶೈಲ ಮಲ್ಲಿಕಾರ್ಜುನನನ್ನು ಸಾಕ್ಷಾತ್ಕರಿಸಿಕೊಂಡು ಮನುಕುಲಕ್ಕೆ ಒಳ್ಳೆಯದನ್ನು ಬಯಸಿದ ಹೇಮರಡ್ಡಿ ಮಲ್ಲಮ್ಮ ಸಮಾಜಕ್ಕೆ ಆದರ್ಶಪ್ರಾಯಳು. ಅವಳ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.

ಹೇಮರಡ್ಡಿ ಮಲ್ಲಮ್ಮ ವಿಕಾಸ ಸಂಸ್ಥೆಯ ಕಾರ್ಯಾಧ್ಯಕ್ಷ ನೀಲಪ್ಪ ಕೋಟಿಕಲ್ ಅಧ್ಯಕ್ಷತೆ ವಹಿಸಿದ್ದರು.

ಡಾ.ವೈ.ಕೆ. ಕೋಟಿಕಲ್, ಕೆ.ಜಿ. ಗುಲಗಂಜಿ, ರಾಮಣ್ಣ ಕೋಟಿಕಲ್, ಸಿಂಧೂರಪ್ಪ ಬಾರಡ್ಡಿ, ಬಸವರಾಜ ಬಾವಲತ್ತಿ, ಬಸವರಾಜ ನಡುವಿನಮನಿ, ಎಸ್.ಬಿ. ಮಾಚಾ, ಸಂಜಯ ನಡುವಿನಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.