ಗುಳೇದಗುಡ್ಡ: ಪಟ್ಟಣದಲ್ಲಿ 41 ಅಂಗನವಾಡಿ ಕೇಂದ್ರಗಳಿವೆ. ಅದರಲ್ಲಿ ಆಡಳಿತದ ಅನುಕೂಲಕ್ಕಾಗಿ ಎ ಮತ್ತು ಬಿ ವಿಭಾಗಗಳೆಂದು ವರ್ಗೀಕರಣ ಮಾಡಲಾಗಿದೆ. ವಿಭಾಗದಲ್ಲಿ 21, ಬಿ ವಿಭಾಗದಲ್ಲಿ 20 ಅಂಗನವಾಡಿ ಕೇಂದ್ರಗಳಿವೆ.
41 ಅಂಗನವಾಡಿ ಕೇಂದ್ರಗಳ ಪೈಕಿ ಕೇವಲ ಐದು ಐದು ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿವೆ. ಅದರಲ್ಲಿ ಎರಡು ಅಂಬೇಡ್ಕರ್ ಭವನದ ಹತ್ತಿರ, ಬಸವೇಶ್ವರ ನಗರ, ಹರದೊಳ್ಳಿಯಲ್ಲಿ ಹೊರತುಪಡಿಸಿದರೆ ಉಳಿದೆಡೆ ಎಲ್ಲಿಯೂ ಸ್ವಂತ ಕಟ್ಟಡಗಳಿಲ್ಲ. ಉಳಿದಂತೆ ಮೂರು ಕಡೆ ಸರ್ಕಾರಿ ಶಾಲೆಗಳ ಒಂದು ಕೊಠಡಿಯಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ.
ಮೂಲಸೌಲಭ್ಯಗಳ ಕೊರತೆ: 25ಕ್ಕೂ ಹೆಚ್ಚು ಅಂಗನವಾಡಿಗಳಲ್ಲಿ ಮೂಲ ಸೌಲಭ್ಯಗಳಾದ ಶೌಚಾಲಯ ಕುಡಿಯುವ ನೀರು, ಆಟದ ಮೈದಾನ ಮುಂತಾದವುಗಳು ಇಲ್ಲ. ಹೀಗಾಗಿ ಮಕ್ಕಳು ತೊಂದರೆಗಳನ್ನು ಎದುರಿಸಬೇಕಾಗಿದೆ. ಕೆಲವು ಕಡೆ ಸಣ್ಣ ಕೊಠಡಿಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ.
ಅಂಗನವಾಡಿ ಚಟುವಟಿಕೆಗಳು: ಮಕ್ಕಳಿಗೆ ಬೆಳಿಗ್ಗೆ 10ಕ್ಕೆ ಹಾಲು ನೀಡುವುದು, 11ಕ್ಕೆ ಲಾಡು ನೀಡುವುದು, ಮಧ್ಯಾಹ್ನ 1ಕ್ಕೆ ಉಪಾಹಾರ ನೀಡಲಾಗುತ್ತದೆ. ಬೆಳಿಗ್ಗೆ 10 ರಿಂದ ಸಂಜೆ ನಾಲ್ಕರವರೆಗೆ ಮಕ್ಕಳನ್ನು ಕ್ರಿಯಾಶೀಲ ಚಟುವಟಿಕೆಯೊಂದಿಗೆ ಇಡುವುದು ಅಂಗನವಾಡಿ ಕಾರ್ಯಕರ್ತೆಯರ ಮುಖ್ಯ ಜವಾಬ್ದಾರಿಯಾಗಿದೆ. ಇಲ್ಲಿ ಅವು ಕ್ರಮಬದ್ಧವಾಗಿ ಯಾವುದೂ ನಡೆಯುವುದಿಲ್ಲ ಎನ್ನುವುದು ಪೋಷಕರ ದೂರು.
ಕಡಿಮೆ ವಿದ್ಯಾರ್ಥಿಗಳು: 41 ಅಂಗನವಾಡಿ ಕೇಂದ್ರಗಳಲ್ಲಿ ಕೆಲವು ಕಡೆ ಮಾತ್ರ 40 ವಿದ್ಯಾರ್ಥಿಗಳಿದ್ದಾರೆ. ಇನ್ನು ಕೆಲವು ಕಡೆ ಕೇವಲ 10 ರಿಂದ 12 ವಿದ್ಯಾರ್ಥಿಗಳಿದ್ದಾರೆ. ಅಂಗನವಾಡಿ ಮೇಲ್ವಿಚಾರಕರು ಹೇಳುವಂತೆ 41 ಅಂಗನವಾಡಿಗಳಲ್ಲಿ 1,050 ವಿದ್ಯಾರ್ಥಿಗಳಿದ್ದಾರೆ.
ನಾವೆಷ್ಟೇ ಪ್ರಯತ್ನ ಮಾಡಿದರೂ ಪಾಲಕರು ಮಕ್ಕಳನ್ನು ಅಂಗನವಾಡಿಗೆ ಸೇರಿಸುವುದಿಲ್ಲ. ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ ಎಂಬುದು ಅಂಗನವಾಡಿ ಕಾರ್ಯಕರ್ತೆಯರ ಮಾತು.
ಸಾರ್ವಜನಿಕರ ಆಗ್ರಹ: ಪಟ್ಟಣದಲ್ಲಿರುವ 36 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು ಒದಗಿಸಿ ಅಂಗನವಾಡಿಗಳಿಗೆ ಸಕಲ ಸೌಲಭ್ಯ ನೀಡಿ ಗುಣಾತ್ಮಕ ಶಿಕ್ಷಣ ಸಿಗುವಂತೆ ನೋಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಬಹಳಷ್ಟು ಅಂಗನವಾಡಿಗೆ ಸ್ವಂತ ಕಟ್ಟಡಗಳಿಲ್ಲ. ಬಾಡಿಗೆ ಕಟ್ಟಡಗಳಲ್ಲಿ ಕಲಿಸಲಾಗುತ್ತಿದೆ. ಇಲಾಖೆ ಕೆಲಸಗಳ ಜೊತೆ ಇತರೆ ಕೆಲಸ ಮಾಡಬೇಕಾಗುವುದರಿಂದ ಹೆಚ್ಚಿನ ಜವಾಬ್ದಾರಿ ಇದೆ–ಸುಜಾತ ಆರ್.ಬೀಳಗಿ, ಅಂಗನವಾಡಿ ಮೇಲ್ವಿಚಾರಕಿ ಗುಳೇದಗುಡ್ಡ
ಮೂಲಸೌಲಭ್ಯಗಳ ಕೊರತೆ ಇದ್ದು ಅಂಗನವಾಡಿ ಕಾರ್ಯಕರ್ತರನ್ನು ಇತರೆ ಕೆಲಸಗಳಲ್ಲಿ ತೊಡಗಿಸದೇ ಕಲಿಸಲು ಸೀಮಿತಗೊಳಿಸಬೇಕು–ರಫೀಕ್ ಕಲಬುರ್ಗಿ, ಪುರಸಭೆ ಸದಸ್ಯ ಗುಳೇದಗುಡ್ಡ
ಕೆಲಸಕ್ಕಿಂತ ಬೇರೆ ಚಟುವಟಿಕೆಗಳೇ ಹೆಚ್ಚು; ಸರಿಯಾಗಿ ನಡೆಯದ ಪಾಠ ಚಟುವಟಿಕೆಗಳು
ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣ ಹಂತವಾಗಿರುವ ಈ ಅಂಗನವಾಡಿಗಳಲ್ಲಿ ಉತ್ತಮ ಚಟುವಟಿಕೆ ಮೂಲಕ ಕಲಿತು ಒಂದನೇ ತರಗತಿಗೆ ಸೇರುವ ಅವಕಾಶ ಇಲ್ಲಿದೆ. ಆರು ತಿಂಗಳಿಂದ ಆರು ವರ್ಷದವರೆಗೆ ಮಕ್ಕಳನ್ನು ಇಲ್ಲಿ ನೋಡಿಕೊಳ್ಳಲಾಗುತ್ತಿದೆ. ಆದರೆ ಇಲ್ಲಿನ ವ್ಯವಸ್ಥೆ ಬೇರೆದ್ದಾಗಿದೆ. ಕಲಿಸುವುದಕ್ಕಿಂತ ಬೇರೆ ಕೆಲಸಕ್ಕೆ ಸರ್ಕಾರ ಇವರನ್ನು ಬಳಸಿಕೊಳ್ಳುತ್ತಿದೆ.
ಪೊಲಿಯೋ ಲಸಿಕೆ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಣೆ ಸುಕನ್ಯಾ ಸಮೃದ್ಧಿ ಸೇರಿದಂತೆ ಹಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಆಗಾಗ ಸರ್ಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ಹಮ್ಮಿಕೊಳ್ಳುವ ಸಮಾವೇಶಗಳಲ್ಲಿ ಭಾಗವಹಿಸಬೇಕು. ಕಲಿಸುವುದಕ್ಕಿಂತ ಬೇರೆ ಚಟುವಟಿಕೆಗಳೇ ಹೆಚ್ಚಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.