
ಜಮಖಂಡಿ: ಸಮೀಪದ ಬಂಡಿಗಣಿ ಬಸವಗೋಪಾಲ ನೀಲಮಾಣಿಕ ಮಠದ ಅದಾನೇಶ್ವರ ಸ್ವಾಮೀಜಿ (76) ಶುಕ್ರವಾರ ಬೆಳಗಾವಿಯ ಆಸ್ಪತ್ರೆಯಲ್ಲಿ ನಿಧನರಾದರು. ವಿಷಯ ತಿಳಿದ ಕೂಡಲೇ ಭಾರಿ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಬಂದು, ಶೋಕ ವ್ಯಕ್ತಪಡಿಸಿದರು. ಶನಿವಾರ ನಸುಕಿನ 5 ರಿಂದ ಸಂಜೆ 4ರವರೆಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ನಂತರ ಮಠದ ಆವರಣದಲ್ಲೇ ಅಂತ್ಯಕ್ರಿಯೆ ನೆರವೇರಲಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಸವದಿ ಗ್ರಾಮದ ಸ್ವಾಮೀಜಿ 18ನೇ ವಯಸ್ಸಿನಲ್ಲಿ ಬಂಡಿಗಣಿಗೆ ಬಂದು, ಬಸವೇಶ್ವರ ಪೂಜೆ ಮಾಡುತ್ತಾ ಇಲ್ಲಿಯೇ ನೆಲೆಸಿದರು. ಪಂಢರಪೂರ ವಿಠ್ಠಲನ ದೇವಸ್ಥಾನ, ತಿರುಪತಿ ದೇವಸ್ಥಾನ, ಶ್ರೀಶೈಲ ಮಲ್ಲಿಕಾರ್ಜುನ, ಕೊಲ್ಲಾಪೂರ ಮಹಾಲಕ್ಷ್ಮೀ, ಚಿಂಚಲಿ ಮಾಯಕ್ಕ, ಕೊಣ್ಣೂರ ಕರಿಸಿದ್ದ ಸೇರಿದಂತೆ ರಾಜ್ಯ ಹಾಗೂ ಅಂತರಾಜ್ಯದ ಪ್ರಮುಖ ಸ್ಥಳಗಳಲ್ಲಿ ಅನ್ನಪ್ರಸಾದ ಮಾಡುತ್ತಾ ಅನ್ನದಾನೇಶ್ವರ ಎಂಬ ಬಿರುದು ಪಡೆದರು. ಅವರಿಗೆ ಎಲ್ಲಾ ಜಾತಿ, ಧರ್ಮಗಳ ಭಕ್ತರು ಇದ್ದರು.
ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ತ್ರಿವಿಧ ದಾಸೋಹ ಪ್ರಶಸ್ತಿ, ಆಪತ್ಭಾಂದವ ಪ್ರಶಸ್ತಿ, ದಾಸೋಹರತ್ನ ಪ್ರಶಸ್ತಿ, ಪರಮದಾಸೋಹಿ, ದಾಸೋಹ ಸಿರಿ, ಕಲಿಯುಗದ ಪರಶುರಾಮ ಸೇರಿ ನಾಡಿನ ಮಠಮಾನ್ಯಗಳು, ಸಂಘಸಂಸ್ಥೆಗಳ ಪ್ರಶಸ್ತಿಗಳು ಅವರಿಗೆ ಸಂದಿವೆ. ಪ್ರತಿ ವರ್ಷ ನೂರಾರು ಸಾಮೂಹಿಕ ವಿವಾಹ, ಜೋಗಮ್ಮಗಳಿಗೆ ಅಡಗಲಿ ತುಂಬುವುದು, ಬಾಣಂತಿಯರಿಗೆ ಸೀಮಂತ ಕಾರ್ಯಕ್ರಮ, ಪಾರಾಯಣ ಮತ್ತು ವಸ್ತ್ರದಾನ, ಸಾವಿರಾರು ಮುತ್ತೈದೆಯರಿಗೆ ಉಡಿ ತುಂಬುವದು ಮುಂತಾದ ಕಾರ್ಯಕ್ರಮ ಮಾಡುತ್ತಿದ್ದರು.
ಬೆಳಗಾವಿ ಜಿಲ್ಲೆಯ ಪರಮಾನಂದವಾಡಿ ಹಾಗೂ ದುರದುಂಡಿ ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿದ್ದು ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತ್ತಾರೆ. ಮಠದಲ್ಲಿ ದೇಶಿ ತಳಿಯ 500ಕ್ಕೂ ಅಧಿಕ ಆಕಳಿನ ಗೋಶಾಲೆ, 500 ಕುರಿ, 300 ಆಡು ಹಾಗೂ ದ್ರಾಕ್ಷಿ, ಕಬ್ಬು, ಟೆಂಗು ಸೇರಿ ನೂರಾರು ಎಕರೆ ಜಮೀನಿದೆ.
ಶಾಸಕ ಸಿದ್ದು ಸವದಿ ಮಾತನಾಡಿ, ‘ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ. ಅವರಿಗೆ ಯಾವುದೇ ತೊಂದರೆ ಅಗದಿರಲಿಯೆಂದು ಅಗತ್ಯ ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. ಊಟ, ನೀರು ಸೇರಿ ಇತರ ವ್ಯವಸ್ಥೆ ಮಾಡಲಾಗಿದೆ. ಸ್ವಾಮೀಜಿಯವರ ನೆನಪಿನಲ್ಲಿ ದೇವಾಲಯ ನಿರ್ಮಿಸಲಾಗುವುದು’ ಎಂದರು.
‘ಅಹಿತಕರ ಘಟನೆ ಆಗದಿರಲಿಯೆಂದು ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 8 ಮಂದಿ ಡಿವೈಎಸ್ಪಿ, 26 ಸಿಪಿಐ, 60ಕ್ಕೂ ಹೆಚ್ಚು ಪಿಎಸ್‌ಐ ಮತ್ತು ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.