ಬಾಗಲಕೋಟೆ: ಸಮಾಜ ಮುಖ್ಯವೇ ಹೊರತು, ಟ್ರಸ್ಟ್ ಮುಖ್ಯವಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಬಾನುವಾರ ಕೆರೂಡಿ ಆಸ್ಪತ್ರೆಯಲ್ಲಿ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿ ಅವರು ಮುಗ್ಧ ಜೀವಿ. ಅವರು ಒಂದೆಡೆ ನಿಲ್ಲುವವರಲ್ಲ. ಅವರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಶೀಘ್ರದಲ್ಲಿ ಸಮಾಜದ ಮುಖಂಡರ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಭೆಗೆ ಎಲ್ಲರಿಗೂ ಮುಕ್ತ ಆಹ್ವಾನ ಇರುತ್ತದೆ ಎಂದರು.
ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸಮಾಜ ಹಾಗೂ ಸ್ವಾಮೀಜಿಗಳ ಹೋರಾಟಕ್ಕೆ ಮಣಿದು ಸರ್ಕಾರ 2ಸಿ, 2ಡಿ ಮೀಸಲಾತಿ ನೀಡಿತ್ತು. ಹೋರಾಟ ಸಂದರ್ಭದಲ್ಲಿ ನಮ್ಮೊಂದಿಗಿದ್ದ ಕಾಂಗ್ರೆಸ್ ಮುಖಂಡರು, ಕಾಂಗ್ರೆಸ್ ಸರ್ಕಾರ ರಚನೆ ನಂತರ ನಮ್ಮೊಂದಿಗೆ ನಿಲ್ಲಲಿಲ್ಲ. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮೀಸಲಾತಿ ಹಕ್ಕೊತ್ತಾಯಕ್ಕಾಗಿ ಮಾಡುತ್ತಿದ್ದ ಸ್ವಾಮೀಜಿ ಹಾಗೂ ನಮ್ಮ ಮೇಲೆ ಲಾಠಿ ಚಾರ್ಚ್ ಮಾಡಲಾಯಿತು ಎಂದು ಹೇಳಿದರು.
ಸ್ವಾಮೀಜಿ ಎಂದೂ ಮಠದ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಬಸವಣ್ಣ ಹೇಳಿದಂತೆ ನಡೆಯುತ್ತಾ ರಾಜ್ಯದೆಲ್ಲೆಡೆ ಸಂಚರಿಸಿ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮಠದಲ್ಲಿ ಅವ್ಯವಹಾರ ಆಗಿದೆ ಎಂಬ ಹೇಳಿಕೆ ತಪ್ಪು. ಇದನ್ನು ಸಮಾಜ ವಿರೋಧಿಸುತ್ತದೆ ಎಂದರು.
ಮಾಜಿ ಶಾಸಕ ಶಿವಶಂಕರ ಎಚ್ ಮಾತನಾಡಿ, ಹಿಂದೆಯೂ ಈ ರೀತಿಯ ಗೊಂದಲವಾದಾಗ ಇಬ್ಬರೊಂದಿಗೆ ಮಾತನಾಡಿ ಸಮಸ್ಯೆ ತಿಳಿಗೊಳಿಸಲಾಗಿತ್ತು ಸ್ವಾಮೀಜಿ ಯಾರ ಕಪಿಮುಷ್ಟಿಯಲ್ಲಿ ಇಲ್ಲ. ಯಾವ ಪಕ್ಷದ ಏಜೆಂಟರೂ ಅಲ್ಲ. ವೈಯಕ್ತಿಕ ಹೇಳಿಕೆಗಳಿಂದ ಗೊಂದಲವಾಗಿದ್ದು, ಎಲ್ಲವನ್ನೂ ಸರಿಪಡಿಸುತ್ತೇವೆ. ಸ್ವಾಮೀಜಿಗಳಿಗೆ ಮೌನವಾಗಿರುವಂತೆ ತಿಳಿಸಿದ್ದೇವೆ. ಶೀಘ್ರ ಸಮಸ್ಯೆ ಬಗೆಹರಿದು ಸಮಾಜದ ಒಗ್ಗಟ್ಟು ತೋರಿಸುತ್ತೇವೆ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.