ADVERTISEMENT

ಆರು ತಿಂಗಳಲ್ಲಿ ಮತ್ತೆ ವಿಧಾನಸಭೆ ಚುನಾವಣೆ: ಮುರುಗೇಶ ನಿರಾಣಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 15:54 IST
Last Updated 21 ಜುಲೈ 2024, 15:54 IST
ಬಾಗಲಕೋಟೆಯಲ್ಲಿ ಭಾನುವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಹಣಮಂತ ನಿರಾಣಿ, ವೀರಣ್ಣ ಚರಂತಿಮಠ, ನಾರಾಯಣ ಭಾಂಡಗೆ, ಶಾಂತಗೌಡ ಪಾಟೀಲ, ಮುರುಗೇಶ ನಿರಾಣಿ ಪಾಲ್ಗೊಂಡಿದ್ದಾರೆ
ಬಾಗಲಕೋಟೆಯಲ್ಲಿ ಭಾನುವಾರ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಹಣಮಂತ ನಿರಾಣಿ, ವೀರಣ್ಣ ಚರಂತಿಮಠ, ನಾರಾಯಣ ಭಾಂಡಗೆ, ಶಾಂತಗೌಡ ಪಾಟೀಲ, ಮುರುಗೇಶ ನಿರಾಣಿ ಪಾಲ್ಗೊಂಡಿದ್ದಾರೆ   

ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದ ಅವಧಿ ಪೂರ್ಣಗೊಳಿಸುವುದಿಲ್ಲ. ಮುಂದಿನ‌ ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.

ನವನಗರದಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಭಾನುವಾರ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಈಗಲೇ ಚುನಾವಣೆ ನಡೆದರೂ ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಮುಡಾ, ವಾಲ್ಮೀಕಿ ನಿಗಮ ಹಗರಣ ಸೇರಿ ಅನೇಕ ಹಗರಣಗಳು ಕಾಂಗ್ರೆಸ್‌ ಸರ್ಕಾರದಲ್ಲಿ ನಡೆದಿವೆ ಎಂದು ಆರೋಪಿಸಿದರು.

‘ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ ಸೈಟ್‌ ಪಡೆದು ಹಗರಣ ಮಾಡಿದ್ದಾರೆ. ರಾಜ್ಯದಲ್ಲಿ ಈಗಲೂ ಬಿಜೆಪಿ ಸರ್ಕಾರದ ಕಾಮಗಾರಿಗಳೇ ನಡೆದಿವೆ. ಹೊಸದಾಗಿ ಯಾವುದೇ ಕೆಲಸಗಳು ಆರಂಭವಾಗಿಲ್ಲ’ ಎಂದು ಟೀಕಿಸಿದರು.

ADVERTISEMENT

ಮಾಜಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ‘ಮುಂಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕಾರ್ಯಕರ್ತರು ತಯಾರಾಗಬೇಕು. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ನೀವು ನಮ್ಮನ್ನು ಗೆಲ್ಲಿಸುತ್ತೀರಿ. ಸ್ಥಳೀಯ ಸಂಸ್ಥೆಗಳಲ್ಲಿ ನಿಮ್ಮನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ’ ಎಂದರು.

‘15 ತಿಂಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒಂದೇ ಒಂದು ರೂಪಾಯಿ ಬಂದಿಲ್ಲ. ಅಭಿವೃದ್ಧಿಯ ಹಣ ಗ್ಯಾರಂಟಿಗೆ ಬಳಿಕೆಯಾಗುತ್ತಿದೆ. ಅಭಿವೃದ್ಧಿ ನಡೆಯದಿರುವುದನ್ನು ಕಾರ್ಯಕರ್ತರು ಮನೆ ಮನೆಗೆ ತಿಳಿಸಬೇಕು’ ಎಂದು ಹೇಳಿದರು.

‘ಕಾಂಗ್ರೆಸ್ ಶಾಸಕರು ಅನುದಾನ ಕೊಡದಿದ್ದರೆ ಚುನಾವಣೆಗೆ ಹೋಗುವುದು ಹೇಗೆ ಅಂತಿದ್ದಾರೆ. ಬೇರೆಯವರ ಮೇಲೆ ಕಮಿಷನ್ ಆರೋಪ ಮಾಡುತ್ತಿದ್ದರು. ಈಗ ಸರ್ಕಾರದಲ್ಲಿ ಮಾಡುತ್ತಿರುವುದು ಏನು? ನಿಗಮದ ಹಣ ಹೊಡೆದು, ತೆಲಂಗಾಣ ಹಾಗೂ ಬೇರೆ ರಾಜ್ಯಗಳ ಚುನಾವಣೆ ಮಾಡಿದ್ದಾರೆ’ ಎಂದು ಆರೋಪಿಸಿದರು.

ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ, ವಿಧಾನ ಪರಿಷತ್‌ ಸದಸ್ಯರಾದ ಹಣಮಂತ ನಿರಾಣಿ, ಪಿ.ಎಚ್‌. ಪೂಜಾರ, ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಜಿಲ್ಲಾ ಉಸ್ತುವಾರಿ ಎ.ಎಸ್‌. ಪಾಟೀಲ ನಡಹಳ್ಳಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಬೆಳಗಾವಿ ವಿಭಾಗದ ಸಹ ಪ್ರಭಾರಿ ಬಸವರಾಜ ಯಂಕಂಚಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.