ADVERTISEMENT

ಮತಾಂತರ ಆರೋಪ: ಪ್ರಾರ್ಥನಾ ಸ್ಥಳಕ್ಕೆ ನುಗ್ಗಿ ಹಲ್ಲೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 12:42 IST
Last Updated 3 ನವೆಂಬರ್ 2019, 12:42 IST
ಬಾಗಲಕೋಟೆಯ ನವನಗರದಲ್ಲಿ ಭಾನುವಾರ ಪ್ರಾರ್ಥನಾ ಸ್ಥಳಕ್ಕೆ ಗುಂಪೊಂದು ತೆರಳಿದ್ದ ವೇಳೆ ಕಂಡುಬಂದ ನೋಟ
ಬಾಗಲಕೋಟೆಯ ನವನಗರದಲ್ಲಿ ಭಾನುವಾರ ಪ್ರಾರ್ಥನಾ ಸ್ಥಳಕ್ಕೆ ಗುಂಪೊಂದು ತೆರಳಿದ್ದ ವೇಳೆ ಕಂಡುಬಂದ ನೋಟ   

ಬಾಗಲಕೋಟೆ: ಲಂಬಾಣಿ ಸಮುದಾಯದ ಮಹಿಳೆಯರನ್ನು ಮತಾಂತರ ಮಾಡಲಾಗುತ್ತಿದೆ ಎಂದುಆರೋಪಿಸಿ ಭಾನುವಾರ ಇಲ್ಲಿನಪ್ರಾರ್ಥನಾಸ್ಥಳಕ್ಕೆ ಗುಂಪೊಂದು ನುಗ್ಗಿ ದಾಂದಲೆ ನಡೆಸಿದೆ.

ಇಲ್ಲಿನ ನವನಗರದ ಸೆಕ್ಟರ್‌ ನಂ 31ರ ಮಾರುಕಟ್ಟೆ ಪ್ರದೇಶದ ಕಟ್ಟಡದಲ್ಲಿ ಪ್ರಾರ್ಥನೆ ಆಯೋಜಿಸಲಾಗಿತ್ತು. ಅಲ್ಲಿಗೆ ಬಂಜಾರ ಗೋರಕ್ಷಣಾ ಸಂಘಟನೆ ಸದಸ್ಯರು ಎಂದು ಹೇಳಿಕೊಂಡ ಗುಂಪೊಂದು ತೆರಳಿತ್ತು. ಪ್ರಾರ್ಥನೆ ಆಯೋಜಿಸಿದ್ದರು ಎಂದು ಆರೋಪಿಸಿ ತುಕಾರಾಮ್ ಚೌಹಾಣ ಎಂಬುವವರ ಮೇಲೆ ಹಲ್ಲೆ ನಡೆಸಿದೆ.

ದಿಢೀರ್ ನಡೆದ ಘಟನೆಯಿಂದಾಗಿ ಅಲ್ಲಿದ್ದ ಮಹಿಳೆಯರು ಆತಂಕಕ್ಕೀಡಾದರು. ಕ್ಯಾಮೆರಾಗಳ ಕಂಡು ದುಪ್ಪಟ್ಟಾಗಳಿಂದ ಮುಖ ಮುಚ್ಚಿಕೊಂಡರು. ವಿಷಯ ತಿಳಿದುಸ್ಥಳಕ್ಕೆ ಬಂದ ನವನಗರ ಠಾಣೆ ಪೊಲೀಸರು, ಅಲ್ಲಿದ್ದ ಎಲ್ಲರನ್ನೂ ಮನೆಗೆ ಕಳುಹಿಸಿದರು.

ADVERTISEMENT

‘ನನಗೇನೂ ಗೊತ್ತಿದ್ದಿಲ್ರಿ. ನನಗೆ ಸಮಸ್ಯೆ ಇತ್ತು. ನನ್ನ ಗಂಡನ ಸಲುವಾಗಿ ಪ್ರಾರ್ಥನೆ ಮಾಡಿದರೆ ಸಮಾಧಾನ, ಶಾಂತಿ ಸಿಗುತ್ತೆ ಎಂದು ಹೇಳಿದ್ದರು. ಹಾಗಾಗಿ ಹೋದ ವಾರದಿಂದಷ್ಟೇ ಇಲ್ಲಿಗೆ ಬರಲು ಆರಂಭಿಸಿದ್ದೆ’ ಎಂದು ಮಹಿಳೆಯೊಬ್ಬರು ಪ್ರತಿಕ್ರಿಯಿಸಿದರು.

‘ಸಂತ ಸೇವಾಲಾಲ ಸ್ವಾಮೀಜಿ ಆಶೀರ್ವಾದದಿಂದ ನಾವು (ಬಂಜಾರರು) ಬದುಕಿದ್ದೇವೆ. ಆದರೆಆರ್ಥಿಕವಾಗಿ ತೊಂದರೆ ಇರುವ ಅಮಾಯಕರನ್ನು ಕರೆತಂದು ಪ್ರಾರ್ಥನೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಮತಾಂತರ ಮಾಡಲಾಗುತ್ತಿದೆ. ಈ ಬಗ್ಗೆ ಸಮಾಜದಿಂದಲೂ ದೂರು ಕೊಡಲಾಗುವುದು’ ಎಂದು ಸ್ಥಳದಲ್ಲಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯಬಿಜೆಪಿಯ ಹೂವಪ್ಪ ರಾಠೋಢ ಹೇಳಿದರು.

‘ಪ್ರಾರ್ಥನೆ ನಡೆಯುತ್ತಿದ್ದ ಸ್ಥಳಕ್ಕೆ ಗುಂಪು ನುಗ್ಗಿ ದಾಂದಲೆ ಮಾಡಿದೆ. ಹೀಗೆ ಕಾನೂನು ಕೈಗೆತ್ತಿಕೊಂಡು ಹಲ್ಲೆ ನಡೆಸಿದರೆ ಸಹಿಸೊಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದೇವೆ. ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ’ ಎಂದು ಎಸ್‍ಪಿ ಲೋಕೇಶ ಜಗಲಾಸರ್ ತಿಳಿಸಿದರು.

ಹಲ್ಲೇಗೀಡಾದ ತುಕಾರಾಮ್ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಎಂದು ಹೇಳಲಾಗಿತ್ತು. ಅದನ್ನು ಎಸ್ಪಿ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.