ADVERTISEMENT

ರೈಲು ನಿಲ್ದಾಣದಲ್ಲಿ ಕುಸಿದಿದ್ದ ವಿಲಿಯಮ್ಸ್!

ಕಡಿಮೆ ರಕ್ತದೊತ್ತಡ; ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದ ವಿಜಯಪುರ ಪೊಲೀಸರು

ವೆಂಕಟೇಶ್ ಜಿ.ಎಚ್
Published 21 ನವೆಂಬರ್ 2019, 19:45 IST
Last Updated 21 ನವೆಂಬರ್ 2019, 19:45 IST
   

ಬಾಗಲಕೋಟೆ:ಆಸ್ಟ್ರೇಲಿಯಾ ಪ್ರಜೆ ವಿಲಿಯಮ್ಸ್ ಕೈರನ್ ಜೇಮ್ಸ್ ಬಾದಾಮಿಗೆ ಬರುವ ಮುನ್ನ ವಿಜಯಪುರ ರೈಲು ನಿಲ್ದಾಣದಲ್ಲಿ ರಕ್ತದೊತ್ತಡ ಕಡಿಮೆಯಾಗಿ ಕುಸಿದುಬಿದ್ದಿದ್ದರು ಎಂಬ ಸಂಗತಿ ಕೆರೂರು ಠಾಣೆ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ನವೆಂಬರ್ 15ರಂದು ವಿಜಯಪುರ ರೈಲು ನಿಲ್ದಾಣದಲ್ಲಿ ತಲೆ ಸುತ್ತು ಬಂದು ಬಿದ್ದಿದ್ದರು. ವಿದೇಶಿ ವ್ಯಕ್ತಿ ಎಂಬ ಕಾರಣಕ್ಕೆ ಹೆಚ್ಚಿನ ಕಾಳಜಿ ವಹಿಸಿದ್ದ ರೈಲ್ವೆ ಪೊಲೀಸರು, ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಸ್ಥಳೀಯ ಪೊಲೀಸರ ಸುಪರ್ದಿಗೆ ವಹಿಸಿದ್ದರು.

ಚಿಕಿತ್ಸೆಯ ನಂತರ ಚೇತರಿಸಿಕೊಂಡುನವೆಂಬರ್ 17ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ವಿಲಿಯಮ್ಸ್, ಬಾದಾಮಿ ಪ್ರವಾಸ ಮುಗಿಸಿ ಇಲ್ಲಿಂದ ಗೋವಾಗೆ ತೆರಳುವುದಾಗಿ ಅಲ್ಲಿನ ಪೊಲೀಸರಿಗೆ ಪತ್ರ ಬರೆದುಕೊಟ್ಟಿದ್ದರು. ಅದೇ ದಿನ ವಿಜಯಪುರ–ಯಶವಂತಪುರ ರೈಲಿಗೆ ಹತ್ತಿಸಿ ವಿಜಯಪುರಪೊಲೀಸರೇ ಬಾದಾಮಿಗೆ ಕಳುಹಿಸಿಕೊಟ್ಟಿದ್ದರು.

ADVERTISEMENT

’ಭಾರತೀಯ ವೇದಾಂತದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ವಿಲಿಯಮ್ಸ್, ವೈದ್ಯರು ಚಿಕಿತ್ಸೆ ನೀಡುವ ವೇಳೆ ವೇದ–ಉಪನಿಷತ್ತಿನ ಸಾಲುಗಳನ್ನು ಉಲ್ಲೇಖ ಮಾಡುತ್ತಾರೆ. ಕರ್ನಾಟಕಕ್ಕೆ ಬರುವ ಮುನ್ನ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 10 ದಿನಗಳ ಕಾಲ ವಿಪಾಸನಾ ಧ್ಯಾನದ ತರಬೇತಿ ಪಡೆದುಬಂದಿದ್ದರು. ಯೋಗದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುತ್ತಿದ್ದರು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಗ್ರಾಮಸ್ಥರಿಗೆ ತೊಂದರೆ ಕೊಡಬೇಡಿ!

’ಕೊಂಕಣಕೊಪ್ಪ ಗ್ರಾಮಸ್ಥರು ಒಳ್ಳೆಯವರು. ಏನೊ ಆಕಸ್ಮಿಕವಾಗಿ ಗಲಾಟೆ ಆಗಿದೆ. ನನ್ನ ಕಾರಣಕ್ಕೆ ಅವರಿಗೆ ತೊಂದರೆ ಕೊಡಬೇಡಿ. ಜೈಲು, ಶಿಕ್ಷೆ ಏನೂ ಬೇಡ. ಅವರನ್ನು ಬಿಟ್ಟುಬಿಡಿ’ ಎಂದುಕುಮಾರೇಶ್ವರ ಆಸ್ಪತ್ರೆಯಲ್ಲಿ ತಮ್ಮ ಕಾವಲಿಗೆ ನಿಯೋಜಿಸಿರುವ ಪೊಲೀಸರಿಗೆ ವಿಲಿಯಮ್ಸ್ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ಅವರು, ಹಸಿರು ತರಕಾರಿ ಹಾಗೂ ಹಣ್ಣು ಮಾತ್ರ ಸೇವಿಸುತ್ತಿದ್ದಾರೆ. ತಮಗೆ ಏನಾದರೂ ಬೇಕಾದರೆ ಬರೆದುಕೊಡುತ್ತಿದ್ದಾರೆ.

ಮಾದಕ ವಸ್ತು ಸೇವಿಸಿಲ್ಲ?

’ವಿಲಿಯಮ್ಸ್ ರಕ್ತದ ಮಾದರಿ ಸಂಗ್ರಹಿಸಿ ತಪಾಸಣೆಗೊಳಪಡಿಸಿದ್ದು, ಕೊಂಕಣಕೊಪ್ಪದಲ್ಲಿ ನಡೆದ ಗಲಾಟೆಯ ವೇಳೆ ಮದ್ಯಪಾನ ಮಾಡಿರಲಿಲ್ಲ, ಮಾದಕ ವಸ್ತು ಸೇವಿಸಿರುವ ಬಗ್ಗೆಯೂ ಯಾವುದೇ ಪೂರಕ ಸಾಕ್ಷ್ಯ ದೊರೆತಿಲ್ಲ’ ಎಂದು ಮೂಲಗಳು ತಿಳಿಸಿವೆ.

ವಿಲಿಯಮ್ಸ್ಆಸ್ಟ್ರೇಲಿಯಾದ ನ್ಯೂಸೌತ್‌ವೇಲ್ಸ್‌ನ ಪಿಯರ್ಸನ್ ರಸ್ತೆಯ ನಿವಾಸಿ ಮಾರ್ಟಿನ್ ವಿಲಿಯಮ್ಸ್ ಹಾಗೂ ಡಯಾನ ದಂಪತಿ ಪುತ್ರ.

ಊರು ಖಾಲಿ ಖಾಲಿ:

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ 10 ಮಂದಿಯನ್ನು ಬಂಧಿಸುತ್ತಿದ್ದಂತೆಯೇ ಕೊಂಕಣಕೊಪ್ಪ ಗ್ರಾಮದಲ್ಲಿ ಹೆಚ್ಚಿನ ಪುರುಷರು ಊರು ತೊರೆದಿದ್ದಾರೆ. ಇಡೀ ಊರು ಖಾಲಿ ಖಾಲಿ ಅನ್ನಿಸುತ್ತಿದ್ದು, ಹಿರಿಯರು ಹಾಗೂ ಮಹಿಳೆಯರು ಮಾತ್ರ ಮನೆಯಲ್ಲಿ ಇದ್ದಾರೆ. ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ್ದ ವಿದ್ಯುನ್ಮಾನ ಮಾಧ್ಯಮದವರ ಮೇಲೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.