
ಬಾದಾಮಿ: ಬನಶಂಕರಿದೇವಿ ಜಾತ್ರೆ ಅಂಗವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಶ್ರಯದಲ್ಲಿ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಯಲ್ಲಿ ಜಾನುವಾರ ಖರೀದಿಗೆ ರೈತರು ಹಿಂದೇಟು ಹಾಕುತ್ತಿದ್ದಾರೆ.
ಪಶು ಸಂಗೋಪನೆ ಇಲಾಖೆಯ ಮಳಿಗೆಗಳು ಮತ್ತು ಎತ್ತುಗಳ ಅಲಂಕಾರಕ್ಕಾಗಿ ಅಂಗಡಿಗಳಲ್ಲಿ ರೈತರು ವ್ಯಾಪಾರ ವಹಿವಾಟು ನಡೆಸಿದರು.
‘ ಜಾತ್ರೆಯಲ್ಲಿ ಅಮೀನಗಡದ ಚಕ್ಕಡಿ ಮಾರಾಟ ಜೋರಾಗಿತ್ತು. ಒಂದು ಚಕ್ಕಡಿಗೆ ₹25 ಸಾವಿರದಿಂದ ₹30 ಸಾವಿರದವರೆಗೆ ಮಾರಾಟವಾಗುತ್ತವೆ’ ಎಂದು ಮಲ್ಲಪ್ಪ ಬಡಿಗೇರ ಹೇಳಿದರು.
‘ಈ ಸಲ ದನದ ಜ್ಯಾತ್ರ್ಯಾಗ ಕಡಿಮಿ ದನ ಬಂದಾವು. ಥಂಡಿ ಭಾಳ ಐತ್ರಿ, ಹಿಂಗಾಗಿ ರೈತರು ಎತ್ತು ಹೊಡಕೊಂಡು ಬಂದಿಲ್ಲ’ ಎಂದು ಯರಗೊಪ್ಪ ಎಸ್.ಬಿ. ಗ್ರಾಮದ ರೈತ ಶರಣಪ್ಪ ಹೇಳಿದರು.
‘ಜಾತ್ರಿಗ ಬಂದು ಎರಡು ಮೂರು ದಿನ ಆತು ವ್ಯಾಪಾರ ಇಲ್ಲ. ರೈತರ ಕೈಯ್ಯಾಗ ರೊಕ್ಕ ಇಲ್ಲ, ಎಲ್ಲಾರು ಟ್ರ್ಯಾಕ್ಟರ್ ಮಾಡ್ಯಾರ ಎತ್ತು ತೊಗೊಳ್ಳುವವರು ಕಡಿಮೆ ಆಗ್ಯಾರ ’ ಎಂದು ಬೂದಿಹಾಳ ಗ್ರಾಮದ ಚನ್ನಬಸಪ್ಪ ಪ್ರತಿಕ್ರಿಯಿಸಿದರು.
ಜಾತ್ರೆಯಲ್ಲಿ ಅಥಣಿ ತಾಲ್ಲೂಕಿನ ರೈತ ತಾನಾಜಿ ತೆಗೆದುಕೊಂಡು ಬಂದಿರುವ ಹೋರಿಗಳು ಆಕರ್ಷಕವಾಗಿದ್ದವು. ಹಾಲಲ್ಲಿ ಮತ್ತು ನಾಲ್ಕು ಹಲ್ಲಿನ ಹೋರಿಗಳನ್ನು ರೈತರು ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.