ಬಾದಾಮಿ: ಮಾರ್ಚ್ 1ರಂದು ಇಲ್ಲಿನ ನಡೆಯಲಿರುವ ತಾಲ್ಲೂಕು ಮಟ್ಟದಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಶಿಲಾಕಾಂತ ಪತ್ತಾರ ಆಯ್ಕೆಯಾಗಿದ್ದಾರೆ. ಅವರ ವ್ಯಕ್ತಿತ್ವ ಬದುಕು-ಬರಹದ ಚಾಲುಕ್ಯರ ಸ್ಮಾರಕಗಳಂತೆಯೇ ಶ್ರೀಮಂತವಾಗಿದೆ.
ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ 1947 ರಅ.7ರಂದು ಜನಿಸಿದ ಶಿಲಾಕಾಂತ ಪತ್ತಾರ, ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಿಜಯಪುರದಲ್ಲಿ ಪಡೆದರು. ಎಸ್ಸೆಸ್ಸೆಲ್ಸಿ ಓದುವಾಗಲೇ ಸಾಹಿತ್ಯದ ಆಸಕ್ತಿ ಹೊಂದಿದ್ದ ಪತ್ತಾರ, ಅನಾಥ ಬಾಲಕನೊಬ್ಬನ ಜೀವನ ಕಥೆ ಕುರಿತು ಆಗಲೇ 120 ಪುಟದ ‘ ದೂರವಿರಲಿಲ್ಲ ‘ ಎಂಬ ಕಾದಂಬರಿ ಬರೆದರು.
ಬಾಗಲಕೋಟೆ ಬಸವೇಶ್ವರ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದು ಬಾದಾಮಿ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಪ್ರೌಢ ಶಾಲೆಯಲ್ಲಿ 1968 ರಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿದರು. ಎಂ.ಎ. ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದು ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಇವರು, ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ಧಾರೆಯೆರೆದು ಅಚ್ಚುಮೆಚ್ಚಿನ ಗುರುಗಳಾದರು.
ಅಧ್ಯಾಪಕ ವೃತ್ತಿಯಲ್ಲಿದ್ದಾಗ ಕಾವ್ಯ, ಶಿಲ್ಪಕಲೆ, ಇತಿಹಾಸ, ಶಾಸನ, ಸಾಹಿತ್ಯ, ಜೀವನಚರಿತ್ರೆ, ಅನುವಾದ, ಸಂಪಾದನೆ, ಸಂಶೋಧನೆ ಹೀಗೆ ಸಾಹಿತ್ಯದ ವಿವಿಧ ಮಜಲುಗಳ ಶ್ರೀಮಂತಗೊಳಿಸಿದರು. ಸಂಶೋಧಕ ಡಾ. ಕೃಷ್ಣಕೊಲ್ಹಾರ ಕುಲಕರ್ಣಿ ಅವರು ಡಾ. ಎಸ್.ಐ. ಪತ್ತಾರ ಅವರಿಗೆ ಚಾಲುಕ್ಯರ ಸಾಂಸ್ಕೃತಿಕ ರಾಯಭಾರಿ ಎಂದು ‘ಕಲ್ಲೋಜ’ ಅಭಿನಂದನಾ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
1979ರಿಂದ ಇತಿಹಾಸ, ಸಂಶೋಧನೆ, ಕನ್ನಡ, ಇಂಗ್ಲಿಷ್ ಅನುವಾದ ಮತ್ತು ಸಂಪಾದನೆಯಲ್ಲಿ 25ಕ್ಕೂ ಅಧಿಕ ಕೃತಿಗಳು ಪ್ರಕಟವಾಗಿವೆ. ಮೊದಲ ಕೃತಿ ‘ ದಿ ಸಿಂಗಿಂಗ್ ರಾಕ್ಸ್ ಆಫ್ ಬಾದಾಮಿ’ ನಂತರದಲ್ಲಿ ಶಿಲ್ಪಕಾಶಿ, ಸಪ್ತಕ, ದಿ ವಿಸನ್ ಆಫ್ ಮೌನೇಶ್ವರ, ಡಾ.ಎಸ್.ರಾಧಾಕೃಷ್ಣ, ಕರ್ನಾಟಕ ಸಾಂಪ್ರದಾಯಿಕ ಶಿಲ್ಪಕಲೆ, ಬಾದಾಮಿ ಚಾಲುಕ್ಯರ ಶಿಲ್ಪಕಲೆ, ಬಾದಾಮಿ ಚಾಲುಕ್ಯರ ದೇವಾಲಯಗಳ ಅಲಂಕಾರ ಕೃತಿಗಳು ಮತ್ತು ಕೃಷ್ಣಪ್ರಭೆ, ಇದು ಸತ್ಯಾನ್ವೇಷಣೆ, ಶ್ರೀವಲ್ಲಭ, ಬಾದಾಮಿ ಚಾಲುಕ್ಯ ಸಂಪದ ಇವರ ಸಂಪಾದನೆಯ ಕೃತಿಗಳು.
‘ಬಾದಾಮಿ ಒಂದು ಸಾಂಸ್ಕೃತಿಕ ಅಧ್ಯಯನ’ ಸಂಶೋಧನಾ ಕೃತಿಗೆ ಇವರಿಗೆ 1999ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಡಿ.ಲಿಟ್ ನೀಡಿದೆ. ದೆಹಲಿಯಲ್ಲಿ ಶಿಕ್ಷಕ ಪುರಸ್ಕಾರ, ಪುರಾತತ್ವ ಪ್ರವೀಣ, ಡಾ. ಎಸ್.ರಾಧಾಕೃಷ್ಣನ್, ಫೆಲೋಶಿಪ್, ಇತಿಹಾಸ ಚೇತನ, ಉತ್ತಮ ಉಪನ್ಯಾಸಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜ್ಞಾನಶಿವ ಮತ್ತು ರಾಜಪುರೋಹಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇವರ ಸೇವೆ ಗುರುತಿಸಿ ವೀರಪುಲಿಕೇಶಿ ವಿದ್ಯಾಸಂಸ್ಥೆ ಮತ್ತು ಅಭಿಮಾನಿಗಳ ಬಳಗ ಸೇರಿ 2014 ರಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.