ADVERTISEMENT

ಬಾದಾಮಿ: ಕಾಲುವೆ ಆಧುನೀಕರಣ ಕಾಮಗಾರಿಗೆ ₹428 ಕೋಟಿ

ಶಾಸಕ ಭೀಮಸೇನ ಚಿಮ್ಮನಕಟ್ಟಿ ಕಾಲುವೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 2:46 IST
Last Updated 11 ಫೆಬ್ರುವರಿ 2026, 2:46 IST
ಬಾದಾಮಿ ಮತ್ತು ಗುಳೇದಗುಡ್ಡ ತಾಲ್ಲೂಕುಗಳಲ್ಲಿ ಮಲಪ್ರಭಾ ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಆರಂಭಿಸಲು ಶಾಸಕ ಭೀಮಸೇನನ ಚಿಮ್ಮನಕಟ್ಟಿ ಕಾಲುವೆ ವೀಕ್ಷಿಸಿದರು
ಬಾದಾಮಿ ಮತ್ತು ಗುಳೇದಗುಡ್ಡ ತಾಲ್ಲೂಕುಗಳಲ್ಲಿ ಮಲಪ್ರಭಾ ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಆರಂಭಿಸಲು ಶಾಸಕ ಭೀಮಸೇನನ ಚಿಮ್ಮನಕಟ್ಟಿ ಕಾಲುವೆ ವೀಕ್ಷಿಸಿದರು   

ಬಾದಾಮಿ: ಮಲಪ್ರಭಾ ಎಡದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಕೈಗೊಳ್ಳಲು ಶಾಸಕ ಭೀಮಸೇನ ಚಿಮ್ಮನಕಟ್ಟಿ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಕಾಲುವೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ತಾಲ್ಲೂಕಿನ ಮಲಪ್ರಭಾ ಎಡದಂಡೆ ಕಾಲುವೆಯ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಕಬ್ಬಲಗೇರಿ, ಆಡಗಲ್, ಚಿಕ್ಕಮುಚ್ಚಳಗುಡ್ಡ ಗ್ರಾಮಗಳ ಮುಖ್ಯ ಕಾಲುವೆ, ಹಂಚಿಕೆ ಮತ್ತು ಚಿಕ್ಕ ಕಾಲುವೆಗಳಿಗೆ ಭೇಟಿ ನೀಡಿದರು.

ತಾಲ್ಲೂಕಿನ ಕಬ್ಬಲಗೇರಿ ಗ್ರಾಮದಿಂದ 127ರ ಮುಖ್ಯ ಕಾಲುವೆಯಿಂದ ಗುಳೇದಗುಡ್ಡ ತಾಲ್ಲೂಕಿನ ಕೋಟೆಕಲ್ ಗ್ರಾಮದ 150ನೇ ಮುಖ್ಯ ಕಾಲುವೆ, ಹಂಚಿಕೆ ಕಾಲುವೆ ಮತ್ತು ಚಿಕ್ಕ ಕಾಲುವೆಗಳ ಆಧುನೀಕರಣಕ್ಕೆ ಸರ್ಕಾರದಿಂದ ₹428 ಕೋಟಿ ಅನುದಾನ ಮಂಜೂರಾಗಿದೆ. ಮೊದಲ ಹಂತದ ಕಾಮಗಾರಿಗೆ ₹121 ಕೋಟಿ ಮಂಜೂರಾಗಿದೆ ಎಂದು ತಿಳಿದಿದೆ.

ADVERTISEMENT

ನವಿಲುತೀರ್ಥ ಜಲಾಶಯದಿಂದ ಬಾದಾಮಿ ಮತ್ತು ಗುಳೇದಗುಡ್ಡ ತಾಲ್ಲೂಕುಗಳ ರೈತರ ಜಮೀನಿಗೆ ನೀರು ಹರಿದು ಬರಲು 1980 ರಲ್ಲಿಯೇ ಕಾಲುವೆ ಮಾಡಲಾಗಿತ್ತು. ಕಾಲುವೆಗಳು ಒಡೆದು ದುರಸ್ತಿ ಹಂತದಲ್ಲಿದ್ದು ರೈತರ ಹೊಲಗಳಿಗೆ ನೀರು ಬಾರದಂತಾಗಿತ್ತು. ನಾಲ್ಕು ದಶಕಗಳ ನಂತರ ರೈತರಿಗೆ ನೀರಾವರಿಯ ಭಾಗ್ಯದ ಬಾಗಿಲು ತೆರೆದಂತಾಗಿದೆ.

‘ಕಾಲುವೆಗಳು ಆಧುನೀಕರಣವಾದರೆ ರೈತರ ಹೊಲಗಳಿಗೆ ನೀರು ಬರುವುದು. ಕಾಮಗಾರಿ ಅನುದಾನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನೀರಾವರಿ ಸಚಿವರಿಗೆ ಒತ್ತಾಯಿಸಲಾಗಿತ್ತು. ಸರ್ಕಾರದಿಂದ ಅನುದಾನ ಮಂಜೂರಾಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಭಾಕರ, ಸಹಾಯಕ ಎಂಜಿನಿಯರ್ ರಾಜು ಬಿಸನಾಳ ಮತ್ತು ವಿಜಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.