ADVERTISEMENT

ಬಾದಾಮಿ: ವಸತಿ ಗೃಹ ಅಕ್ರಮ ಚಟುವಟಿಕೆಗಳ ತಾಣ

ನೂತನವಾಗಿ ತರಕಾರಿ ಮಾರುಕಟ್ಟೆ ನಿರ್ಮಿಸಲು ಸಾರ್ವಜನಿಕರ ಆಗ್ರಹ

ಎಸ್.ಎಂ.ಹಿರೇಮಠ
Published 11 ಫೆಬ್ರುವರಿ 2026, 2:47 IST
Last Updated 11 ಫೆಬ್ರುವರಿ 2026, 2:47 IST
ಬಾದಾಮಿ ಸರ್ಕಾರಿ ಆಸ್ಪತ್ರೆಯ ಸಮೀಪ ಅಕ್ರಮ ಚಟುವಟಿಕೆಗಳ ತಾಣವಾಗಿರುವ ಸಬ್ ಜೈಲ್ ಪೊಲೀಸ್ ಸಿಬ್ಬಂದಿ ವಸತಿ ಗೃಹಗಳು.
ಬಾದಾಮಿ ಸರ್ಕಾರಿ ಆಸ್ಪತ್ರೆಯ ಸಮೀಪ ಅಕ್ರಮ ಚಟುವಟಿಕೆಗಳ ತಾಣವಾಗಿರುವ ಸಬ್ ಜೈಲ್ ಪೊಲೀಸ್ ಸಿಬ್ಬಂದಿ ವಸತಿ ಗೃಹಗಳು.   

ಬಾದಾಮಿ: ‘ಪಟ್ಟಣದ ಸರ್ಕಾರಿ ಆಸ್ಪತ್ರೆಯ ಹಿಂದೆ ಇರುವ ಸಬ್ ಜೈಲ್ ಪೊಲೀಸ್ ಸಿಬ್ಬಂದಿ ವಸತಿ ಗೃಹಗಳು ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಇಲ್ಲಿ ನೂತನವಾಗಿ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪೊಲೀಸ್ ಇಲಾಖೆಯ ಜೊತೆಗೆ ಇಲ್ಲಿಯೇ ಸಬ್ ಜೈಲ್ ಇಲಾಖೆ ಇತ್ತು. ಸಬ್ ಜೈಲ್ ಸಿಬ್ಬಂದಿಯ ವಸತಿಗೆ ಎರಡು ಎಕರೆ ನಿವೇಶನದಲ್ಲಿ 12 ಮನೆಗಳನ್ನು ನಿರ್ಮಿಸಲಾಗಿತ್ತು. ಸಬ್ ಜೈಲ್ ಪೊಲೀಸ್ ಸಿಬ್ಬಂದಿ ಇಲ್ಲಿಯೇ ವಾಸವಾಗಿದ್ದರು.

ಪೊಲೀಸ್ ಇಲಾಖೆಯ ಹಳೇ ಕಟ್ಟಡವನ್ನು ತೆರವು ಮಾಡಿದ್ದರಿಂದ ಸಬ್ ಜೈಲ್ ನ್ನು ಜಿಲ್ಲಾ ಸ್ಥಳ ಬಾಗಲಕೋಟೆಗೆ ಸ್ಥಳಾಂತರಿಸಲಾಯಿತು. ಸಿಬ್ಬಂದಿ ಕೂಡ ಬಾಗಲಕೋಟೆಗೆ ತೆರಳಿದರು. ಇಲ್ಲಿನ ವಸತಿ ಗೃಹಗಳು ಖಾಲಿಯಾದವು. ಮನೆಗಳೆಲ್ಲ ಶಿಥಿಲಗೊಂಡವು.

ADVERTISEMENT

ಖಾಲಿಯಾಗಿರುವ ಸಬ್ ಜೈಲ್ ಸಿಬ್ಬಂದಿ ವಸತಿ ಗೃಹಗಳಲ್ಲಿ ಸಂಜೆಯಾಗುತ್ತಿದ್ದಂತೆ ಜೂಜಾಟ, ಕುಡುಕರ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಈಚೆಗೆ ಪರಸ್ಥಳದ ವ್ಯಕ್ತಿಯೊಬ್ಬ ಇದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸ್ಮರಿಸಬಹುದು.

‘ಮ್ಯೂಸಿಯಂ ರಸ್ತೆಯಲ್ಲಿ ತರಕಾರಿ ಮತ್ತು ಹಣ್ಣು ಮಾರಾಟದಿಂದ ಪ್ರವಾಸಿಗರ ವಾಹನಗಳು ಸಂಚರಿಸಲು ತೊಂದರೆಯಾಗಿದೆ. ಖಾಲಿ ಇರುವ ಸಬ್ ಜೈಲ್ ನಿವೇಶನದಲ್ಲಿ ತರಕಾರಿ ಮಾರುಟ್ಟೆಯನ್ನು ನಿರ್ಮಿಸಿ ’ ಎಂದು ಮತಕ್ಷೇತ್ರದ ಶಾಸಕರಿದ್ದಾಗ ಸಿದ್ದರಾಮಯ್ಯ ಅವರಿಗೆ 2019 ರಲ್ಲಿ ಸ್ಥಳೀಯ ಅಭಿವೃದ್ಧಿ ಹೋರಾಟ ಸಮಿತಿಯು ಮನವಿ ಸಲ್ಲಿಸಿದ್ದನ್ನು ಸ್ಮರಿಸಬಹುದು.

ನೂತನ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಸದರಿ ನಿವೇಶನವನ್ನು ಪುರಸಭೆ ಹಸ್ತಾಂತರಿಸಲು ಅಂದಿನ ಶಾಸಕ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಸ್ತಾವನೆಯನ್ನು ಹಿಂದಿನ ಸರ್ಕಾರದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮಂಜೂರಾತಿಗೆ 2020ರ ಜೂನ್‌  6 ರಂದು ಪತ್ರವನ್ನು ಬರೆದಿದ್ದರು.

‘ಸಬ್ ಜೈಲ್ ನಿವೇಶನದ ಹಸ್ತಾಂತರ ಕುರಿತು ರಾಜ್ಯ ಗೃಹ ಇಲಾಖೆಯಿಂದ ಯಾವುದೇ ಪತ್ರ ಪುರಸಭೆಗೆ ಬಂದಿಲ್ಲ. ನೂತನ ತರಕಾರಿ ಮಾರುಕಟ್ಟೆ ನಿರ್ಮಿಸುವ ಯೋಜನೆ ಇದೆ ’ ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಎಂ. ಡಾಂಗೆ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಈಗ ಮುಖ್ಯಮಂತ್ರಿಯಾಗಿದ್ದಾರೆ. ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಒತ್ತಾಯಿಸಿ ಮ್ಯೂಸಿಯಂ ರಸ್ತೆಯಲ್ಲಿ ಪ್ರವಾಸಿ ವಾಹನಗಳ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ನೂತನ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಬೇಕು ’ ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಇಷ್ಟಲಿಂಗ ನರೆಗಲ್ ಆಗ್ರಹಿಸಿದ್ದಾರೆ.

ಬಾದಾಮಿ ಮ್ಯುಜಿಯಂ ರಸ್ತೆಯಲ್ಲಿ ತರಕಾರಿ ಮತ್ತು ಹಣ್ಣಿನ ಅಂಗಡಿಗಳ ಮಾರುಕಟ್ಟೆಯಿಂದ ಪ್ರವಾಸಿ ವಾಹನಗಳ ಪಾದಚಾರಿಗಳ ಪರದಾಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.