ನಂದಗಾಂವ ಗ್ರಾಮದ ಆಸರೆ ಫ್ಲಾಟ್‌ನಲ್ಲಿ ಮನೆಯ ಹೊರಗೆ ಜಾನುವಾರುಗಳನ್ನು ಟ್ರ್ಯಾಕ್ಟರ್‌ಗೆ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಗ್ರಾಮಸ್ಥರು
ಮಹಾಲಿಂಗಪುರ: ಘಟಪ್ರಭಾ ನದಿ ಪ್ರವಾಹದಿಂದ ನಡುಗಡ್ಡೆಯಾಗಿರುವ ಹಳೆ ನಂದಗಾಂವ ಗ್ರಾಮದ 52 ಕುಟುಂಬಗಳ ಶಾಶ್ವತ ಸ್ಥಳಾಂತರದ ಬೇಡಿಕೆ ಮರೀಚಿಕೆಯಾಗಿದ್ದು, ಮನೆಗಳ ಹಂಚಿಕೆ ಗೊಂದಲಮಯವಾಗಿ ಪರಿಣಮಿಸಿದೆ.
ಗ್ರಾಮಸ್ಥರ ಶಾಶ್ವತ ಸ್ಥಳಾಂತರಕ್ಕಾಗಿ 1982ರಲ್ಲಿಯೇ ಹಕ್ಕು ಪತ್ರ ಹಾಗೂ 10 ಎಕರೆ ಭೂಮಿ ನೀಡಲಾಗಿದೆ. ಪ್ರತಿ ಮನೆಯ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಜಾಗೆ ಅಳತೆ ಮಾಡಲಾಗಿದೆ. ಅಲ್ಲದೆ ಗ್ರಾಮ ಪಂಚಾಯ್ತಿ ಪ್ರತಿ ವರ್ಷ ಇದಕ್ಕಾಗಿ ಭೂಬಾಡಿಗೆಯನ್ನು ಕೆಲ ಗ್ರಾಮಸ್ಥರಿಂದ ಪಡೆಯುತ್ತಿದೆ. ಸ್ಥಳಾಂತರಕ್ಕಾಗಿ ಹಕ್ಕು ಪತ್ರ ನೀಡಲಾಗಿದ್ದರೂ ಮನೆ ಯಾರಿಗೆ ಸೇರಬೇಕು ಎಂದು ಇಲ್ಲಿಯವರೆಗೂ ನಮೂದಿಸಿಲ್ಲ ಎಂಬ ವಿಚಾರ ಗ್ರಾಮಸ್ಥರಿಗೆ ಗೊಂದಲಕರವಾಗಿದೆ.
2009ರಲ್ಲಿ ನೆರೆ ಬಂದಾಗ ಇಲ್ಲಿಂದ ಎರಡು ಕಿ.ಮೀ. ದೂರದ ಹೊಸ ನಂದಗಾಂವ ಗ್ರಾಮದ ಎರಡು ಭಾಗಗಳಲ್ಲಿ 73 ಹಾಗೂ 45 ಮನೆಗಳನ್ನು ಹೊಂದಿರುವ ಆಸರೆ ಪ್ಲಾಟ್‌ಗಳನ್ನು ಸರ್ಕಾರ ನಿರ್ಮಾಣ ಮಾಡಿದೆ. ಅಲ್ಲದೆ, ಹಳೆ ನಂದಗಾಂವ ಗ್ರಾಮದಲ್ಲಿದ್ದ ಕುಟುಂಬಗಳ ಪಟ್ಟಿಯನ್ನೂ ಮಾಡಿದೆ. ಆದರೆ, ಹಳೆ ನಂದಗಾಂವ ಗ್ರಾಮದಲ್ಲೂ ಮನೆ ಇಟ್ಟುಕೊಂಡು ಆಸರೆ ಪ್ಲಾಟ್‍ನಲ್ಲೂ ಹಕ್ಕು ಪತ್ರವನ್ನು ಕೆಲ ಗ್ರಾಮಸ್ಥರು ಪಡೆದಿದ್ದಾರೆ. ಕೆಲ ಕುಟುಂಬಗಳು ಶಾಶ್ವತವಾಗಿ ಆಸರೆ ಪ್ಲಾಟ್‍ನಲ್ಲಿವೆ. ಇನ್ನೂ ಕೆಲ ಕುಟುಂಬಗಳು ನೆರೆ ಬಂದಾಗಲಷ್ಟೇ ಆಸರೆ ಪ್ಲಾಟ್‍ನಲ್ಲಿದ್ದು, ನೆರೆ ಇಳಿದ ನಂತರ ಪುನಃ ಹಳೆ ನಂದಗಾಂವ ಗ್ರಾಮದಲ್ಲಿ ನೆಲೆಸುತ್ತಾರೆ. ಹೀಗಾಗಿ ಶಾಶ್ವತ ಸ್ಥಳಾಂತರ ಎನ್ನುವುದು ಶಾಶ್ವತ ಪರಿಹಾರ ಆಗುತ್ತಿಲ್ಲ.
‘1982ರಲ್ಲಿ ಹಕ್ಕುಪತ್ರ ನೀಡಿದ್ದರೂ ಆಗಿನ ಹಾಗೂ ಈಗಿನ ಹಕ್ಕುಪತ್ರ ಯಾದಿ ಹೊಂದಿಕೆಯಾಗುತ್ತಿಲ್ಲ. ಹೀಗಾಗಿ, ಸಂಬಂಧಿಸಿದ ಅಧಿಕಾರಿಗಳು ಸರ್ವೇ ನಡೆಸಿ ಪ್ರತಿ ಮನೆಯ ಸದಸ್ಯರ ಸಂಖ್ಯೆಗೆ ಅಂದಾಜಿನ ಲೆಕ್ಕದಂತೆ ಮನೆಗಳನ್ನು ನೀಡಬೇಕು’ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
‘1982ರಲ್ಲಿಯೇ ಹಕ್ಕು ಪತ್ರ ಹಾಗೂ ಭೂಮಿ ನೀಡಿದ್ದರೂ ತಮ್ಮನ್ನು ಸ್ಥಳಾಂತರ ಮಾಡಲಿಲ್ಲ. ಸರ್ಕಾರ ಖಾಲಿ ಜಾಗೆಯಲ್ಲಿ ಆಶ್ರಯ ಮನೆ ನಿರ್ಮಿಸಿದೆ. ಕೂಡು ಕುಟುಂಬದಲ್ಲಿ ಇರುವ ಜನರ ಸಂಖ್ಯೆಗೆ ಅನುಗುಣವಾಗಿ ಮನೆ ಹಂಚಿಕೆ ಮಾಡಿಲ್ಲ. ಹಕ್ಕು ಪತ್ರ ಇರುವವರಿಗೆ ಬೇಕಾಬಿಟ್ಟಿಯಾಗಿ ಮನೆ ಹಂಚಿಕೆ ಮಾಡಲಾಗಿದೆ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಘಟಪ್ರಭಾ ನದಿ ಪ್ರವಾಹದಿಂದ ನಡುಗಡ್ಡೆಯಾದ ಹಳೆ ನಂದಗಾಂವ ಗ್ರಾಮದಿಂದ ಸದ್ಯ 52 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಇವರಿಗಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದರೂ ಯಾರೊಬ್ಬರು ಉಳಿದುಕೊಂಡಿಲ್ಲ. ಬದಲಿಗೆ, ಆಶ್ರಯ ಪ್ಲಾಟ್, ಸಂಬಂಧಿಕರ ಮನೆಗಳಲ್ಲಿ ಉಳಿದುಕೊಂಡಿದ್ದಾರೆ. ಆದರೆ, ಉಪಾಹಾರ, ಊಟಕ್ಕೆ ನಿರಾಶ್ರಿತರು ಈ ಕಾಳಜಿ ಕೇಂದ್ರಕ್ಕೆ ಬರುತ್ತಿದ್ದಾರೆ.
ಸರ್ಕಾರ ನಿರ್ಮಿಸಿರುವ ಆಸರೆ ಪ್ಲಾಟ್‌ನಲ್ಲಿ ಈಗ ವಾಸಿಸುತ್ತಿರುವ ಗ್ರಾಮಸ್ಥರು ನಿತ್ಯ ಶೌಚಕ್ಕೆ ಪರದಾಡುತ್ತಿದ್ದಾರೆ. ಮನೆಗಳಿಗೆ ಹೊಂದಿಕೊಂಡು ನಿರ್ಮಿಸಿರುವ ಶೌಚಾಲಯಗಳನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ಶೌಚಾಲಯದ ಬಾಗಿಲುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಸಮರ್ಪಕ ನೀರಿನ ಸೌಲಭ್ಯವೂ ಇಲ್ಲಿಲ್ಲ. ಮನೆಯ ಹೊರಗೆ ಜಾನುವಾರುಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ. ಸದ್ಯ ಹಳೇ ನಂದಗಾಂವ ತೊರೆದು ಇಲ್ಲಿಗೆ ಬಂದಿರುವ ಕೆಲ ನಿರಾಶ್ರಿತರು ಇಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.