ADVERTISEMENT

ಬಾಗಲಕೋಟೆ: ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷರ ಆಯ್ಕೆ ಚುರುಕು

ಯಾರಿಗೆ ಒಲಿಯಲಿದೆ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನ?

ಬಸವರಾಜ ಹವಾಲ್ದಾರ
Published 7 ಜುಲೈ 2025, 2:45 IST
Last Updated 7 ಜುಲೈ 2025, 2:45 IST
<div class="paragraphs"><p>ಕಾಂಗ್ರೆಸ್</p></div>

ಕಾಂಗ್ರೆಸ್

   

ಬಾಗಲಕೋಟೆ: ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರ ಆಯ್ಕೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯು ವೀಕ್ಷಕರ ನೇಮಕ ಮಾಡಲಾಗಿದೆ. ಇದರೊಂದಿಗೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ತೆರೆಮರೆಯ ಹಿಂದಿನ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. 

ಮಾಜಿ ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ, ಶರಣಗೌಡ ಬಯ್ಯಾಪುರ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೆ ಅಧಿಕೃತ ಚಾಲನೆ ದೊರೆತಿದೆ.

ADVERTISEMENT

ಈಗ ಅಧ್ಯಕ್ಷರಾಗಿರುವ ಎಸ್‌.ಜಿ. ನಂಜಯ್ಯನಮಠ ಐದೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿದ್ದಾರೆ. ವಿಧಾನಸಭೆ, ಲೋಕಸಭೆ ಚುನಾವಣೆ ಕಾಲದಲ್ಲಿ ಅಧ್ಯಕ್ಷರಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಐವರು ಶಾಸಕರು ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದೆ. 

ಪಕ್ಷದ ನಾಯಕರ ಆರ್ಥಿಕ ನೆರವಿನೊಂದಿಗೆ ನವನಗರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಚೇರಿ ನಿರ್ಮಾಣದ ಕಾರ್ಯ ಇವರ ಕಾಲದಲ್ಲಿ ಆಗಿದೆ. ಹುನಗುಂದ ಶಾಸಕರೊಂದಿಗೆ ಮುನಿಸು ಹೊರತುಪಡಿಸಿದರೆ, ಜಿಲ್ಲೆಯ ಉಳಿದ ಜನಪ್ರತಿನಿಧಿಗಳು, ನಾಯಕರೊಂದಿಗೆ ಉತ್ತಮ ಬಾಂಧವ್ಯವನ್ನೇ ಹೊಂದಿದ್ದಾರೆ. ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವುದು, ಬಿಡುವುದು ಪಕ್ಷದ ನಾಯಕರಿಗೆ ಬಿಟ್ಟ ವಿಷಯ ಎಂದು ನಂಜಯ್ಯನಮಠ ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಹೊಸ ಮುಖಕ್ಕೆ ಅವಕಾಶ ಸಿಗಲಿದೆಯಾ?: ಶಾಸಕ, ಮಂಡಳಿ ಅಧ್ಯಕ್ಷ, ಜಿಲ್ಲಾ ಘಟಕ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿರುವ ಎಸ್‌.ಜಿ. ನಂಜಯ್ಯನಮಠ ಅವರನ್ನು ಹೊರತುಪಡಿಸಿ, ಹೊಸಬರಿಗೆ ಕಾಂಗ್ರೆಸ್ ಮಣೆ ಹಾಕಲಿದೆಯಾ ಕಾದು ನೋಡಬೇಕಿದೆ.

ಯುವಕರು, ಮಹಿಳೆಯರು ಆಕಾಂಕ್ಷಿಗಳಾಗಿದ್ದಾರೆ. ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ನಾಗರಾಜ ಹದ್ಲಿ, ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ರಕ್ಷಿತಾ ಈಟಿ ಅವರ ಹೆಸರು ಕೇಳಿ ಬರುತ್ತಿದೆ. ಜೊತೆಗೆ ವೀಕ್ಷಕರು ಬರುವ ವೇಳೆಗೆ ಇನ್ನಷ್ಟು ಮಂದಿ ಆಕಾಂಕ್ಷಿಗಳು ಹುಟ್ಟಿಕೊಳ್ಳುವುದು ಖಚಿತ. 

ಜಾತಿ ಲೆಕ್ಕಾಚಾರ: ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಯ ವೇಳೆಗೆ ಜಾತಿ ಲೆಕ್ಕಾಚಾರವೂ ನಡೆಯಲಿದೆ. ಲಿಂಗಾಯತ, ಕುರುಬ, ರೆಡ್ಡಿ, ಮುಸ್ಲಿಂ, ಪರಿಶಿಷ್ಟ ಜಾತಿ, ಪಂಗಡದ ಲೆಕ್ಕಾಚಾರಗಳೂ ನಡೆಯಬಹುದು. 

ಶಾಸಕರ ಒಲವು ಯಾರಿಗೆ?

ಬಾಗಲಕೋಟೆ: ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಆಯ್ಕೆಯಲ್ಲಿ ಹಾಲಿ ಐವರು ಶಾಸಕರ ಅಭಿಪ್ರಾಯ ಮುಖ್ಯ ಪಾತ್ರ ವಹಿಸಲಿದೆ.

ಹಾಲಿ ಶಾಸಕರು, ಪರಾಜಿತ ಅಭ್ಯರ್ಥಿಗಳು, ಮಾಜಿ ಸಚಿವರು, ಶಾಸಕರು, ವಿವಿಧ ಘಟಕಗಳ ಅಧ್ಯಕ್ಷರೂ ಸೇರಿದಂತೆ ಹಲವು ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.

ಸಚಿವ ಆರ್.ಬಿ. ತಿಮ್ಮಾಪುರ, ಶಾಸಕರಾದ ಜೆ.ಟಿ. ಪಾಟೀಲ, ಎಚ್‌.ವೈ. ಮೇಟಿ, ವಿಜಯಾನಂದ ಕಾಶಪ್ಪನವರ, ಬಿ.ಬಿ. ಚಿಮ್ಮನಕಟ್ಟಿ ಅವರ ಒಮ್ಮತದ ನಿರ್ಣಯವಾದರೆ, ಅವರೇ ಸೂಚಿಸಿದ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಅವರ ನಡುವೆ ಭಿನ್ನ ಅಭಿಪ್ರಾಯ ವ್ಯಕ್ತವಾದರೆ, ಪಕ್ಷವೂ ಸರ್ವಸಮ್ಮತ ಅಭ್ಯರ್ಥಿ ಹುಡುಕಾಟಕ್ಕೆ ಮುಂದಾಗಲಿದೆ.

14 ರಂದು ವೀಕ್ಷಕರ ಭೇಟಿ

ಬಾಗಲಕೋಟೆ: ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲು ಕೆಪಿಸಿಸಿ ನೇಮಿಸಿರುವ ವೀಕ್ಷಕರ ತಂಡ ಜು.14 ರಂದು ಬೆಳಿಗ್ಗೆ 11ಕ್ಕೆ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದೆ.

ಈ ಸಂದರ್ಭದಲ್ಲಿ ಆಕಾಂಕ್ಷಿಗಳ, ಆಕಾಂಕ್ಷಿಗಳ ಬೆಂಬಲಿಗರ, ಹಾಲಿ, ಮಾಜಿ ಜನಪ್ರತಿನಿಧಿಗಳದ್ದು ಸೇರಿದಂತೆ ವಿವಿಧ ನಾಯಕರ ಅಭಿಪ್ರಾಯ ಸಂಗ್ರಹಿಸಲಿದೆ.

ಸಮಿತಿಯು ಕೆಪಿಸಿಸಿಗೆ ಅಂತಿಮವಾಗಿ ಮೂವರ ಹೆಸರು ಶಿಫಾರಸು ಮಾಡಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.