ADVERTISEMENT

ಜಮಖಂಡಿ: ವಂತಿಗೆಯಿಂದ ಸರ್ಕಾರಿ ಶಾಲೆ ಅಭಿವೃದ್ಧಿ

ಮುಳುಗಡೆ ಗ್ರಾಮದ ಶಾಲೆಗೆ ಎಸ್‌ಡಿಎಂಸಿ, ಗ್ರಾಮಸ್ಥರ ನೆರವು

ಆರ್.ಎಸ್.ಹೊನಗೌಡ
Published 17 ಡಿಸೆಂಬರ್ 2024, 4:22 IST
Last Updated 17 ಡಿಸೆಂಬರ್ 2024, 4:22 IST
ಕಂಕಣವಾಡಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ
ಕಂಕಣವಾಡಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ   

ಜಮಖಂಡಿ: ಕೃಷ್ಣಾ ನದಿಗೆ ಹತ್ತಿಕೊಂಡಿರುವ ಮುಳುಗಡೆ ಗ್ರಾಮ ಕಂಕಣವಾಡಿಯ ಸರ್ಕಾರಿ ಪ್ರಾಥಮಿಕ ಶಾಲೆ ಹಲವು ಬಾರಿ ಕೃಷ್ಣೆಯ ಪ್ರವಾಹದಲ್ಲಿ ಮುಳಗಿ ಬೀಳುವ ಹಂತ ತಲುಪಿತ್ತು. ಕಟ್ಟಡ ಶಿಥಿಲಗೊಂಡಿದ್ದು, ಮಳೆ ಬಂದರೆ ಶಾಲೆ ಕೊಠಡಿಗಳು ಸೋರುತ್ತಿದ್ದವು. ಎಸ್‌ಡಿಎಂಸಿ ಸದಸ್ಯರ ಹಾಗೂ ಗ್ರಾಮದ ಕೆಲವರಿಂದ ವಂತಿಗೆ ಸಂಗ್ರಹಿಸಿ ಶಾಲೆಗೆ ಹೊಸ ರೂ‍ಪ ಕೊಟ್ಟಿದ್ದಾರೆ.

ತಾಲ್ಲೂಕಿನ ಕಂಕಣವಾಡಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ 116 ಬಾಲಕಿಯರು, 82 ಬಾಲಕರು ಸೇರಿ 198 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಂಬತ್ತು ಜನ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಎಸ್‌ಡಿಎಂಸಿ ಅಧ್ಯಕ್ಷ ಈಶ್ವರ ಕರಬಸನ್ನವರ ನೇತೃತ್ವದಲ್ಲಿ ಒಂದು ವರ್ಷದಲ್ಲಿ ಶಾಲೆಯ ಚಿತ್ರಣವನ್ನು ಬದಲಾಯಿಸಿದ್ದಾರೆ.

ಸರ್ಕಾರದ ಅನುದಾನವಿಲ್ಲದೇ ಬಳಲುತ್ತಿದ್ದ ಈ ಸರ್ಕಾರಿ ಶಾಲೆಯ ಕೊಠಡಿಗಳಲ್ಲಿ ಚಾವಣಿ ಹಂಚು ಮುರಿದು ಸೋರುತ್ತಿದ್ದವು. ಹಂಚುಗಳನ್ನು ತೆಗೆದು ಗೋಡೆಯನ್ನು ಎತ್ತರಿಸಿಕೊಂಡು ಎಲ್ಲ ಕೊಠಡಿಗಳ ಮೇಲೆ ಪತ್ರಾಸ್ ಸೀಟ್‌ಗಳನ್ನು ಹಾಕಿದ್ದಾರೆ. ಮುರಿದು ಹೋಗಿದ್ದ ಕಿಟಕಿ, ಬಾಗಿಲುಗಳನ್ನು ತೆಗೆದು ಬದಲಾಯಿಸಿದ್ದಾರೆ, ಅಲ್ಲಲ್ಲಿ ಸೀಳಿರುವ ಗೋಡೆಗೆ ಗಿಲಾವ್ ಮಾಡಿ, ಬಣ್ಣ ಹಚ್ಚಲಾಗಿದೆ. ಮಕ್ಕಳನ್ನು ಆಕರ್ಷಿಸುವ ಗೋಡೆ ಬರಹ, ಚಿತ್ರಗಳನ್ನು ಬಿಡಿಸಲಾಗಿದೆ.

ADVERTISEMENT

ಕೊಠಡಿಗಳಲ್ಲಿ ಮಕ್ಕಳು ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇರಲಿಲ್ಲ, ಮೊದಲು ಹಾಕಿರುವ ಟೈಲ್ಸ್ ಕಿತ್ತು ಹೋಗಿದ್ದವು, ಅವುಗಳನ್ನು ತೆಗೆದು ಹೊಸ ಟೈಲ್ಸ್, ಹಾಗೂ ಆವರಣದಲ್ಲಿ ಸಿಮೆಂಟ್‌ನಿಂದ ಮಾಡಿರುವ ಬ್ರಿಕ್ಸ್‌ಗಳನ್ನು ಹಾಕಿದ್ದಾರೆ.

ಶಾಲೆಯ ಪ್ರತಿ ಕೊಠಡಿ ಹಾಗೂ ಆಟದ ಮೈದಾನ ಸೇರಿ ಒಟ್ಟು 12 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. 5ನೇ ತರಗತಿಯಿಂದ 8ನೇ ತರಗತಿವರೆಗೆ ನಾಲ್ಕು ಸ್ಮಾರ್ಟ್ ಕ್ಲಾಸ್ ತರಗತಿ ನಿರ್ಮಿಸಲಾಗಿದೆ.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸಮವಸ್ತ್ರ, ಆಟದ ಮೈದಾನದ ದುರಸ್ತಿ, ಶೌಚಾಲಯ ದುರಸ್ತಿ, ಮಕ್ಕಳಿಗೆ ಊಟಕ್ಕೆ ತಟ್ಟೆಗಳ ವ್ಯವಸ್ಥೆ, ಕೈ ತೊಳೆದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

‘ಗ್ರಾಮ ಪಂಚಾಯಿತಿಯಿಂದ ಮಕ್ಕಳಿಗೆ ಶೌಚಾಲಯ ಹಾಗೂ ತಡೆಗೋಡೆ ಅಗತ್ಯ ಇದೆ. ಈ ಬಗ್ಗೆ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವಾದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಪಂಚಾಯಿತಿ ಸಿಇಒ ಮುತುವರ್ಜಿ ವಹಿಸಿ ಮಾಡಿಕೊಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮಸ್ಥರ ಸಹಾಯದಿಂದ ಶಾಲೆ ಅಭಿವೃದ್ಧಿ ಹೊಂದಿದೆ. ಆಟದ ಮೈದಾನ ಮಾಡಿರುವುದರಿಂದ ಜಿಲ್ಲಾ ಮತ್ತು ರಾಜ್ಯಮಟ್ಟದವರೆಗೆ ವಿದ್ಯಾರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳನ್ನು ಎಲ್ಲ ರೀತಿಯಿಂದ ತಯಾರಿ ಮಾಡಲಾಗುವುದು ಮುಖ್ಯಶಿಕ್ಷಕ ಎಸ್.ಎಸ್ ಉಪ್ಪಲದಿನ್ನಿ.

ಕಂಕಣವಾಡಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ
ಗ್ರಾಮಸ್ಥರು ಹಾಗೂ ಶಿಕ್ಷಕರ ಸಹಕಾರದಿಂದ ₹4ಲಕ್ಷದಿಂದ ರಿಂದ ₹5 ಲಕ್ಷದವರೆಗೆ ಹಣ ಸಂಗ್ರಹಿಸಿ ಬೀಳುವ ಹಂತಕ್ಕೆ ಬಂದಿದ್ದ ಶಾಲೆಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಇನ್ನೂ ಶೌಚಾಲಯ 2 ಕೊಠಡಿಗಳ ಅಗತ್ಯವಿದೆ
ಈಶ್ವರ ಕರಬಸನ್ನವರ ಅಧ್ಯಕ್ಷ ಎಸ್‌ಡಿಎಂಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.