ADVERTISEMENT

Muharram | ಬಾಗಲಕೋಟೆ: ಪಂಜಾ, ಡೋಲಿಗಳ ಮೆರವಣಿಗೆ

ಬಾಗಲಕೋಟೆ ಜಿಲ್ಲೆಯಾದ್ಯಂತ ಭಾವೈಕ್ಯತೆಯ ಪ್ರತೀಕವಾಗಿ ಮೊಹರಂ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 2:52 IST
Last Updated 7 ಜುಲೈ 2025, 2:52 IST
ಗುಳೇದಗುಡ್ಡ ಪಟ್ಟಣದಲ್ಲಿ ಭಾನುವಾರ ಮೊಹರಂ ಹಬ್ಬ ಸಂಭ್ರದಿಂದ ನಡೆಯಿತು
ಗುಳೇದಗುಡ್ಡ ಪಟ್ಟಣದಲ್ಲಿ ಭಾನುವಾರ ಮೊಹರಂ ಹಬ್ಬ ಸಂಭ್ರದಿಂದ ನಡೆಯಿತು   

ಬಾಗಲಕೋಟೆ: ಜಿಲ್ಲೆಯಾದ್ಯಂತ ಮೊಹರಂ ಹಬ್ಬವನ್ನು ಹಿಂದು ಹಾಗೂ ಮುಸಲ್ಮಾನ ಧರ್ಮೀಯರು ಸಂಭ್ರಮದಿಂದ ಆಚರಿಸಿದರು.

ಗುಳೇದಗುಡ್ಡ ವರದಿ: ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪವಿತ್ರ ಮೊಹರಂ ಕೊನೆ ದಿನವಾದ ಭಾನುವಾರ ಅತ್ಯಂತ ಭಕ್ತಿಭಾವದಿಂದ ಹಿಂದೂ-ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಕಳೆ ಕಟ್ಟುವಂತೆ ಆಚರಿಸಿದರು. ಪಟ್ಟಣದ ವಿವಿಧ ಕಡೆ ಹಾಗೂ ತಾಲ್ಲೂಕಿನ ಗ್ರಾಮಗಳಲ್ಲಿ ಭಾವೈಕ್ಯತೆಯ ಮೊಹರಂ ಹಬ್ಬದ ಆಚರಣೆ ವಿಶೇಷ ಮೆರಗು ಪಡೆದುಕೊಂಡಿತು.

ಪುರಸಭೆ ಎದುರಿನ ಸಾರ್ವಜನಿಕ ಕಟ್ಟೆಯ ಮೇಲೆ ಡೋಲಿಗಳ ವಿರಾಜಮಾನಗೊಂಡು ಅಲ್ಲಿ ಅಲೇ ದೇವರುಗಳು ಸಮಾಗಮಗೊಂಡವು. ಡೊಲಿಗಳ ಮುಂದೆ ಮಕ್ಕಳು, ಮಹಿಳೆಯರು ಸಕ್ಕರೆ ಹಂಚಿ, ತಮ್ಮ ಭಕ್ತ ಭಾವ ಮೆರೆದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಡೋಲಿಗಳು, ಅಲೆ ದೇವರುಗಳು ಈ ಪ್ರಮುಖ ಸ್ಥಳದಲ್ಲಿ ಸಮಾವೇಶಗೊಂಡವು.

ADVERTISEMENT

ಹುಲಿಯಾಟ, ಅಳ್ಳೊಳಿ ಬಾವಾ, ಯುವಕರ ಹೆಜ್ಜೆ ಕುಣಿತ, ಹಲಿಗೆ ವಾದನ, ಕೋಲಾಟಗಳಂತಹ ಪಾರಂಪರಿಕ ಆಚರಣೆಗಳನ್ನು ನೋಡುಗರು ಕಣ್ಣು ತುಂಬಿಕೊಂಡರು. ನಾಲ್ಕೂ ದಿಕ್ಕುಗಳ ವಿವಿಧ ಸ್ಥಳಗಳಿಂದ ಬಂದಿದ್ದ ಅಲೆದೇವರ ಪರಸ್ಪರ ಭೇಟಿ ಭಕ್ತರಲ್ಲಿ ಭಕ್ತಿಯ ಅಲೆಯನ್ನು ಮೂಡಿಸಿತು.

ತಾಲ್ಲೂಕಿನ ಹಾನಾಪೂರ ಎಲ್.ಟಿ. ಸಬ್ಬಲಹುಣಸಿ,ನಾಗರಾಳ ಗ್ರಾಮದ ಯಮನೂರ ದರ್ಗಾದಲ್ಲಿ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಆಚರಿಸಿ ವಿಶೇಷ ಕಳೆ ತಂದರು. ಡೋಲಿ ಹಾಗೂ ಆಲೆ ದೇವರ ಮೆರವಣಿಗೆಯಲ್ಲಿ ಪರಸ್ಪರ ಭೇಟಿ ಕೊಡುವ ದೃಶ್ಯ ನೋಡುವಂತಿತ್ತು. ದರ್ಗಾದಲ್ಲಿ ಹೇಳಿಕೆಗಳೂ ಸಂಪ್ರದಾಯಬದ್ಧವಾಗಿ ನಡೆದವು. ಉತ್ತಮ ಮಳೆಬೆಳೆ ಆಗುವ ಹೇಳಿಕೆ ಕೂಡ ನಡೆಯಿತು. ಹೆಜ್ಜೆ ಕುಣಿತ ವಿಶಿಷ್ಟವಾಗಿ ನಡೆಯಿತು.

ಭಕ್ತಿ, ಶ್ರದ್ಧೆಯ ಮೊಹರಂ ಹಬ್ಬ

ರಬಕವಿ ಬನಹಟ್ಟಿ: ಭಾವೈಕ್ಯತೆಯ ಸಂಕೇತವಾಗಿರುವ ಮೊಹರಂ ಹಬ್ಬವನ್ನು ನಗರದಲ್ಲಿ ಭಾನುವಾರ ಶ್ರದ್ಧೆ ಹಾಗೂ ಭಕ್ತಿಯಿಂದ ಅಚರಿಸಲಾಯಿತು.

ಸ್ಥಳೀಯ ಮಂಗಳವಾರ ಪೇಟೆಯಲ್ಲಿ ಬೆಳಿಗ್ಗೆ ಹೂ, ಮಾಲೆಗಳಿಂದ ಶೃಂಗರಿಸಲಾದ ಮೊಹರಂ ಹಬ್ಬದ ಡೋಲಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಡೋಲಿಗಳನ್ನು ಪ್ರತಿಷ್ಠಾಪಿಸಿದ ನಂತರ ಮುಸ್ಲಿಂ ಮತ್ತು ಹಿಂದೂ ಬಾಂಧವರು ಪೂಜೆ ಸಲ್ಲಿಸಿ, ಸಕ್ಕರೆ, ಬೆಲ್ಲ ಮತ್ತು ಮನೆಗಳಲ್ಲಿ ತಯಾರು ಮಾಡಿದ ಸಿಹಿ ಪದಾರ್ಥದ ನೈವೇದ್ಯ ಸಲ್ಲಿಸಿದರು.

ನಂತರ ಎರಡು ಗಂಟೆಗಳ ಕಾಲ ರಿವಾಯತ್ ಪದಗಳ ಪ್ರದರ್ಶನ ನಡೆಯಿತು. ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ರಿವಾಯತ್ ಪದಗಳು ಸೇರಿದ್ದ ನೂರಾರು ಜನರ ಗಮನ ಸೆಳೆದವು.

ರಫಿಕ್ ಹನಗಂಡಿ, ಸಲಿಂ ಹನಗಂಡಿ, ಬಾಬುರಾವ ಹನಗಂಡಿ, ಸಲಿಂ ಮುಜಾವರ, ಸಾಧಿಕ ಮುಜಾವರ, ಹನೀಫ್ ಹನಗಂಡಿ ರಿವಾಯತ ಪದಗಳನ್ನು ಹಾಡಿದರು. ಚಿಕ್ಕ ಮಕ್ಕಳು ಕೂಡಾ ರಿವಾಯತ್ ಪದಗಳನ್ನು ಹಾಡಿ ಗಮನ ಸೆಳೆದರು.

ಬುಡನ್ ಜಮಾದಾರ, ಅಬ್ದುಲ್ ಶೇಖ ಜಮಾದಾರ, ದಾವಲಸಾಬ್ ಜಮಾದಾರ, ಮೌಲಾಸಾಬ್ ಜಮಾದಾರ, ಅಬೀಬ್ ಹನಗಂಡಿ, ಇರ್ಷಾದ ಹನಗಂಡಿ, ಜುಬೇರಾ ತಿಕೋಟಾ, ಮುರಾದಸಾಬ ಜಮಖಂಡಿ, ಸೇರಿದಂತೆ ಮಕ್ಕಳು ಮತ್ತು ಮಹಿಳೆಯರು ಸೇರಿದ್ದರು.

ತ್ಯಾಗ-ಬಲಿದಾನದ ಮೊಹರಂ ಆಚರಣೆ

ಮಹಾಲಿಂಗಪುರ: ತ್ಯಾಗ-ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಸ್ಲಿಮರು ಭಾನುವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.

ಇಲ್ಲಿನ ಜವಳಿ ಬಜಾರ್, ಡಬಲ್ ರಸ್ತೆ, ನಡುಚೌಕಿ, ಗಡಾದ ಓಣಿ, ಬುದ್ನಿ ಪಿಡಿ, ಪೆಂಡಾರಿ ಓಣಿ, ವಿಜಯಲಕ್ಷ್ಮಿ ನಗರದಲ್ಲಿರುವ ದರ್ಗಾಗಳಲ್ಲಿನ ದೇವರ ಸನ್ನಿಧಿಯಲ್ಲಿ ಹೂವಿನ ಅಲಂಕಾರ, ವಿಶೇಷ ಪೂಜೆ ನೆರವೇರಿಸಲಾಯಿತು. ದರ್ಗಾ ಆವರಣದಲ್ಲಿ ನಿರ್ಮಿಸಲಾಗಿದ್ದ ಅಗ್ನಿಗುಂಡಿಗೆ ಸೌದೆ, ಸಕ್ಕರೆ, ಉಪ್ಪು, ಕರ್ಪೂರ, ಮೆಣಸು ಹಾಗೂ ಊದಿನಕಡ್ಡಿಗಳನ್ನು ಸಮರ್ಪಿಸಿ, ಭಕ್ತರು ಹರಕೆಗಳನ್ನು ತೀರಿಸಿದರು.

ಪ್ರಮುಖ ಬೀದಿಗಳಲ್ಲಿ ಡೋಲಿಗಳ ಭವ್ಯ ಮೆರವಣಿಗೆ ನಡೆಯಿತು. ಭಕ್ತರು ಡೋಲಿಗಳಿಗೆ ಬೆಂಡು, ಬತಾಸು ಹಾರಿಸಿ, ಊದು ನೀಡಿದರು. ಯುವಕರು, ಫಕೀರರು ಹೈಲಾ ದುಯಿಲಾ ಎಂದು ಪಂಜಾವನ್ನು ಹಿಡಿದು ಓಡಾಡಿದರು.

ಪಂಜಾಗಳನ್ನು ಭಕ್ತರ ಮನೆಗೆ ಭೇಟಿ ಮಾಡಿಸಲಾಯಿತು. ಪಟ್ಟಣದ ವಿವಿಧೆಡೆಯ ಪಂಜಾಗಳು ಹಾಗೂ ಡೋಲಿಗಳು ನಡಚೌಕಿಯಲ್ಲಿ ಸಮಾವೇಶ ಗೊಂಡವು. ಅಲ್ಲಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದವು. ಅಲ್ಲಿ ಪಂಜಾಗಳ ಪೂಜೆಯನ್ನು ಮಹಾಲಿಂಗೇಶ್ವರ ಸ್ವಾಮೀಜಿ ನೆರವೇರಿಸಿದರು. ನಂತರ ಸ್ವಸ್ಥಾನಕ್ಕೆ ಪಂಜಾಗಳು ಹಾಗೂ ಡೋಲಿಗಳು ಮರಳಿದವು. ಸಂಜೆ ಮತ್ತೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಪಂಜಾಗಳು ಹಾಗೂ ಡೋಲಿಗಳನ್ನು ಬಾವಿಯಲ್ಲಿ ವಿಸರ್ಜನೆ ಮಾಡಲಾಯಿತು.

ಯುವಕರ ಹೆಜ್ಜೆಯಲ್ಲಿ ಅರಳಿದ ರಥ

ಬಾದಾಮಿ: ಪಟ್ಟಣದ ಹೊರವಲಯದ ತಟಕೋಟೆ ಗ್ರಾಮದ ಯುವಕರು ಹಲಿಗೆಯ ತಾಳ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಕುಣಿಯುತ್ತ ಲಾಲಸಾಬ್ ದೇವರಿಗೆ ರಥವನ್ನು ನಿರ್ಮಿಸಿ ಭಾವೈಕ್ಯತೆಯನ್ನು ಮೆರೆದರು.

ಮೊಹರಂ ಆಚರಣೆಯ ಕೊನೆಯ ದಿನ ಇಲ್ಲಿನ ಮಾರುತಿ ದೇವಾಲಯದ ಆವರಣದಲ್ಲಿ ತಟಕೋಟೆ ಗ್ರಾಮದ ಯಾದವ ಯುವಕ ಸಂಘದ ಯುವಕರು ಸಂಭ್ರಮದಿಂದ ಕೈಯಲ್ಲಿ ಉದ್ದನೆಯ ಕಳಶಕ್ಕೆ ಕಟ್ಟಿದ ಬಟ್ಟೆ ಹಿಡಿದುಕೊಂಡು ಹೆಜ್ಜೆ ಹಾಕುತ್ತ ಭಾನುವಾರ ರಥವನ್ನು ಕಟ್ಟಿದರು.

ಮೊದಲು ಕೆಳಗೆ ರಥಕ್ಕೆ ಎರಡು ಚಕ್ರ. ಚಕ್ರದ ಮೇಲೆ ಬಟ್ಟೆಯಿಂದ ಐದು ಕಟ್ಟು ಕಟ್ಟಿದ ನಂತರ ಮೇಲೆ ಕಳಶದ ಮೂಲಕ ತೇರನ್ನು ನಿರ್ಮಿಸಿ ಪೂಜೆ ಸಲ್ಲಿಸಿದರು. ಫರಾಳದ ಪ್ರಸಾದವನ್ನು ವಿತರಿಸುವರು. ಹೆಜ್ಜೆಯ ಮೂಲಕವೇ ರಥವನ್ನು ಬಿಚ್ಚುವರು.

ಯುವಕರು ರಥ ಕಟ್ಟುವುದನ್ನು ವೀಕ್ಷಿಸಲು ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಯುವಕರು ಹೆಜ್ಜೆಯ ಮೂಲಕ ರಥ ಕಟ್ಟುವ ಕಲೆಯ ಬಗ್ಗೆ ಕುತೂಹಲದಿಂದ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

‘ ಪ್ರತಿವರ್ಷ ಮೊಹರಂ ಕೊನೆಯ ದಿನ ಗ್ರಾಮದ ಯುವಕರು ಹಜ್ಜೆ ಹಾಕುತ್ತ ಲಾಲಸಾಬ್ ದೇವರಿಗೆ ರಥವನ್ನು ಕಟ್ಟುವ ಸಂಪ್ರದಾಯ ಮೂರು ತಲೆಮಾರಿನಿಂದ ಬಂದಿದೆ. ಹಿಂದೂ-ಮುಸ್ಲಿಂ ಸೌಹಾರ್ದದ ಸಂಕೇತವಾಗಿದೆ ’ ಎಂದು ಗ್ರಾಮದ ಹಿರಿಯ ರಂಗಪ್ಪ ಗೊನ್ನನಾಯ್ಕರ್ ಹೇಳಿದರು.

ಹನುಮಂತಪ್ಪ ಗೊನ್ನನಾಯ್ಕರ್, ಕಾಶೀಮಸಾಬ್ ಮುಲ್ಲಾ, ಸಕ್ರಪ್ಪ ಮುತ್ತಲಗೇರಿ, ಈರಪ್ಪ ಗೊನ್ನನಾಯ್ಕರ್, ಸುರೇಶ ಗೊನ್ನನಾಯ್ಕರ್ ಮತ್ತು ಯುವಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.