ADVERTISEMENT

‘ನೋಂದಣಿಗೆ 18 ಕೊನೆ ದಿನ’

ಸುದ್ದಿಗೋಷ್ಠಿಯಲ್ಲಿ ನ್ಯಾ. ಕಲ್ಪನಾ ಕುಲಕರ್ಣಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 14:47 IST
Last Updated 1 ಸೆಪ್ಟೆಂಬರ್ 2020, 14:47 IST
ಕಲ್ಪನಾ ಪಾಟೀಲ
ಕಲ್ಪನಾ ಪಾಟೀಲ   

ಬಾಗಲಕೋಟೆ: ‘ಇಲ್ಲಿನ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಸೆಪ್ಟೆಂ ಬರ್ 19 ರಂದು ಮೆಗಾ ಇ-ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕಲ್ಪನಾ ಕುಲಕರ್ಣಿ ತಿಳಿಸಿದರು.

ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್-19 ಹಿನ್ನೆಲೆಯಲ್ಲಿ ಮೆಗಾ ಇ–ಲೋಕ್‌ ಅದಾಲತ್ ಹಮ್ಮಿಕೊಳ್ಳಲಾಗಿದೆ. ರಾಜೀ–ಸಂಧಾನದ ಪ್ರಕರಣಗಳ ನೋಂದಣಿಗೆ ಸೆಪ್ಟೆಂಬರ್ 18 ಕೊನೆಯ ದಿನ’ ಎಂದು ತಿಳಿಸಿದರು.

‘ಬಾಗಲಕೋಟೆ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಇನ್ನೂ ಇತ್ಯರ್ಥವಾಗದ ಒಟ್ಟು 42,097 ಪ್ರಕರಣಗಳಿವೆ. ಇದರಲ್ಲಿ 24,245 ಸಿವಿಲ್ ಹಾಗೂ 17,852 ಕ್ರಿಮಿನಲ್ ಪ್ರಕರಣಗಳಿದ್ದು, ಇವುಗಳಲ್ಲಿ ರಾಜಿ–ಸಂಧಾನದ ಪ್ರಕರಣಗಳನ್ನು ಮೆಗಾ ಇ-ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 1,815 ಪ್ರಕರಣಗಳನ್ನು ರಾಜೀಗಾಗಿ ಗುರುತಿಸಲಾಗಿದೆ. ಇನ್ನು ಸೆಪ್ಟೆಂಬರ್ 18 ರವರೆಗೆ ಗುರುತಿಸಲು ಅವಕಾಶವಿದೆ’ ಎಂದರು.

ADVERTISEMENT

‘ಮೆಗಾ ಇ-ಲೋಕ್ ಅದಾಲತ್‌ನಲ್ಲಿ ಮೋಟಾರು ವಾಹನ ಅಪಘಾತ ಪ್ರಕರಣ, ವಿಮಾ ಕಂಪನಿಗಳ ಪ್ರಕರಣ, ಕೌಟುಂಬಿಕ ಕಲಹ, ಕಾರ್ಮಿಕ ಸಂಬಂಧಿತ ವಿವಾದ, ಬ್ಯಾಂಕ್ ವಿಷಯ, ಚೆಕ್ ಬೌನ್ಸ್, ಹಣ ವಸೂಲಾತಿ ಪ್ರಕರಣ, ಕ್ರಿಮಿನಲ್ ಅಪರಾಧಗಳು, ಭೂಸ್ವಾಧೀನ, ವಿದ್ಯುತ್, ಎಂ.ಎಂ.ಡಿ.ಆರ್ ಕಾಯ್ದೆ ಸಿವಿಲ್ ಪ್ರಕರಣ. ಜನನ ಮತ್ತು ಮರಣ ನೋಂದಣಿ, ಪಿಸಿ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ’ ಎಂದರು.

‘ಕಕ್ಷಿದಾರರು ಹಾಗೂ ವಕೀಲರು ನ್ಯಾಯಾಲಯಕ್ಕೆ ಹಾಜರಾಗದೇ ವಿಡಿಯೊ ಸಂವಾದದ ಮೂಲಕ ಸಂಪರ್ಕಿಸಿ ಸಂಧಾನ ನಡೆಸಲಾಗುತ್ತಿದೆ. ತಾವಿದ್ದ ಸ್ಥಳ, ಮನೆ, ವಕೀಲರ ಕಚೇರಿಯಲ್ಲಿ ವಿಡಿಯೊ ಸಂವಾದದ ಮೂಲಕ ಇ-ಮೆಗಾ ಅದಾಲತ್‌ನಲ್ಲಿ ಭಾಗವಹಿಸಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ’ ಎಂದು ಹೇಳಿದರು.

‘ಹೆಚ್ಚಿನ ಮಾಹಿತಿಗಾಗಿ ಬಾಗಲಕೋಟೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಇ–ಮೇಲ್ dlsabagalkot@gmail.com ಅಥವಾ ದೂರವಾಣಿ ಸಂಖ್ಯೆ: 08354-235876 ಸಂಪರ್ಕಿಸಬಹುದಾಗಿದೆ’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.