ಬಾಗಲಕೋಟೆ: ‘ಭ್ರಷ್ಟಾಚಾರ ದೇಶದ ಜ್ವಲಂತ ಸಮಸ್ಯೆಗಳಲ್ಲಿ ಒಂದಾಗಿದ್ದು, ಇದರ ತಡೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್.ವಿ.ವಿಜಯಬಾಗಲಕೋಟೆ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಕರ್ನಾಟಕ ಲೋಕಾಯುಕ್ತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅ.28 ರಿಂದ ನ.3ರ ವರೆಗೆ ಹಮ್ಮಿಕೊಂಡಿರುವ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸರಿಯಾದ ಸಾಕ್ಷ್ಯಾಧಾರದ ಕೊರತೆ ಇದ್ದಲ್ಲಿ ತಿರ್ಮಾನ ಕೈಗೊಳ್ಳಲು ವಿಳಂಬವಾಗುತ್ತದೆ. ಆ ದಿಸೆಯಲ್ಲಿ ಪ್ರಥಮದಲ್ಲಿಯೇ ಭ್ರಷ್ಟಾಚಾರ ಮಾಡದಂತೆ, ಆಮಿಷಕ್ಕೆ ಒಳಗಾಗದಂತೆ ಜಾಗೃತರಾಗಿ ಕಾರ್ಯ ನಿರ್ವಹಿಸುವುದು ಸುರಕ್ಷಿತ ಮಾರ್ಗವಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ, ‘ಯಾವುದೇ ಸರ್ಕಾರಿ ಅಧಿಕಾರಿಗಳು ಜನ ಸೇವಕರು ಎಂಬುದನ್ನು ಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯವಾಗಿದ್ದು, ಭ್ರಷ್ಟಾಚಾರ ಎಂಬುದು ಅಪರಾಧ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಕಚೇರಿಗೆ ಬರುವ ಸಾರ್ವಜನಿಕರು ತಮ್ಮ ಕಾರ್ಯ ಮಾಡಿಸಿಕೊಳ್ಳುವುದಕ್ಕೆ ಹಣದ ಆಮಿಷ ಒಡ್ಡುತ್ತಾರೆ. ಭ್ರಷ್ಟಾಚಾರ ಮೊದಲು ಉತ್ತಮ ಎನಿಸಿದರೂ ಕೊನೆಗೆ ಅದು ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು’ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಮಾತನಾಡಿ, ‘ಸಮಾಜದ ಹಿತದೃಷ್ಟಿ ಹಾಗೂ ದೇಶದ ಅಭಿವೃದ್ಧಿಗಾಗಿ ಪ್ರಾಮಾಣಿಕರಾಗಿ ಕಾರ್ಯ ನಿರ್ವಹಿಸುವುದು ಪ್ರತಿಯೊಬ್ಬ ನೌಕರರ ಕರ್ತವ್ಯವಾಗಿದೆ. ಯೋಜನೆಗಳ ಅನುಷ್ಠಾನ ಮಾಡುವಲ್ಲಿ ಆ ಯೋಜನೆಗೆ ಸಂಬಂಧಿಸಿದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಸೂಚಿಸಿದರು.
ಕರ್ನಾಟಕ ಲೋಕಾಯುಕ್ತ ಇಲಾಖೆಯ ಪೊಲೀಸ್ ಅಧೀಕ್ಷಕ ಸತೀಶ ಚಿಟಗುಬ್ಬಿ ಮಾತನಾಡಿ, ‘ಸೇವೆಯಲ್ಲಿ ಪಾರದರ್ಶಕತೆ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸೇವೆ ನೀಡಲು ಸಾಧ್ಯ. ಸರ್ಕಾರದ ನಿಯಮಗಳನ್ವಯ ಇತಿ–ಮಿತಿಯಲ್ಲಿ ಕೆಲಸ ಮಾಡಬೇಕು’ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಉಪಸ್ಥಿತರಿದ್ದರು.
ಭ್ರಷ್ಟಾಚಾರ ಜ್ವಲಂತ ಸಮಸ್ಯೆ ಪ್ರತಿಯೊಬ್ಬ ಅಧಿಕಾರಿ ಜನಸೇವಕ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.